ಅದು ಬೆಂಗಳೂರಿನ ಹೊರವಲಯದಲ್ಲಿದ್ದ ಹತ್ತು ವರ್ಷದ ಹಳೆಯ ಅಪಾರ್ಟ್ ಮೆಂಟ್. ಅಲ್ಲಿ ಇಪ್ಪತ್ತೈದು ಕುಟುಂಬದವರು ವಾಸಿಸುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಅಲ್ಲಿ ಸಂತೋಷದಿಂದ ಬದುಕುತ್ತಿದ್ದಾರೆ. ಹತ್ತು ವರ್ಷಗಳಿಂದ ಒಂದೇ ಕಡೆ ಜೀವನ ಸಾಗಿಸುತ್ತಿರುವ ಈ ಅಪಾರ್ಟ್ ಮೆಂಟ್ ವಾಸಿಗಳ ನಡುವೆ ಒಂದು ವಿಶೇಷವಾದ ಬಾಂಧವ್ಯ ಬೆಳೆದಿದೆ. ಅವರುಗಳ ನಡುವೆ ಸ್ನೇಹ ಸಂಬಂಧವನ್ನು ಮೀರಿದ ಒಂದು ಅನುಬಂಧ ಏರ್ಪಟ್ಟಿದೆ.
ಕಳೆದ ಎರಡು ಮೂರು ತಿಂಗಳಿಂದ ಈ ಅಪಾರ್ಟ್ ಮೆಂಟ್ ನ ಪ್ರತಿ ಮನೆಗಳಲ್ಲಿಯೂ ಸುಪ್ರಭಾತ, ದೇವರ ನಾಮಗಳು ಕೇಳಿಸುತ್ತೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಸಾದನ ಗುಣಗಾನ ಮಾತ್ರ ತಪ್ಪದೇ ಕೇಳಿಸುತ್ತಿದೆ. ಒಂದರ್ಥದಲ್ಲಿ ಅವರ ದಿನ ಪ್ರಾರಂಭವಾಗುವುದು ಪ್ರಸಾದನ ಹೆಸರಿನೊಂದಿಗೆ ….ಮುಗಿಯುವುದು ಅವನ ಹೆಸರಿನೊಂದಿಗೆ ಎನ್ನಬಹುದು.
ಪ್ರಸಾದನ ನಾಮಸ್ಮರಣೆಯ ಆಯ್ದ ಕೆಲವು ಮಾತುಗಳು ಹೀಗಿವೆ: ‘ಪ್ರಸಾದು ಎಷ್ಟು ಒಳ್ಳೇ ಹುಡುಗ’, ‘ಪ್ರಸಾದನ ನೋಡಿ ಸ್ವಲ್ಪ ಕಲಿರೋ’, ‘ಒಂದು ಮನೆ ಉದ್ಧಾರ ಆಗ್ಬೇಕು ಅಂದ್ರೆ ಆ ಮನೇಲಿ ಪ್ರಸಾದನಂತ ಒಬ್ಬ ಮಗ ಇದ್ದ್ರೇ ಸಾಕು ನೋಡಿ’, ‘ಪ್ರಸಾದುಗೆ ಒಂದು ಕೆಲಸ ವಹಿಸಿದ ಮೇಲೆ ಮುಗಿತು. ಅದರ ಬಗ್ಗೆ ನಾವು ಚಿಂತಿಸೋ ಅಗತ್ಯಾನೇ ಇಲ್ಲ’ ಇತ್ಯಾದಿ ಇತ್ಯಾದಿ.
ಈ ಅಪಾರ್ಟ್ ಮೆಂಟ್ ನ ನೆಲ ಮಾಳಿಗೆಯಲ್ಲಿ ಒಂದು ಪುಟ್ಟ ರೂಮ್ ಖಾಲಿ ಬಿದ್ದಿತ್ತು. ಅದನ್ನು ಕಳೆದ ವರ್ಷವಷ್ಟೇ ಅಪಾರ್ಟ್ ಮೆಂಟಿನ ಯಜಮಾನರು ಕ್ಲೀನ್ ಮಾಡಿಸಿ, ಬಾಡಿಗೆಗಿದೆ ಎನ್ನುವ ಫಲಕವನ್ನು ಗೇಟಿನ ಎದುರು ತೂಗಿಹಾಕಿದ್ದರು. ಅದನ್ನು ನೋಡಿ ಬಾಡಿಗೆಗೆ ಬಂದವನೇ ಈ ಪ್ರಸಾದ್. ವಯಸ್ಸು ಇಪ್ಪತ್ತೈದರ ಆಸುಪಾಸು, ಪಿಎಚ್.ಡಿ ವಿದ್ಯಾರ್ಥಿಯಂತೆ. ನೋಡಲು ಸ್ಫುರದ್ರೂಪಿಯೇ. ಸರಳ ವ್ಯಕ್ತಿತ್ವ, ಎಲ್ಲರೊಂದಿಗೂ ನೀರಿನ ಹಾಗೆ ಬೆರೆಯುತ್ತಿದ್ದ. ಸ್ನೇಹ ಜೀವಿಯಾಗಿದ್ಧ ಆತ ಅಪಾರ್ಟ್ ಮೆಂಟಿನಲ್ಲಿ ಯಾರಿಗೆ ಏನೇ ಸಹಾಯ ಬೇಕಿದ್ದರೂ ಅವರ ನೆರವಿಗೆ ಧಾವಿಸಿ ಬರುತ್ತಿದ್ದ. ತರಕಾರಿ, ದಿನಸಿ ಸಾಮಾನುಗಳನ್ನು ತಂದುಕೊಡುವುದೇ ಆಗಿರಲಿ, ಗ್ಯಾಸ್ ಸಿಲಿಂಡರನ್ನು ಮನೆ ಬಾಗಿಲಿಗೆ ತಲುಪಿಸೋ ಕೆಲಸವನ್ನೇ ಹೇಳಲಿ ಯಾವುದೇ ಪ್ರತಿಫಲ ಅಪೇಕ್ಷಿಸದೆ ಸಂತೋಷದಿಂದ ಮಾಡಿಕೊಡುತ್ತಿದ್ದನು. ಪ್ರಸಾದನ ಈ ಗುಣಗಳೇ ಅವನಿಗೆ ಅಪಾರ್ಟ್ ಮೆಂಟಿನ ಅಮ್ಮಂದಿರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ದೊರಕಿಸಿಕೊಟ್ಟಿತ್ತು.
ಕೆಲವು ಕಡೆಗಳಲ್ಲಿ ಇರುವ ಹಾಗೆ ಈ ಅಪಾರ್ಟ್ ಮೆಂಟಿನಲ್ಲಿಯೂ ಒಂದು ಬೇಜವಾಬ್ದಾರಿ ಯುವಕರ ಗೆಳೆಯರ ಬಳಗವಿತ್ತು. ಆ ಗೆಳೆಯರ ಬಳಗದವರು ಪ್ರತಿವರ್ಷ ಅಪಾರ್ಟ್ ಮೆಂಟಿನವರ ಬಳಿ ಚಂದಾ ಎತ್ತಿ ಬೇಕಾಬಿಟ್ಟಿಯಾಗಿ ಗಣೇಶನ ಕೂರಿಸಿ ಚತುರ್ಥಿಯನ್ನು ಆಚರಿಸುತ್ತಿದ್ದರು. ಅವರ ಆ ಆಚರಣೆಯಲ್ಲಿ ಭಕ್ತಿಗಿಂತ ಮೋಜು ಮಸ್ತಿಯೇ ಹೆಚ್ಚಾಗಿರುತ್ತಿತ್ತು. ಆದರೆ ಈ ಬಾರಿ ಪ್ರಸಾದನೇ ಮುಂದೆ ನಿಂತು ಎಲ್ಲಾ ಜವಾಬ್ದಾರಿಗಳನ್ನು ತಾನೇ ಹೊತ್ತು ಅಚ್ಚುಕಟ್ಟಾಗಿ, ಭಕ್ತಿಪೂರ್ವಕವಾಗಿ ಗಣೇಶನ ಪೂಜೆಯನ್ನು ನೆಡೆಸಿಕೊಟ್ಟಿದ್ದನು. ಇದರಿಂದ ಅಪಾರ್ಟ್ ಮೆಂಟಿನ ಹಿರಿಯ ಜೀವಗಳಿಗೆ ಪ್ರಸಾದನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತಾದರೂ, ಗೆಳೆಯರ ಬಳಗದವರ ಕೆಂಗಣ್ಣಿಗೆ ಅವನು ಗುರಿಯಾಗಬೇಕಾಗಿ ಬಂತು.
ಒಮ್ಮೆ ಅಪಾರ್ಟ್ ಮೆಂಟಿನ ಪಾರ್ಕ್ ನಲ್ಲಿ ಆಟವಾಡುತ್ತಿದ್ದ ಹುಡುಗನೊಬ್ಬನಿಗೆ ವಿಷ ಸರ್ಪವೊಂದು ಕಚ್ಚಿತು. ಆ ಸಂದರ್ಭದಲ್ಲಿ ಪ್ರಸಾದ್ ಹಿಂದೂ ಮುಂದೂ ನೋಡದೆ ತಕ್ಷಣ ಹಾವು ಕಚ್ಚಿದ ಗಾಯವನ್ನು ದೊಡ್ಡದು ಮಾಡಿ ತನ್ನ ಬಾಯಿಯಿಂದ ವಿಷವನ್ನು ಹೀರಿ ತೆಗೆದು ಹುಡುಗನ ಪ್ರಾಣವನ್ನು ಕಾಪಾಡಿದ್ದ. ಅಪಾರ್ಟ್ ಮೆಂಟಿನವರಿಗೆ ಯಾವುದೇ ಸಮಸ್ಯೆಗಳು ಎದುರಾದರೂ ಪ್ರಸಾದ್ ಅದು ತನಗೆ ಎದುರಾದ ಸಮಸ್ಯೆಗಳೆಂದು ಭಾವಿಸಿ ಅನೇಕ ಬಾರಿ ಅವುಗಳಿಂದ ಪಾರಾಗಲು ಅವರಿಗೆ ನೆರವಾಗುತ್ತಿದ್ದ. ಹೀಗೆ ಪ್ರಸಾದ್ ದಿನ ಕಳೆದಂತೆ ಅವರೆಲ್ಲರ ಪ್ರೀತಿ, ವಿಶ್ವಾಸವನ್ನು ಹೆಚ್ಚು ಹೆಚ್ಚು ಗಳಿಸುತ್ತಾ ಅವರೆಲ್ಲರಿಗೂ ಮತ್ತಷ್ಟು ಹತ್ತಿರವಾಗತೊಡಗಿದನು.
ಅಪಾರ್ಟ್ ಮೆಂಟಿನವರ ಪಾಲಿಗೆ ಪ್ರಸಾದ್ ಹೂವಾಗಿದ್ದರೂ ಗೆಳೆಯರ ಬಳಗದವರ ಪಾಲಿಗೆ ಮುಳ್ಳಾಗಿದ್ದನು. ದಿನಾ ಬೆಳಗಾದರೆ ಪ್ರಸಾದನ ಜೊತೆ ಹೋಲಿಸಿ ಅವಮಾನಿಸುವ ಮನೆಯವರ, ಅಕ್ಕಪಕ್ಕದವರ ಚುಚ್ಚು ಮಾತುಗಳನ್ನು ಕೇಳಿ ಅವರು ಬೇಸತ್ತಿದ್ದರು. ಅವರಲ್ಲಿ ಆತನ ಬಗ್ಗೆ ಕೋಪ, ದ್ವೇಷಗಳು ಒಂದೊಂದಾಗಿ ಬೆಳೆಯತೊಡಗಿದವು. ತಮ್ಮ ಪಾಲಿಗೆ ತೊಡಕಾಗಿದ್ದ ಅವನನ್ನು ಹೇಗಾದರೂ ಮಾಡಿ ಅಪಾರ್ಟ್ ಮೆಂಟಿನವರ ಮನಸ್ಸಿನಿಂದ ಹೊರಹಾಕಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟಿದ್ದರಾದರೂ ಅಪಾರ್ಟ್ ಮೆಂಟಿನವರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ಪ್ರಸಾದನನ್ನು ಅವರ ಮನಸ್ಸಿನಿಂದ ಕಿತ್ತುಹಾಕಲು ಅವರಿಂದ ಸಾಧ್ಯವಾಗಲಿಲ್ಲ.
ಕೇವಲ ಆರೇಳು ತಿಂಗಳುಗಳಲ್ಲಿಯೇ ಪ್ರಸಾದ್ ಅಪಾರ್ಟ್ ಮೆಂಟಿನವರೆಲ್ಲರ ಹೃದಯವನ್ನು ಗೆದ್ದಿದ್ದನು (ಗೆಳೆಯರ ಬಳಗದವರನ್ನು ಹೊರತುಪಡಿಸಿ). ಅವರೆಲ್ಲರನ್ನು ಈತ ಎಷ್ಟರ ಮಟ್ಟಿಗೆ ಆವರಿಸಿದ್ದ ಎಂದರೆ ಅವರು ಯಾವುದೇ ಸಣ್ಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಮೊದಲು ಪ್ರಸಾದನೊಂದಿಗೆ ಚರ್ಚಿಸಿ ಅವನ ಸಲಹೆ ಪಡೆಯುತ್ತಿದ್ದರು. ಸಿಂಪಲ್ಲಾಗಿ ಹೇಳಬೇಕೆಂದರೆ ಆತ ಅವರೆಲ್ಲರ ಮನೆಯ ಮಗನ ಸ್ಥಾನ ಪಡೆದಿದ್ದ.
ಒಮ್ಮೆ ಪ್ರಸಾದ್ ರೂಮ್ ಖಾಲಿ ಮಾಡಿ ಹೋಗುತ್ತಾನೆ ಎನ್ನುವ ಸುದ್ದಿ ಅಪಾರ್ಟ್ ಮೆಂಟಿನವರ ಕಿವಿಗೆ ಬೀಳುತ್ತದೆ. ಪ್ರಸಾದನ ತಂದೆ ಅನಿವಾರ್ಯ ಕಾರಣಗಳಿಂದ ಇನ್ನು ಮುಂದೆ ಆತನ ಓದಿಗೆ ಹಣ ಕಳುಹಿಸಲು ಸಾಧ್ಯವಾಗುತ್ತಿಲ್ಲವೆಂದು ಕಾಗದ ಬರೆದಿದ್ದರು. ಆದ್ದರಿಂದ ಅವನು ತನ್ನ ಓದನ್ನು ಅರ್ಧಕ್ಕೆ ಕೈ ಬಿಟ್ಟು ಊರಿಗೆ ಹಿಂದಿರುಗುವ ನಿರ್ಧಾರ ತೆಗೆದುಕೊಂಡಿದ್ದನು. ವಿಷಯ ತಿಳಿದ ಅಪಾರ್ಟ್ ಮೆಂಟಿನ ವಿಶಾಲ ಹೃದಯದವರು ಈತನ ಓದಿಗೆ ತಾವು ಹಣ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದರು. ಆದರೆ ಅವರ ಬಳಿ ಹಣ ಪಡೆಯಲು ಪ್ರಸಾದನಿಗೆ ಸ್ವಾಭಿಮಾನ ಅಡ್ಡಿಪಡಿಸಿತು. ಅವರು ಸಾಲದ ರೂಪದಲ್ಲಾದರೂ ಹಣ ತೆಗೆದುಕೊಳ್ಳುವಂತೆ ಕೇಳಿಕೊಂಡರು. ಆದರೆ ಅವರೆಲ್ಲರ ಮನೆಯ ಮಗನ ಸ್ಥಾನ ಪಡೆದಿದ್ದ ಆತನಿಗೆ ಅವರ ಬಳಿ ಸಾಲ ಪಡೆಯಲು ಮನಸ್ಸಾಗಲಿಲ್ಲ. ಅವರೆಲ್ಲರನ್ನೂ ಬಿಟ್ಟು ಹೋಗಲು ಅವನಿಗೆ ಮನಸ್ಸಿರಲಿಲ್ಲ.
ಮರುದಿನ ಪ್ರಸಾದ್ ತನ್ನ ಗೆಳೆಯನೊಬ್ಬನನ್ನು ಅಪಾರ್ಟ್ ಮೆಂಟಿಗೆ ಕರೆದುಕೊಂಡು ಬಂದನು. ಆತ ಯಾವುದೋ ಖಾಸಗಿ ವಿಮಾ ಕಂಪೆನಿಯ ಏಜೆಂಟ್. ಅವನು ಅಪಾರ್ಟ್ ಮೆಂಟಿನವರಿಗೆಲ್ಲಾ ಒಂದು ಉಳಿತಾಯ ಯೋಜನೆಯ ಕುರಿತು ವಿವರಗಳನ್ನು ನೀಡಿದ. ಆ ಯೋಜನೆಯ ಪ್ರಕಾರ ಒಬ್ಬ ವ್ಯಕ್ತಿ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಒಂದು ವರ್ಷದವರೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳು ಬಡ್ಡಿಯ ರೂಪದಲ್ಲಿ ದೊರೆಯುತ್ತದೆ ಮತ್ತು ಒಂದು ವರ್ಷದ ನಂತರ ಅವರು ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸಲಾಗುತ್ತದೆ. ಜೊತೆಗೆ ಇದರಿಂದ ಕಮಿಷನ್ ರೂಪದಲ್ಲಿ ಪ್ರಸಾದನಿಗೆ ಒಂದಿಷ್ಟು ಹಣ ಸಹ ದೊರೆಯುತ್ತದೆ. ಈ ಹಣದಿಂದ ಅವನು ತನ್ನ ಓದನ್ನು ಮುಂದುವರಿಸಬಹುದಾಗಿತ್ತು. ತನಗೆ ಒಳ್ಳೆಯದಾಗುವುದರ ಜೊತೆಗೆ ಬೇರೆಯವರಿಗೂ ಒಳಿತಾಗಬೇಕಂದು ಬಯಸುವ ಪ್ರಸಾದನ ಒಳ್ಳೆತನಕ್ಕೆ ಮನಸೋತು ಅವರೆಲ್ಲರು ಸಂತೋಷದಿಂದ ಆ ಯೋಜನೆಯಲ್ಲಿ ಹೂಡಿಕೆ ಮಾಡಿದರು.
ಇದೆಲ್ಲಾ ನಡೆದು ಒಂದು ವಾರದ ನಂತರ ಪ್ರಸಾದ್ ಊರಿನಲ್ಲಿ ಏನೋ ಮುಖ್ಯವಾದ ಕೆಲಸವಿದೆ ಅದನ್ನು ಮುಗಿಸಿ ಎರಡು ಮೂರು ದಿನಗಳಲ್ಲಿ ವಾಪಾಸು ಬರುವುದಾಗಿ ಹೇಳಿ ಹೋದ. ಎರಡು ದಿನ ಕಳೆಯಿತು ಪ್ರಸಾದ್ ವಾಪಾಸು ಬರಲಿಲ್ಲ. ಹೀಗೆ ಎರಡು ವಾರ ಕಳೆಯಿತು, ಎರಡು ತಿಂಗಳು ಕಳೆಯಿತು ಆದರೂ ಪ್ರಸಾದನ ಸುಳಿವೆ ಇರಲಿಲ್ಲ.
ಪ್ರಸಾದ್ ಹೀಗೆ ಊರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಆರು ತಿಂಗಳೇ ಕಳೆದಿದೆ.ಈಗ ಅವನ ಹೆಸರು ಸಹ ಯಾರ ಬಾಯಲ್ಲಿಯೂ ಬರುತ್ತಿಲ್ಲ. ಅಪಾರ್ಟ್ ಮೆಂಟಿನಲ್ಲಿ ಈಗ ಮೊದಲಿನಂತೆ ಎಲ್ಲವೂ ಸರಿ ಇರಲಿಲ್ಲ. ಎಲ್ಲರನ್ನೂ ಎಲ್ಲವನ್ನೂ ಅನುಮಾನದ ದೃಷ್ಟಿಯಿಂದಲೇ ಅವರೆಲ್ಲ ನೋಡುತ್ತಿದ್ದಾರೆ. ನಂಬಿಕೆ ಎನ್ನುವ ಪದಕ್ಕೆ ಅವರ ನಡುವೆ ಜಾಗ ಇದ್ದಂತಿರಲಿಲ್ಲ. ಮನೆ ಮನಗಳ ನಡುವೆ ಅಂತರ ಹೆಚ್ಚಾಗಿ ಅವರ ನಡುವೆ ಇದ್ದ ಅನುಬಂಧ ಕಳಚಿಕೊಂಡಿದೆ. ಒಂದು ರೀತಿಯ ಅಪರಿಚಿತತೆಯ ಮನೋಭಾವ ಎಲ್ಲರಲ್ಲೂ ಬೆಳೆದಿದೆ.
ಈ ಒಂದು ವರ್ಷದ ಅವಧಿಯಲ್ಲಿ ಅಪಾರ್ಟ್ ಮೆಂಟಿನಲ್ಲಿ ಎಲ್ಲವೂ ಬದಲಾಗಿದೆ. ಬದಲಾಗದೆ ಹಾಗೆ ಉಳಿದಿರುವುದೆಂದರೆ ಗೆಳೆಯರ ಬಳಗ ಮತ್ತು ಗೇಟಿಗೆ ಜೋತು ಬಿದ್ದಿರುವ ಬಾಡಿಗೆಗಿದೆ ಎನ್ನುವ ಬೋರ್ಡ್ ಮಾತ್ರ.
- ಸುಶ್ಮಿತಾ ನೇರಳಕಟ್ಟೆ