ಉಡುಪಿ (ಜೂ, 22): ಕರ್ನಾಟಕದಲ್ಲಿ ವೃತ್ತಿ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿ.ಇ.ಟಿ.- 2021 ರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು 15 ಜೂನ್ 2021ರಿಂದ ಪ್ರಾರಂಭವಾಗಿದ್ದು 10 ಜುಲೈ 2021ರ ವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಬಾರಿಯೂ ಈ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ಜಾರಿ ಇರುವ ಕರೋನಾ ನಿಯಂತ್ರಣ ಮಾರ್ಗಸೂಚಿಯ ಅನ್ವಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವುದೇ ಸೈಬರ್ ಕೇಂದ್ರಗಳು ತೆರೆಯದೇ ಇರುವುದರಿಂದ ಹಲವಾರು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತೊಂದರೆ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಆಸಕ್ತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಇಟಿ ಸಹಾಯ ಕೇಂದ್ರಗಳನ್ನು ಪ್ರಾರಂಭಿಸಿದೆ.
ಇದರ ಅನ್ವಯ ಈ ಕೆಳಗಿನ ಮೂರು ಸ್ಥಳಗಳಲ್ಲಿ ಸಹಾಯ ಕೇಂದ್ರಗಳು ಸ್ಥಾಪಿಸಲಾಗಿದೆ.
- ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯ, ವಿಶ್ವೋತ್ತಮ ನಗರ ಬಂಟಕಲ್ -574115 (ದೂರವಾಣಿ: 9611615001)
- ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್, ಭೂವರಾಹ ಕಾಂಪ್ಲೆಕ್ಸ್, ಸೋದೆ ವಾದಿರಾಜ ಮಠದ ಹತ್ತಿರ, ರಥಬೀದಿ ಉಡುಪಿ (ದೂರವಾಣಿ – 9964025695, 9945770599)
- .ಪ್ರೈಮ್ – ಗ್ರೇಸ್ ಮ್ಯಾನರ್ ಬಿಲ್ಡಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಉಡುಪಿ
(ದೂರವಾಣಿ -8317417350)
ಸಿಇಟಿ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು 22 ಜೂನ್ 2021ರಿಂದ 10 ಜುಲೈ 2021ರವರೆಗೆ ಈ ಮೇಲೆ ತಿಳಿಸಿದ ಕೇಂದ್ರ ಗಳಲ್ಲಿ ಪೂರ್ವಾಹ್ನ ಸಮಯ 9.3ರಿಂದ ಅಪರಾಹ್ನ ಸಮಯ 2 ರ ಒಳಗಡೆ (ಶನಿವಾರ – ಭಾನುವಾರ ಹೊರತುಪಡಿಸಿ) ಬಂದು ತಮ್ಮ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬಹುದು.
ಈ ಸಹಾಯ ಕೇಂದ್ರದ ಸೇವೆಯು ಸಂಪೂರ್ಣವಾಗಿ ಉಚಿತವಾಗಿದ್ದು, ವಿದ್ಯಾರ್ಥಿಗಳು ಈ ಸೇವೆಗೆ ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ. ಈ ಮೇಲಿನ ಸಹಾಯ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಬರುವ ವಿದ್ಯಾರ್ಥಿಗಳು/ಪೋಷಕರು ಕಡ್ಡಾಯವಾಗಿ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.










