ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತೆ. ಕೆಲವರದ್ದು ಸುಪ್ತವಾಗಿರುತ್ತೆ, ಇನ್ನೂ ಕೆಲವರದ್ದು ಹುಟ್ಟುವಾಗಲೇ ರಕ್ತಗತವಾಗಿರುತ್ತದೆ. ಇನ್ನು ಕೆಲವು ಪ್ರತಿಭೆಗಳು ಯಾರ ಕಣ್ಣಿಗೂ ಕಾಣದೆ ಸುಪ್ತವಾಗಿಯೇ ಇದ್ದು ಎಲ್ಲೋ ಅಡಗಿ ಮರೆಯಾಗಿ ಹೋಗುತ್ತದೆ. ಮತ್ತೆ ಕೆಲವರದ್ದು ಕಲೆ ಪರಿಚಯಸುವವರ ಕಣ್ಣಿಗೆ ಬಿದ್ದು ಅದಕ್ಕೊಂದು ರೂಪ ಬಂದು ಅದು ಜಗಕ್ಕೆ ತೋರ್ಪಡಿಸುವಂತಗುತ್ತದೆ.
ಕಲೆಯೇ ಉಸಿರು, ಜೀವಾಳ ಎಂದು ಬದುಕಿನೂದ್ದಕ್ಕೂ ಕಲಾ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಎಂಬ ಗಿಡಕ್ಕೆ ನೀರು ಹಾಕಿ ಹೆಮ್ಮರವಾಗಿ ಬೆಳೆಯಲು ಅವಕಾಶಗಳು ಸಿಗಲಿ ಎಂದು ಆಶಿಸುತ್ತಾ ,ನಿಮಗೆ ಯುವ ಕಲಾವಿದ ಮಾರುತಿ ಟಿ ಡಿ ಬೈಂದೂರು ರವರನ್ನು ಪರಿಚಯಿಸಲು ಸಂತೋಷ ಪಡುತ್ತೇವೆ.
ಯುವ ಕಲಾವಿದ ಮಾರುತಿ ಟಿ ಡಿ ಬೈಂದೂರು ಮೂಲತಃ ನಮ್ಮ ಕರಾವಳಿ ಭಾಗದವರು. ತಂದೆ ದಿ.ತಾರನಾಥ ದೇವಾಡಿಗ, ತಾಯಿ ಸರಸ್ವತಿ ದೇವಾಡಿಗ. ಇವರು 1994 ರ ಅಕ್ಟೋಬರ್ 28 ರಂದು ಕುಂದಾಪುರದಲ್ಲಿ ಜನಿಸಿದರು. ಇವರ ತಂದೆಯ ಹುಟ್ಟೂರು ಭಟ್ಕಳ. ದೇವರ ವಾದ್ಯ ವಾದಕರಾಗಿ ವೃತ್ತಿ ಮಾಡುತ್ತಿದ್ದು ಯಕ್ಷಗಾನ ಮತ್ತು ನಾಟಕದಲ್ಲಿ ಅಭಿನಯಿಸುತಿರುತ್ತಾರೆ.
ತಂದೆಯ ಕಲಾಸಕ್ತಿ ಇವರ ಮೇಲೆ ಅಪಾರ ಪ್ರಭಾವ ಬಿರೀತ್ತು. ತಂದೆಯೇ ಮಾರುತಿಯವರ ಮೊದಲ ಗುರು. ಚಿಕ್ಕ ವಯಸ್ಸಿನಲ್ಲಿ ಭಟ್ಕಳದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರೈಸಿದ ಮಾರುತಿ ತನ್ನ ತಂದೆಯ ನಿಧನದ ನಂತರ ತಾಯಿಯ ಹುಟ್ಟೂರಾದ ಬೈಂದೂರಿಗೆ ಬಂದು ನೆಲೆಸುತ್ತಾರೆ. ತಾಯಿ ಕಷ್ಟಪಟ್ಟು ದುಡಿದು ತನ್ನ ಮಗನನ್ನು ಬಿ.ಕಾಂ ಪದವಿ ತನಕ ಓದಿಸುತ್ತಾರೆ. ತಂದೆಯಿಲ್ಲದ ಕೊರಗು ಕಾಣಿಸದಂತೆ ನಮ್ಮನ್ನು ಅಮ್ಮ ಸಾಕಿದ್ದಾಳೆ ಎಂದು ಮಾರುತಿ ನೆನೆಯುತ್ತಾರೆ.ಶಾಲಾ -ಕಾಲೇಜು ದಿನಗಳಲ್ಲಿ ಮಾರುತಿ ಓದಿನ ಜೊತೆಗೆ ಕಲೆ, ಸಾಹಿತ್ಯ ವಿಷಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಬೈಂದೂರಿನ ಬಾಡಾ ಶಾಲೆಯಲ್ಲಿ ಮುಗಿಸಿದ ಮಾರುತಿ ಶಾಲಾ ದಿನದಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ ಇನ್ನೂ ಮುಂತಾದ ಶಾಲಾ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿರುತ್ತಾರೆ. ಪ್ರತಿಭಾ ಕಾರಂಜಿಯಲ್ಲಿ ಶಾಲೆಯನ್ನು ಪ್ರತಿನಿಧಿಸಿ,ತಾಲ್ಲೂಕು, ಜಿಲ್ಲಾ ಮಟ್ಟದವರೆಗೂ ಸಾಗಿದ್ದಾರೆ ಎನ್ನುವುದು ಅವರ ಶಾಲಾ ದಿನಗಳ ನೆನಪು .ಮಾರುತಿ ಈಗ ಬೈಂದೂರಿನಲ್ಲಿ ರಂಗಭೂಮಿ ಕಲಾವಿದನಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ .ನಾಟಕ, ಸಾಹಿತ್ಯದ ಓದು, ಚಿತ್ರಕಲೆ ಮಣ್ಣಿನ ಮೂರ್ತಿ ರಚಿಸುವುದು, ಸಿನಿಮಾ ಇವೆಲ್ಲ ಮಾರುತಿಯವರ ಆಸಕ್ತಿಯ ವಿಷಯಗಳು. ತಾನು ಪಿಯುಸಿ ಓದುತ್ತಿರುವಾಗ ನಾನು ಮಾಡಿದ ನಾಟಕಗಳನ್ನು ನೋಡಿ ತನ್ನ ಇತಿಹಾಸ ಶಿಕ್ಷಕರಾದ ಪ್ರದೀಪ್ ಕುಮಾರ್ ಶೆಟ್ಟಿಯವರು ತನ್ನನ್ನು ನೀನಾಸಂಗೆ ಸೇರಿಕೊಳ್ಳಲು ಸಲಹೆ ನೀಡುತ್ತಾರೆ.ಅಲ್ಲಿಂದ ತನ್ನ ಕಲಾ ಬದುಕಿಗೆ ದೊಡ್ಡ ಮಟ್ಟದ ತಿರುವು ಸಿಕ್ಕುತ್ತದೆ ಸದಾ ನನ್ನನ್ನು ಹುರಿದುಂಬಿಸುವ ಗುರುಗಳು ಪ್ರದೀಪ್ ಕುಮಾರ್ ಶೆಟ್ಟಿ ಅವರು ಎಂದು ಮಾರುತಿ ತನ್ನ ಇತಿಹಾಸ ಶಿಕ್ಷಕರ ಬಗ್ಗೆ ಹೆಮ್ಮೆ ಪಡುತ್ತಾರೆ.
ಬಿಕಾಂ ಪದವಿ ಶಿಕ್ಷಣವನ್ನು ಮುಗಿಸಿದ ನಂತರ ಮಾರುತಿ ನೀನಾಸಂಗೆ ತೆರಳಿ ಅಲ್ಲಿನ ಶಿಬಿರಾರ್ಥಿಯಾಗಿ ಒಂದಷ್ಟು ರಂಗಭೂಮಿ ಕುರಿತಾದ ತರಬೇತಿಯನ್ನು ಪಡೆಯುತ್ತಾರೆ. ನಂತರ ಅನ್ವೇಷಕರು ಆರ್ಟ್ ಫೌಂಡೇಶನ್ ಎಂಬ ದಾವಣಗೆರೆಯ ರಂಗಸಂಸ್ಥೆಯನ್ನು ಸೇರಿಕೊಂಡು ಅಲ್ಲಿನ ಗುರುಗಳಾದ ಸಿದ್ಧರಾಜು ಅವರಲ್ಲಿ ಸಾಕಷ್ಟು ರಂಗಭೂಮಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಸುಮಾರು 3ನಾಟಕಗಳನ್ನು ರಚಿಸುವುದರ ಜೊತೆಗೆ 3 ನಾಟಕದ ಮುಖ್ಯ ಪಾತ್ರದಲ್ಲಿ ಮಾರುತಿ ಕರ್ನಾಟಕದ ಸುಮಾರು ನೂರೈವತ್ತರಿಂದ ಇನ್ನೂರು ಪ್ರದರ್ಶನಗಳನ್ನು ಪೂರೈಸುತ್ತಾರೆ. ಅಲ್ಲಿನ ನಾಟಕದ ನಿರ್ದೇಶಕರಾದ ಮಧುಸೂದನ್ ಕೊಡಗು (ನೀನಾಸಂ) ಇವರ ಸರಳ ವ್ಯಕ್ತಿತ್ವ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ ಎಂದು ಮಾರುತಿ ಅವರನ್ನು ನೆನೆಯುತ್ತಾರೆ. ಬೈಂದೂರಿನ ರಂಗ ತಂಡಗಳಾದ ಲಾವಣ್ಯ ಮತ್ತು ಸುರಭಿ ಜೊತೆಗಿನ ಒಡನಾಟ ರಂಗ ವಿಷಯವನ್ನು ನನಗೆ ಬಹಳ ತಿಳಿಸಿ ಕೊಟ್ಟಿದೆ ಎನ್ನುತ್ತಾರೆ. ಮಾರುತಿ ಶಿಕ್ಷಣದ ನಂತರ ಊರು ಬಿಟ್ಟು ಹೊರಗೆ ಹೋದ ಕಾರಣದಿಂದಾಗಿ ತಾನು ಸ್ವಂತ ಊರಿನಲ್ಲಿ ರಂಗಚಟುವಟಿಕೆಯನ್ನು ಮಾಡಿರುವುದು ಕಡಿಮೆ. ಮುಂದಿನ ದಿನಗಳಲ್ಲಿ ಸಾಕಷ್ಟು ಕೆಲಸ ಮಾಡಬೇಕು ಎಂಬ ಆಸೆಯನ್ನು ಹೊತ್ತಿದ್ದೇನೆ ಎನ್ನುತ್ತಾರೆ. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದು ಬೆಂಗಳೂರಿನ ರಂಗ ತಂಡವಾದ ರಂಗ ವಸಂತ ಮತ್ತು ರಂಗನಿರಂತರ ದಲ್ಲಿ ಸದಸ್ಯನಾಗಿ ,ನಟನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮಾರುತಿ ಹೇಳುತ್ತಾರೆ. ರಂಗಭೂಮಿಯ ಎಲ್ಲಾ ವಿಷಯದಲ್ಲೂ ನನಗೆ ಆಸಕ್ತಿ ಇದ್ದು ನಾನು ಮಾಡಿರುವ ಕೆಲಸಗಳು ಕಡಿಮೆ, ಕಲಿಯುವುದು ಇನ್ನೂ ತುಂಬಾ ಇದೆ ಎಂದು ಹೇಳುತ್ತಾರೆ. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಇದರ ನಿರ್ದೇಶಕರಾದ ಸಿ. ಬಸವಲಿಂಗಯ್ಯ ಅವರು ನನ್ನ ನೆಚ್ಚಿನ ಗುರುಗಳು, ಅವರು ನಿರ್ದೇಶಿಸಿದ ಕನ್ನಗತ್ತಿ ಮತ್ತು ರಂಗಭೂಮಿಯಲ್ಲಿ ಇತಿಹಾಸ ಬರೆದ ರಾತ್ರಿಪೂರ್ತಿ ರಂಗಪ್ರಯೋಗ ವಾದ ಸುಮಾರು 9ಗಂಟೆಗಳ ನಾಟಕ . ಮಲೆಗಳಲ್ಲಿ ಮದುಮಗಳು ಇದರಲ್ಲಿ ತಾನು ಅಭಿನಯಿಸಿದ್ದು ಈ ನಾಟಕ ನನಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿದೆ ಸಾಕಷ್ಟು ಸ್ನೇಹಿತರು ಮತ್ತು ಅಭಿಮಾನಿ ಬಳಗವನ್ನು ಈ ನಾಟಕ ನನಗೆ ಕೊಟ್ಟಿದೆ ಎಂದು ಹೇಳುತ್ತಾರೆ.
ಕನ್ನಗತ್ತಿ, ದಾಸವರೇಣ್ಯ ಪುರಂದರದಾಸರು, ಕನಸುಗಾರ ಕಲಾಂ,ಬೆಪ್ಪುತಕ್ಕಡಿ, ಬೋಳೇಶಂಕರ,
ಕೃಷ್ಣೇಗೌಡನ ಆನೆ, ಮಲೆಗಳಲ್ಲಿ ಮದುಮಗಳು, ಮೃಚ್ಛಕಟಿಕ, ಕೃಷ್ಣ ಸಂಧಾನ ಈ ನಾಟಕ ಗಳಲ್ಲಿ ಅಭಿನಯಿಸಿದ್ದು ಪ್ರತಿ ನಾಟಕದಲ್ಲೂ ಭಿನ್ನ ಪಾತ್ರಗಳು ವಿಶೇಷ ಅನುಭವ ಮತ್ತು ಕಲಿಕೆಯನ್ನು ಪಡೆದಿದ್ದೇನೆ ಎಂದು ಹೇಳುತ್ತಾರೆ. ಎಷ್ಟೋ ಜನ ನಿರ್ದೇಶಕರು ಮತ್ತು ರಂಗ ಗೆಳೆಯರು ನನ್ನ ಕಲಾ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ ಅವರಿಂದ ನಾನು ಸಾಕಷ್ಟು ವಿಷಯವನ್ನು ಕಲಿತಿದ್ದೇನೆ ಎಂದು ಮಾರುತಿ ಹೇಳುತ್ತಾರೆ . ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿರುವ ಮಾರುತಿಗೆ ಕುಟುಂಬದ ಜವಾಬ್ದಾರಿಗಳಿವೆ. ಕಲಾವಿದನಾಗಿ ಸಾಧನೆಯ ಗುರಿ ಮುಟ್ಟಲು ಸಾಕಷ್ಟು ತೊಂದರೆಗಳಿವೆ, ಆದರೂ ಇಷ್ಟಪಟ್ಟ ಕ್ಷೇತ್ರವಾದುದರಿಂದ ನನಗೆ ಅದು ಕಷ್ಟ ಎನಿಸುವುದಿಲ್ಲ ನನ್ನ ಕುಟುಂಬ ವರ್ಗವು ಸದಾ ನನಗೆ ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ಮಾರುತಿ ಹೇಳುತ್ತಾರೆ. ಒಳ್ಳೆಯ ಸ್ನೇಹಿತರ ವರ್ಗ ನನ್ನಲ್ಲಿದೆ ಎಂದು ಮಾರುತಿ ಹೆಮ್ಮೆಪಡುತ್ತಾರೆ. ಕಲೆಯನ್ನು ವೃತ್ತಿಯಾಗಿ ತೆಗೆದುಕೊಂಡಿಲ್ಲ ಅದು ನನಗೆ ಫ್ಯಾಶನ್, ಕಲಾ ಪ್ರಪಂಚದಲ್ಲಿ ಏನಾದರೂ ಸಾಧಿಸುವುದು ನನ್ನ ಗುರಿ.
ಜೀವನೋಪಾಯಕ್ಕಾಗಿ ನಾನು ಹಲವು ಕಂಪನಿಗಳಲ್ಲಿ, ಹೋಟೆಲ್ ಉದ್ಯಮದಲ್ಲಿ ,ಸಾರಿಗೆ ಕ್ಷೇತ್ರದಲ್ಲಿ, ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತೇನೆ ಎಂದು ಮಾರುತಿ ಹೇಳುತ್ತಾರೆ .ಸಾಕಷ್ಟು ಸಂಘಸಂಸ್ಥೆಗಳಲ್ಲಿ ಸದಸ್ಯನಾಗಿರುವ ಮಾರುತಿಗೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಆಸೆ ಇದ್ದು ,ತನ್ನ ಕೈಲಾದಷ್ಟು ಸಮಾಜ ಸೇವಾ ಕೆಲಸಗಳನ್ನು ಮಾಡುತ್ತಿರುತ್ತಾರೆ .ಬಡವರ ಬದುಕಿಗಾಗಿ ಕಟ್ಟೋಣ ನಾಡೊಂದನು ಎಂಬ ಶೀರ್ಷಿಕೆಯಡಿಯಲ್ಲಿ ನಿರ್ಮಾಣವಾದ ಕರ್ನಾಟಕ ವಿಶ್ವಮಾನವ ಸೇನೆ ಎಂಬ ಸಮಾಜ ಸೇವಾ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಕೂಡ ಮಾರುತಿ ಕೆಲಸ ಮಾಡುತ್ತಿದ್ದಾರೆ. ರಂಗಭೂಮಿಯಿಂದ ಸಿನಿಮಾ ಮತ್ತು ಕಿರುತೆರೆಗೆ ಕಾಲಿಟ್ಟಿರುವ ಮಾರುತಿ ಈಗ ಕಿರುತೆರೆಯ ಗೀತಾ ಧಾರಾವಾಹಿ ಸೇರಿದಂತೆ ಕೆಲ ಧಾರಾವಾಹಿಗಳ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ನಿರ್ದೇಶಕರಾದ ಪಂಚಾಕ್ಷರಿ ಇವರ ಸೂರ್ಯನ ಕುದುರೆ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಯಾಕೂಬ್ ಖಾದರ್ ಗುಲ್ವಾಡಿ ಇವರು ನಿರ್ದೇಶಿಸಿದ ಆ ತೊಂಬತ್ತು ದಿನಗಳು ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಟನೆ ಮತ್ತು ನಿರ್ದೇಶನ ಎರಡೂ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಾರುತಿ ತನ್ನ ಕಲಾ ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಕಷ್ಟು ಏಳು ಬೀಳು ಟೀಕೆಗಳನ್ನು ಕಂಡರೂ ಅದು ಯಾವುದನ್ನೂ ಲೆಕ್ಕಿಸದೆ ಎಲ್ಲವನ್ನು ಸಹಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ತನ್ನ ಜೀವನದಲ್ಲಿ ನನಗೆ ಎಷ್ಟೋ ವ್ಯಕ್ತಿಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸ್ಫೂರ್ತಿಯಾಗಿದ್ದಾರೆ, ಎಷ್ಟೋ ಜನರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ ಅವರನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳುತ್ತಾರೆ. ತನ್ನ ಊರಾದ ಬೈಂದೂರಿಗೆ ಏನಾದರು ಒಂದು ಕೊಡುಗೆಯನ್ನು ನೀಡಬೇಕು, ನನ್ನ ಊರಿಗೆ ಕೀರ್ತಿಯನ್ನು ತರಬೇಕು ಎನ್ನುವುದು ನನ್ನ ಕನಸು ಎಂದು ಆಸೆಯನ್ನು ವ್ಯಕ್ತಪಡಿಸುತ್ತಾರೆ. ಇಂತಹ ಪ್ರತಿಭೆ, ವ್ಯಕ್ತಿತ್ವ ಒಂದು ಸದೃಢ ಸಂಕಲ್ಪ ಇರುವ ಮಾರುತಿಯವರಿಗೆ ಭವಿಷ್ಯದಲ್ಲಿ ಕಲಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಲಭಿಸಲಿ ಎನ್ನುವ ಆಶಯ ನಮ್ಮದು.

ಲೇಖನ: ಈಶ್ವರ. ಸಿ. ನಾವುಂದ

















Shubhashaya Maruti
ಉತ್ತಮವಾದ ಲೇಖನ ಇವರ ಬಗ್ಗೆ ಪರಿಚಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
Good job.. best of luck