ಜ್ಯೋತಿಷ್ಯದ ಕುರಿತಾದ ಹುಚ್ಚು ಕುತೂಹಲ ಯಾರಿಗಿಲ್ಲಾ ಹೇಳಿ.! ಕೆಲವರು ಅಪಾರವಾಗಿ ನಂಬಿದರೆ, ಇನ್ನೂ ಕೆಲವರು ಅದೊಂದು ಮೂಡನಂಬಿಕೆ ಅಂದುಕೊಂಡು ಸಮ್ಮನಾಗುತ್ತಾರೆ.ಇನ್ನೂ ಕೆಲವರು ಕುತೂಹಲಕ್ಕಾಗಿ ಆಗಾಗ ಜ್ಯೋತಿಷಿಯ ಬಳಿ ಹೋಗುವುದುಂಟು !.
ಜ್ಯೋತಿಷ್ಯ ಶಾಸ್ತ್ರಕ್ಕೆ ನಮ್ಮ ದೇಶದಲ್ಲಿ ಅದರದ್ದೆ ಆದ ಪೌರಾಣಿಕ ಮಹತ್ವ ಇದೆ.ಆದರೆ ಜ್ಯೋತಿಷ್ಯವನ್ನೇ ಅಸ್ತ್ರವಾಗಿರಿಸಿಕೊಂಡು ಜನರನ್ನು ಮೋಸಮಾಡುವವರ ನಡುವೆ ಪ್ರಾಮಾಣಿಕತೆಯಿಂದ ಜ್ಯೋತಿಷ್ಯ ಹೇಳುವವರು ಮೂಲೆಗುಂಪಾಗಿರುವುದು ವಿಪರ್ಯಾಸವೇ ಸರಿ.
ಅದೇನೇ ಇರಲಿ ! ಆ ನಾಲ್ಕು ಜನ ಯುವಕರು ಜ್ಯೋತಿಷ್ಯದ ಕುರಿತಾದ ಕೆಟ್ಟ ಕುತೂಹಲ ತಾಳಲಾರದೇ ಸಾಗರ ಸಮೀಪದ ಒಂದು ಹಳ್ಳಿಯ ಜ್ಯೋತಿಷಿಯ ಬಳಿ ಭವಿಷ್ಯ ಕೇಳೋಕೆ ಮುಂಜಾನೆ ಆರು ಗಂಟೆಗೆ ಹೊರಟೇ ಬಿಟ್ಟರು. ಅದರಲ್ಲೊಬ್ಬ ಆ ಜ್ಯೋತಿಷಿಯ ಬಗ್ಗೆ ಬೇಜಾನ್ ಬಿಲ್ಡಪ್ ಕೊಟ್ಟಿದ್ದ. ಸಹಜವಾಗಿಯೇ ಉಳಿದ ಮೂವರಲ್ಲಿ ಕುತೂಹಲ ಇನ್ನೂ ಕೆರಳತೊಡಗಿತ್ತು. ಪ್ರಸಿದ್ಧ ದೇವಿ ದೇವಸ್ಥಾನದ ಮಾರ್ಗ ಮಧ್ಯದಲ್ಲೆ ಜ್ಯೋತಿಷಿಯ ಮನೆ ಇರೋದರಿಂದ ಮೊದಲು ಜ್ಯೋತಿಷಿಯ ಬಳಿ ತೆರಳಿ ನಂತರ ದೇವಿಯ ದರ್ಶನಕ್ಕೆ ತೆರಳುವ ಯೋಜನೆಯನ್ನು ಆ ಯುವಕರು ಹಾಕಿಕೊಂಡಿದ್ದರು.
ಆ ಜ್ಯೋತಿಷಿಯ ವಿಳಾಸವನ್ನು ಯಾರೋ ಬಳಿ ತಿಳಿದುಕೊಂಡ ಯುವಕರು ಬೆಳಿಗ್ಗೆ ಸರಿಸುಮಾರು ಎಂಟು ಗಂಟೆಯ ಸಮಯಕ್ಕೆ ಜ್ಯೋತಿಷಿಯ ಮನೆ ತಲುಪಿದರು. ಹೊಸ ಜಾಗ, ಮೊದಲ ಭೇಟಿಯಾದುದರಿಂದ ಆ ಜ್ಯೋತಿಷಿಯ ಕುರಿತಾದ ಭಯ-ಭಕ್ತಿ, ಕುತೂಹಲ ಆ ಯುವಕರಲ್ಲಿ ಇಮ್ಮಡಿಗೊಂಡಿತ್ತು. ಅಲ್ಲಿಯೇ ಮನೆಯ ಪಕ್ಕದ ದನದ ಕೊಟ್ಟಿಗೆಯ ಬಳಿ ತೆಳ್ಳನೆಯ ಮೈಕಟ್ಟಿನ ಸರಿಸುಮಾರು 60 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಗೋವುಗಳಿಗೆ ಮೇವು ನೀಡುತ್ತಿದ್ದನ್ನು ಗಮನಿಸಿದ ಯುವಕರು ಆತನಲ್ಲಿ ಜ್ಯೋತಿಷಿಯ ಕುರಿತು ಕೇಳಿದರು. ಜ್ಯೋತಿಷಿಗಳು ತುಂಬಾ ಬ್ಯುಸಿ ಇದ್ದಾರೆ, ಈ ಭಾಗದ ಪ್ರಸಿದ್ದ ಜ್ಯೋತಿಷಿಗಳು ಅವರಾಗಿದ್ದಾರೆ. ದೊಡ್ಡ-ದೊಡ್ಡ ಜನರು ಅವರ ಬಳಿ ಕಷ್ಟಕ್ಕೆ ಪರಿಹಾರ ಕೇಳಿಕೊಂಡು ಬರ್ತಾರೆ. ಜಪ-ತಪ ಹೋಮ-ಹವನ ಇರೋದ್ರಿಂದ ನೀವು ಅವರನ್ನು ಸುಮಾರು 10 ಗಂಟೆಗೆ ಭೇಟಿಯಾಗಬಹುವುದು ಎಂದು ಆ ವ್ಯಕ್ತಿ ಯುವಕರಿಗೆ ಹೇಳಿದ.
ಇನ್ನು ಎರಡು ಗಂಟೆ ನಾವು ಇಲ್ಲಿಯೇ ಕಾಯುವುದಕ್ಕಿಂತ ದೇವಿಯ ದರ್ಶನ ಮಾಡಿ ಬರುವುದು ಉತ್ತಮ ಎಂದು ಆ ವ್ಯಕ್ತಿಯ ಬಳಿ ಆಮೇಲೆ ನಾವು ಬರುತ್ತೇವೆಂದು ಹೇಳಿದ ಯುವಕರು ದೇವಸ್ಥಾನದ ದಾರಿ ಹಿಡಿದರು. ಜ್ಯೋತಿಷಿಯ ದಿನಚರಿ ಕೇಳಿ ಆ ನಾಲ್ಕು ಜನ ಯುವಕರು ದಂಗಾಗಿದ್ದರು. ರಾಜ್ಯದ ಮೂಲೆಮೂಲೆಗಳಿಂದ ಬಸ್ಸು, ಕಾರು, ರೈಲಿನ ಮೂಲಕ ಬರುವ ಜನತೆಗೆ ಜ್ಯೋತಿಷ್ಯ ಹೇಳುವ ಆ ವ್ಯಕ್ತಿ ಹೇಗಿರಬಹುದು ಅನ್ನುವಂತಹ ಕುತೂಹಲ ಇವರಲ್ಲಿ ಇನ್ನೂ ಹೆಚ್ಚಾಯಿತು.
ದೇವಿಯ ದರ್ಶನ ಪಡೆದ ಯುವಕರು ಮತ್ತೇ ಜ್ಯೋತಿಷಿಯ ಮನೆ ಬಳಿ ಹೋದಾಗ ಯುವಕರಿಗೆ ಆಶ್ಚರ್ಯ ಕಾದಿತ್ತು. ಬೆಳಿಗ್ಗೆ ಬಂದಾಗ ಖಾಲಿ ಖಾಲಿ ಇದ್ದ ಜ್ಯೋತಿಷಿಯ ಮನೆ ಈಗ ಜನರಿಂದ ಕಿಕ್ಕಿರಿದಿತ್ತು. ಮನೆ-ಮಂದಿ, ಆಳು ಕಾಳುಗಳು ಜ್ಯೋತಿಷಿಗೆ ಸಹಾಯ ಮಾಡುತ್ತಾ ,ಆಚೆ- ಈಚೆಗೆ ಒಡಾಡುತ್ತಾ (ಮನೆಯ ಮಹಿಳೆಯರು ಸೇರಿ) ಬಂದವರಿಗೆ ಮಜ್ಜಿಗೆ ವಿತರಿಸುತ್ತಿದ್ದರು. ನೆರೆದ ಜನರು ಕಡ್ಡಾಯವಾಗಿ ಮಜ್ಜಿಗೆಯನ್ನು ಸೇವಿಸಬೇಕೆಂದು ಜ್ಯೋತಿಷಿಯ ಆಜ್ಞೆ ಆಗಿತ್ತು. ಮಜ್ಜಿಗೆ ಕುಡಿಯದಿದ್ದವರೂ ಸಹ ಮಜ್ಜಿಗೆ ಕುಡಿಯಲೇ ಬೇಕಾದ ಪ್ರಸಂಗ ಎದುರಾಯಿತು.
ಸರತಿ ಸಾಲಿನಲ್ಲಿ ಒಬ್ಬೊಬ್ಬರು ತಮ್ಮ ಪ್ರಶ್ನೆಗಳನ್ನು ಜ್ಯೋತಿಷಿಯ ಮುಂದಿಟ್ಟಾಗ ಅದಕ್ಕೆ ಪ್ರತಿಕ್ರಿಯಿಸುವ ಜ್ಯೋತಿಷಿ ತಾನು ಕುಳಿತ ಕುರ್ಚಿಯಿಂದಲೇ ಎದ್ದೆದ್ದು ಕುಣಿಯುತ್ತಿದ್ದ. ತನ್ನ ಕುತ್ತಿಗೆಯಲ್ಲಿ ಧರಿಸಿದ್ದ ರುದ್ರಾಕ್ಷಿ ಮಾಲೆಯನ್ನು ಹಣೆ ಒತ್ತಿಕೊಂಡು ಅದೇನೋ ಮಂತ್ರವನ್ನು ಪಟಪಟ ಎಂದು ಬಾಯಿಂದ ಉದುರಿಸುತ್ತಿದ್ದ. ಆ ನಡುವೆ ದೂರದ ಊರುಗಳಿಂದ ಮೊಬೈಲ್ ಕರೆಗಳು ಆತನಿಗೆ ಬರುತ್ತಿದ್ದವು. ತೆಗೆಯಿರಿ, ಬಿಡಬೇಡಿ ಅವನ್ನಾ, ಶಿರಸಿ-ಸಿದ್ದಾಪುರದ ರೌಡಿಯ ಬಳಿ ಹೇಳಿ ಅವನನ್ನಾ ಮುಗಿಸಿಬಿಡ್ತೇ ಅಂತ ಜೋರು ದ್ವನಿಯಲ್ಲಿ ಫೋನ್ನಲ್ಲಿ ಮಾತನಾಡುತ್ತಿದ್ದ. ಈ ಸಂಗತಿಗಳನ್ನು ನೋಡಿದ ಯುವಕರಲ್ಲಿ ಭಯ ಕಾಡತೊಡಗಿತ್ತು.
ನೂರಾರು ಅಡಿ ಬೋರ್ವೆಲ್ ಹೊಡಿಸಿ ನೀರಿಗಾಗಿ ಎಷ್ಟು ಪ್ರಯತ್ನಿಸಿದರೂ ನೀರು ಬಂದಿಲ್ಲ ಎಂದು ಇನ್ನೊಂದು ಕರೆ ಬಂದಾಗ ಜ್ಯೋತಿಷಿ ಆತನಿಗೆ ಹೇಳಿದ ಸಲಹೆ ಹಾಸ್ಯಸ್ಪದವಾಗಿತ್ತು. ಇನ್ನೇನು ಎರಡು ಅಡಿ ಬೋರ್ ತೊಡಿದ್ದಲ್ಲಿ ನೀರು ಸುರ್ರನೆ ಪುಟಿದೇಳುತ್ತಿತ್ತು ಅಂತ ಹೇಳಿ ಆತನನ್ನು ಪೋನ್ ನಲ್ಲೆ ಸಮಾಧಾನಪಡಿಸುತ್ತಿದ್ದ.
ವಾಹನ ಪೂಜೆಗೆಂದು ಮನೆಯ ಎದುರುಗಡೆ ನಿಂತಿದ್ದ ಒಂದು ಹೊಸ ಸ್ಕೂಟರ್ ಗೆ ಪೂಜೆ ಮಾಡಲು ಜ್ಯೋತಿಷಿ ತನ್ನ ಕುತ್ತಿಗೆಯಿಂದ ರುದ್ರಾಕ್ಷಿ ಮಾಲೆಯನ್ನು ತೆಗೆದು ವಾಹನದ ಮುಂಭಾಗಕ್ಕೆ ಅದೇನೋ ಮಂತ್ರ ಹೇಳಿ ತಾಗಿಸುತ್ತಿದ್ದ. ಆತನ ಮಂತ್ರದಿಂದಲೇ ಸ್ಕೂಟರ್ ಸ್ಟಾರ್ಟ್ ಆಗಬಹುದು ಎನ್ನುವ ಕುತೂಹಲದಲ್ಲಿದ್ದ ನೆರೆದವರ ಯೋಚನೆ ಹುಸಿಯಾಗಿತ್ತು.
ದೂರದ ಊರಿನಿಂದ ಕಾರಣಾಂತರದಿಂದ ಅಂಗವೈಕಲ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಜ್ಯೋತಿಷಿಯ ಬಳಿ ಪರಿಹಾರ ಕೇಳಲು ಬಂದಿದ್ದ. ಜ್ಯೋತಿಷಿ ತನ್ನ ಮಾತಿನಲ್ಲೇ ಆತನನ್ನು ಗುಣ ಪಡಿಸುವ ಪ್ರಯತ್ನ ಮಾಡಲೆತ್ನಿಸುತ್ತಿದ್ದದನ್ನು ನೋಡಿ ಆ ವ್ಯಕ್ತಿ ಮೂರ್ಛೆ ಹೋಗೋದೊಂದು ಬಾಕಿ. ಕುರ್ಚಿಯ ಮೇಲೆ ಹತ್ತಿ ನರ್ತನ ಪ್ರಾರಂಭಿಸಿದ ಆ ಜ್ಯೋತಿಷಿ ಮನೆಯ ಗೋಡೆಯ ಮೇಲೆ ನೇತು ಹಾಕಿದ್ದ ದೇವರ ಫೋಟೋಗೆ ತನ್ನ ಕೈಯಲ್ಲಿದ್ದ ನವಿಲುಗರಿಯನ್ನು ತಾಗಿಸಿ ನಂತರ ಅಂಗವೈಕಲ್ಯಕ್ಕೆ ಒಳಗಾಗಿದ್ದ ವ್ಯಕ್ತಿಯ ದೇಹದ ಭಾಗಕ್ಕೆ ಸವರುತ್ತಿದ್ದ. ಅದು ಪ್ರಯೋಜನಕ್ಕೆ ಬರದಿದ್ದನ್ನು ನೋಡಿ ಆ ವ್ಯಕ್ತಿಗೆ ಅದೇನೋ ಸಲಹೆ ಕೊಟ್ಟು ಕಳುಹಿಸುವ ಪ್ರಯತ್ನ ಮಾಡುತ್ತಿದ್ದ.
ಈ ಎಲ್ಲಾ ಸಂಗತಿಗಳನ್ನು ನೋಡುತ್ತಾ ಸರತಿ ಸಾಲಿನಲ್ಲಿ ಕುಳಿತಿದ್ದ ಈ ನಾಲ್ಕು ಜನ ಯುವಕರು ತಮ್ಮ ಪ್ರಶ್ನೆಯನ್ನು ಜ್ಯೋತಿಷಿಯ ಬಳಿ ಪ್ರಸ್ತಾಪ ಮಾಡುವ ಆಸೆಯನ್ನು ಕೈ ಬಿಟ್ಟಿದ್ದರು. ಮನೆಯಿಂದ ತಂದಿದ್ದ ತೆಂಗಿನಕಾಯಿಗಳು ಆ ಯುವಕರ ಕೈಯಲ್ಲೇ ಬಾಕಿ ಉಳಿದವು.
ಆ ಕಪಟ ಜ್ಯೋತಿಷಿಯ ನಾಟಕ ನೋಡಿ ಬೇಸತ್ತಿದ್ದ ಆ ಯುವಕರು ಅಲ್ಲಿಂದ ಕಾಲುಕೀಳುವ ಪ್ರಯತ್ನ ಮಾಡುತ್ತಿದ್ದರು. ಜ್ಯೋತಿಷಿಗೂ ಅದೇ ಬೇಕಿತ್ತು! ಏಕೆಂದರೆ ಆತನ ಕಪಟ ನಾಟಕ ವನ್ನು ನೋಡಿದ ಆ ಯುವಕರು ತಮ್ಮೊಳಗೆ ವಿಮರ್ಶೆ ಮಾಡಿಕೊಳ್ಳುತ್ತಿದ್ದು ಆತನ ಗಮನಕ್ಕೆ ಆಗಲೇ ಬಂದಿತ್ತು.
ಅಷ್ಟಕ್ಕೂ ಆ ಜ್ಯೋತಿಷಿ ಯಾರು ಗೊತ್ತೇ? ಆ ನಾಲ್ಕು ಜನ ಯುವಕರು ಪ್ರಾರಂಭದಲ್ಲಿ ಜ್ಯೋತಿಷಿಯ ಮನೆಗೆ ಬಂದಾಗ ಹಟ್ಟಿಯ ಬಳಿ ಗೋವುಗಳಿಗೆ ಮೇವು ನೀಡುತ್ತಿದ್ದ ತೆಳ್ಳನೇ ಮೈಕಟ್ಟಿನ ಅರವತ್ತು ವರ್ಷದ ಅದೇ ಆ ಕಪಟ ವ್ಯಕ್ತಿ.!!!!!
ಜ್ಯೋತಿಷ್ಯ ಶಾಸ್ತ್ರಕ್ಕೆ ಮಸಿ ಬಳಿಯುವ ಇಂತಹ ಪುಡಾರಿಗಳು ಇರುವವರೆಗೂ ಜ್ಯೋತಿಷ್ಯ ಶಾಸ್ತ್ರದ ಕುರಿತಾಗಿ ಜನತೆಗೆ ಅಪನಂಬಿಕೆ ಇದ್ದೇ ಇದೆ. ಜ್ಯೋತಿಷ್ಯದ ಹೆಸರಿನಲ್ಲಿ ಅದೆಷ್ಟೋ ಜನತೆಯ ಕೈಗೆ “ಚೊಂಬುಕೊಟ್ಟ” ಆ ಜ್ಯೋತಿಷಿಗೆ ಕಾರಿನಲ್ಲಿ ಕುಳಿತ ಯುವಕರು ತಮ್ಮದೇ ಭಾಷೆಯಲ್ಲಿಯೇ ಉಗಿಯುತ್ತಾ ಮುಂದಿನ ದಾರಿ ಹಿಡಿದರು. ಕಾರಿನ ಸೈಲೆನ್ಸರ್ ನಿಂದ ಹೊರ ಬರುತ್ತಿದ್ದ ಹೊಗೆ ಇನ್ನೂ ಪರಿಹಾರಕ್ಕಾಗಿ ಸರತಿಸಾಲಿನಲ್ಲಿ ಕುಳಿತವರನ್ನು ಮೋಸಗೊಳಿಸಲು ಹವಣಿಸುತ್ತಿದ್ದ ಆ ಕಪಟ ಜ್ಯೋತಿಷಿಯ ಮುಖಕ್ಕೆ ಮಸಿ ಬಳಿಯುವಂತಿತ್ತು.
ಹತ್ತಿರದ ಕ್ಯಾಂಟಿನ್ ಒಂದರಲ್ಲಿ ಊಟಕ್ಕೆಂದು ತೆರಳಿದ ಯುವಕರು ಊಟ ಬಡಿಸುತ್ತಿದ್ದವನ ಬಳಿ ಆ ಕಪಟ ಜ್ಯೋತಿಷಿಯ ಕುರಿತು ವಿಚಾರಿಸಿದಾಗ ಆತ ಮುಸಿ ಮುಸಿ ನಕ್ಕು ನೀರಿನ “ಚೊಂಬ”ನ್ನು ಹಿಡಿದು ಲೋಟಕ್ಕೆ ನೀರು ಹಾಕಿದ.
ಲೇಖನ- ಪ್ರವೀಣ್ ಗಂಗೊಳ್ಳಿ
ಹಾ..ಹಾ..4 ವರ್ಷದ ಹಿಂದೆ 4 ಜನ ಹುಡುಕಿ ಹೊರಟಿದ್ದರು ಆ ಜ್ಯೋತಿಷಿ ಯನ್ನು….😂😂😂😂😂😉😉😉😎