ಬೆಂಗಳೂರು (ಜೂ. 04): ಕರೋನಾ ಕಾರಣದಿಂದಾಗಿ ಈಗಾಗಲೇ ಕೇಂದ್ರ ಸರ್ಕಾರ ಸಿಬಿಎಸ್ ಇ ಮತ್ತು ಐಸಿಎಸ್ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳು ರದ್ದು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ, ಪರೀಕ್ಷೆಗಳ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಈ ವರ್ಷ 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ ಎಂದು ಸ್ಪಷ್ಟ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಲಹೆ ಮೇರೆಗೆ ಶಾಸಕರು, ಸಚಿವರು, ರಾಜ್ಯದ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಶಿಕ್ಷಕವ್ರಂದ ಹಾಗೂ ಖಾಸಗಿ ಶಾಲಾ ಸಂಘಟನೆಗಳಿಂದ ಸಂಗ್ರಹಿಸಿದ ಅಭಿಪ್ರಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ನಡೆಸುವುದಿಲ್ಲ. ಬದಲಾಗಿ ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಹಾಗೆಯೇ SSLC ಪರೀಕ್ಷೆ ಜುಲೈ ಮೂರನೇ ವಾರ ನಡೆಸಲು ನಿರ್ಧಾರಿಸಲಾಗಿದೆ .ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡಂತೆ ಒಂದು ಕೋಣೆಯಲ್ಲಿ ಕೇವಲ 10 ಮಕ್ಕಳು ಮಾತ್ರ ಕುಳಿತು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು, ಸರಳ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗುವುದು, ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡುವುದಿಲ್ಲ, ಬಹು ಆಯ್ಕೆಗಳ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ, ಹಿಂದಿ, ಕನ್ನಡ, ಇಂಗ್ಲಿಷ್ ಭಾಷಾ ವಿಷಯಗಳನ್ನು ಒಟ್ಟು ಸೇರಿಸಿ ಒಂದೇ ಪ್ರಶ್ನೆ ಪತ್ರಿಕೆ ಹಾಗೂ ಉಳಿದ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿ ಒಂದು ಪತ್ರಿಕೆ ರೂಪಿಸಲಾಗುವುದು. 120 ಅಂಕಗಳನ್ನೊಳಗೊಂಡ 3 ಗಂಟೆ ಅವಧಿಯ ಪರೀಕ್ಷೆ ನೀಡಲಾಗುತ್ತದೆ ಹಾಗೂ ಕೆಲವೇ ದಿನದಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ನೀಡುತ್ತೇವೆ. ಪರೀಕ್ಷೆಗೆ 20 ದಿನ ಮುನ್ನ ದಿನಾಂಕ ಘೋಷಣೆ ಮಾಡಲಾಗುವುದು. ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿಯೇ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ಹೇಳಿದರು.