ಬೈಂದೂರು(ಆ.19): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ , ಬೈಂದೂರು -ಶಿರೂರು ಘಟಕ ಇದರ “ಸಂಭ್ರಮ 2023″ಅಂಗವಾಗಿ ಉಡುಪಿ ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಕಡಲ ತೀರದಲ್ಲಿ ಒಂದಾದ ಅಳ್ವೆಗದ್ದೆ ಬೀಚ್ ನಲ್ಲಿ ಕರಾವಳಿ ಕಾವಲು ಪಡೆಯ ಸಹಕಾರದೊಂದಿಗೆ ಕಡಲತೀರ ಸ್ವಚ್ಛತೆ ಮತ್ತು ಉದ್ಯಾನ ನಿರ್ಮಾಣ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಡಲ ತೀರದಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ತ್ಯಾಜ್ಯಗಳನ್ನು ಆಯ್ದು ಪ್ರತ್ಯೇಕಿಸಿ ಗ್ರಾಮ ಪಂಚಾಯತ್ನ ವಾಹನದಲ್ಲಿ ಸಾಗಿಸಲಾಯಿತು.ಪ್ರವಾಸಿಗರಿಗೆ ನೆರಳು ನೀಡುವ ಹಾಗೂ ಮರಳನ್ನು ಸಂರಕ್ಷಿಸುವ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಕಾರ್ಯಕ್ರಮಕ್ಕೆ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಸಂಘಟನೆಯ ಗೌರವ ಸಲಹೆಗಾರರಾದ ರಾಮ ಎನ್. ಮೊಗವೀರ ಅಳ್ವೆಗದ್ದೆ ಅವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ನಾರಾಯಣ ಟಿ. ಅಳ್ವೆಗದ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ಎರಡನೇ ಬಾರಿ ಯುವಕರೆಲ್ಲಾ ಸೇರಿ ಪರಿಸರ ಜಾಗೃತಿಯ ಈ ಕಾರ್ಯಕ್ರಮ ಆಯೋಜಿಸಿದ್ದು ಅತ್ಯುತ್ತಮ ಕಾರ್ಯ ಎಂದು ಶುಭ ಹಾರೈಸಿದರು.
ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಮತ್ತು ಸರಕಾರ ಕೈಜೋಡಿಸಿದಲ್ಲಿ ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯದ ವ್ಯವಸ್ಥೆ ಕಲ್ಪಿಸಿದಾಗ ಮುಂದಿನ ದಿನದಲ್ಲಿ ಈ ಬೀಚ್ ಪಶ್ಚಿಮ ಕರಾವಳಿಯ ಅತ್ಯುತ್ತಮ ಬೀಚ್ ಆಗಲಿ ಎಂದು ಸಂಘಟನೆ ಬಯಸುತ್ತದೆ ಎಂದು ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ರವಿರಾಜ ಚಂದನ್ ಕಳವಾಡಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಗೌತಮ್ ತಗ್ಗರ್ಸೆ, ಘಟಕದ ಉಪಾಧ್ಯಕ್ಷರಾದ ಲಕ್ಷ್ಮಣ್ ಮೊಗವೀರ, ನಾಗರಾಜ್ ಕೋಟೆಬಾಗಿಲು, ಹರೀಶ್ ಮಯ್ಯಾಡಿ, ರಾಘವೇಂದ್ರ ಕಷ್ಟಮ, ರಾಘವೇಂದ್ರ ಕಳವಾಡಿ, ರಕ್ಷಿತಾ ಕಳವಾಡಿ ,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಸಾವಿತ್ರಿ ಎನ್. ಅಳ್ವೆಗದ್ದೆ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳಾದ ಸ್ಥಳೀಯ ಶ್ರೀ ದಾಮೋದರ್ ಮತ್ತು ಶ್ರೀ ಲೋಕೇಶ್ ಮೊಗೇರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಊರ ಗ್ರಾಮಸ್ಥರು ಉಪಸ್ಥಿತರಿದ್ದರು.