ಬಾ ಮಳೆಯೇ…, ಬಾ
ಭಾನು ಅಳುತಿದೆ
ಕತ್ತಲಗೂಡಿನೊಳಗೆ
ಕರಿಮೋಡಗಳ ತಿಕ್ಕಾಟಕೆ ಸಿಕ್ಕಿ
ಕಣ್ಣೀರ ಧಾರೆಗಳು ಮಳೆಯಾಗಿ
ಭೂಮಿಗೆ ಸೇರುವ ತವಕದಲಿ
ಗಗನದಲಿ ಮಳೆ ಮೋಡಗಳ ಕದನ
ಭೂಮಿಗೆ ಮಳೆಯ ತಂಪಾದ ನರ್ತನ
ಯಾರಿಗೋ ನೋವಿನ ಅನುಭವ
ಇನ್ನೂ ಯಾರಿಗೋ ಸುಖದ ತಾಂಡವ
ಹಾಗಂತ ನೀ ಸುರಿಯದಿರ ಬೇಡ
ನೀ ಚೆಲ್ಲಿದ ಹನಿಯ ಅಮೃತಧಾರೆಗಳು
ಕಾದ ಭೂಮಿಗೆ ಅದು ಪ್ರೀತಿ ಸಿಂಚನ
ನಿರಂತರ ನಿನ್ನ ಪ್ರೇಮ ಹನಿ ಸುರಿಸುತ್ತಿರು
ಭೂಮಿಯ ಒಡಲು ಒಣಗಿದೆ ನಿನ್ನ ನಿರೀಕ್ಷೆಯಲಿ ಸಾಕು ಪರೀಕ್ಷೆ ಸುರಿಸಿ ಬೀಡು ಇಳೆಗೆ ಮಳೆಯಾಗಿ
ನಿನಗೆ ನೋವು ಆದರೂ ಸರಿ
ಎಲ್ಲಾ ಮರೆತು ನಿನ್ನ ಪ್ರೀತಿಧಾರೆಯನು
ನಿನ್ನ ದುಃಖದಲ್ಲಿ ಅನ್ಯರಿಗೆ ಸುಖವಿದೆ
ನೀ ಬಿದ್ದರೆ ಇಳೆಗೆ ಬೆಳೆಯಿದೆ
ದಾಹಕೆ ನೀರಿದೆ
ಕಾದ ಒಡಲಿಗೆ ಅನ್ನವಿದೆ
ನಿನ್ನ ದಾರಿ ಕಾಯುತ್ತಾ
ಆಕಾಶ ನೋಡುವ ಮನುಕುಲ ಇದೆ
🖋ಈಶ್ವರ ಸಿ. ನಾವುಂದ