ಕುಂದಾಪುರ (ಜೂ, 25): ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯ ದ್ರಷ್ಟಿಯಿಂದ ಆರಂಭಿಸಿದ “ಅಪ್ನಾ-ಸಪ್ನಾ” ಸಂಘಟನೆಯ ಆಶ್ರಯದಲ್ಲಿ ರಾಜ್ಯದ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಾವಿಶ್ಕಾರ್ ಎಂಬ ಈ ಸಾಂಸ್ಕೃತಿಕ ಉತ್ಸವದಲ್ಲಿ 21ಕ್ಕೂ ಹೆಚ್ಚೂ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ಸಾವಿಶ್ಕಾರ್ 2.0 ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂಬಿಕಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿನಾಯಕ ಭಟ್ ಇವರು ಉಪಸ್ಥಿತರಿದ್ದು ಕಾರ್ಯಕ್ರಮ ಶುಭಕೋರಿ ಮಾತನಾಡಿದರು. ಇಂದಿನ ಈ ಸಂಕೀರ್ಣ ಸನ್ನಿವೇಶದಲ್ಲಿ ತಂತ್ರಜ್ಞಾನದ ಸದುಪಯೋಗ ಮಾಡಿಕೊಂಡು ಎಲ್ಲ ಸ್ಥರದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿರುವುದು ಪ್ರಶಂಸನೀಯವಾದುದು. ವಿಧ್ಯಾರ್ಥಿಗಳು ತಮ್ಮೊಳಗಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಇಂತಹ ಸ್ಪರ್ದೆಗಳು ಉತ್ತಮ ವೇದಿಕೆ. ಕೋವಿಡ್ 19 ನಿಂದಾಗಿ ಪರಿಸ್ಥಿತಿ ತೀರ ಹದಗೆಟ್ಟಿದ್ದರೂ ಅದನ್ನು ಮಾನಸಿಕವಾಗಿ ಎದುರಿಸಲು ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿರಬೇಕು.ಈ ನಿಟ್ಟಿನಲ್ಲಿ ಮೂಡ್ಲಕಟ್ಟೆ ಕಾಲೇಜಿನವರು ಸಾವಿಶ್ಕಾರ್ ಎಂಬ ವರ್ಚುವಲ್ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಅಧ್ಯಕ್ಷೀಯ ಭಾಷಣ ಮಾಡಿ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಕಾಲೇಜಿನ ಡೀನ್, ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಮ್ ಬಿ ಎ ವಿದ್ಯಾರ್ಥಿನಿ ಮುಗ್ದ ಕಾರ್ಯಕ್ರಮ ನಿರೂಪಿಸಿದರು.