ಗೆಲ್ಲಲೇಬೇಕೆಂದು ಮನದೊಳಗೆ
ಪಣತೊಟ್ಟವನೊಬ್ಬ
ಅಡಿಗಡಿಗೆ ಸೋತ, ಮತ್ತೆ ಸೋತ
ಸೋಲುತ್ತಲೇ ಹೋದ
ಕೆಲವೊಮ್ಮೆ ನಿಕೃಷ್ಟವಾಗಿ
ಅವನು ಪ್ರತೀ ಸೋಲಿನಿಂದಲೂ ಕಲಿತದ್ದು
ಹೇಗೆಲ್ಲ ಸೋಲಬಹುದು ಎಂಬುದನ್ನು.
ಸೋತಾಗಲೆಲ್ಲ ಪಟ್ಟಿಮಾಡಿಕೊಂಡ
ತಪ್ಪು ಹೆಜ್ಜೆ ತಪ್ಪು ಊಹೆ
ತಪ್ಪು ಲೆಕ್ಕಾಚಾರ ತಪ್ಪು ಯೋಜನೆ
ಎಲ್ಲವನ್ನೂ ಟಿಪ್ಪಣಿ ಮಾಡಿಕೊಂಡ
ತಪ್ಪುಗಳಿಗೆಲ್ಲ ಉತ್ತರ ಹುಡುಕುತ್ತಾ
ಸರಿಯಾಗಿಸುತ್ತಾ ಸಾಗಿದ
ಸೋಲಿನೆಲ್ಲಾ ದಾರಿಯನ್ನೂ ಕಂಡುಕೊಂಡ
ಸೋಲಿನ ಪಾಠಗಳಿಗೆ ವೀಷಯವಾಗಿಯೇ ಗುರುವಾಗಿಬಿಟ್ಟ
ಈಗ ಅವನಿಗೆ ನೂರಾರು ಶಿಷ್ಯರು
ಎಲ್ಲರೂ ಗೆಲ್ಲುತ್ತಿದ್ದಾರೆ
ಒಂದೊಂದು ಗೇಲುವೂ ಮೈಲಿಗಲ್ಲೇ
ಸೋತವನೊಬ್ಬನ ಗೆಲುವುಗಳು
ಬೆಳಕನ್ನು ಹರಿಸುತ್ತಿವೆ ಕತ್ತಲ ದಾರಿಯಲ್ಲಿ
ಎಂದೂ ಸೋಲರಿಯದಂತೆ…..
ಕಿಗ್ಗಾಲು.ಜಿ.ಹರೀಶ್