ಉಡುಪಿ (ಮೇ, 27): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಮೇ 16 ರಿಂದ 25 ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ 10 ದಿನಗಳ “ಆನ್ಲೈನ್ ಬೇಸಿಗೆ ಶಿಬಿರ” ಸಂಪನ್ನಗೊಂಡಿದೆ.
ಈ ಹತ್ತು ದಿನಗಳ ಶಿಬಿರದಲ್ಲಿ ಕಾಲೇಜಿನ 9 ತಂಡಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ವಿಂಗಡನೆ ಮಾಡಿ ಅವರಿಗೆ ವಿವಿಧ ರೀತಿಯ ತರಬೇತಿ ಮತ್ತು ಚಟುವಟಿಕೆಗಳನ್ನು ಆಯೋಜಿಸಿದ್ದರು. ಈ ಶಿಬಿರವು ಪ್ರತಿದಿನ ಸಂಜೆ 4 ರಿಂದ 6 ಗಂಟೆಯ ತನಕ ನಡೆದಿದ್ದು ಇದರಲ್ಲಿ ಯೋಗ, ಸಂಸ್ಕೃತ, ಕಸದಿಂದ ರಸ, ವಿಜ್ಞಾನದ ಪ್ರಯೋಗಗಳು, ಕ್ರಾಫ್ಟ್, ಕಥೆ ಮತ್ತು ವ್ಯಕ್ತಿತ್ವ ವಿಕಸನ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಉಡುಪಿ ಜಿಲ್ಲೆಯ 80 ವಿದ್ಯಾರ್ಥಿಗಳು ಹಾಗೂ ಕರ್ನಾಟಕದ ಇತರ ಜಿಲ್ಲೆಗಳಿಂದ 50 ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದಿರುತ್ತಾರೆ.
ಈ ವಿನೂತನ ರೀತಿಯ ಶಿಬಿರವನ್ನು ಆಯೋಜಿಸಿದ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶಕರನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದ ಶ್ಲಾಘಿಸಿದ್ದಾರೆ.