ಉಡುಪಿ (ಜೂ, 21): ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದ ಕುರಿತು ಯುವ ಜನತೆಯಲ್ಲಿ ಆಸಕ್ತಿ ಹಾಗೂ ಕಾಳಜಿ ಮೂಡಿಸುವ ನೆಲೆಯಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನವು ಉಡುಪಿಯಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಉದ್ಘಾಟನಾ ಸಮಾರಂಭ ಜುಲೈ 20 ರ ಮಂಗಳವಾರದಂದು ಜರುಗಿತು.
ಶ್ರೀ ಶಶಿಕಾಂತ್ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯಕ್ಷಗಾನ ಹಾಗೂ ಈ ಸಂಸ್ಥೆಯ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸುವ ಕಾರ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಹೆಜ್ಜೆಗಾರಿಕೆಯನ್ನು ಗುರುಗಳಿಂದ ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲಿ ಎಂದು ಅವರು ಹೇಳಿದರು.
ಖ್ಯಾತ ಮಕ್ಕಳ ತಜ್ಞರಾದ ಡಾ |ಸುನೀಲ್ ಮುಂಡ್ಕೂರು ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾರಿ ವಿಂಧ್ಯಾ ಆಚಾರ್ಯ ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ರವರನ್ನು ಪರಿಚಯಿಸಿದರು. ಶ್ರೀಮತಿ ಸ್ನೇಹಾ ಆಚಾರ್ಯ ವಂದಿಸಿದರು. ಶ್ರೀ ರವಿನಂದನ್ ಭಟ್, ಸ್ವಾಗತದೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ರವರು ಕಳೆದ 4 ವರ್ಷಗಳಿಂದ ಉಡುಪಿಯ ಸೋದೆ ಮಠದಲ್ಲಿ ಸುಮಾರು 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸಂಸ್ಥೆಯ ಮೂಲಕ ಉಚಿತವಾಗಿ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಪ್ರತಿಷ್ಠಾನದ ಈ ಸತ್ಕಾರ್ಯಕ್ಕೆ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ಶ್ರೀಪಾದರು ತಮ್ಮ ಮಠದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟು ಈ ಕಾರ್ಯ ಯಶಸ್ವಿಯಾಗಿ ನಡೆಯಲು ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಿದ್ದಾರೆ.
ಹೊಸ ತರಗತಿಯ ಸಮಯ ಪ್ರತೀ ಮಂಗಳವಾರ ಸಂಜೆ ಗಂಟೆ 5.00ರಿಂದ 6.00ರವರೆಗೆ ನಡೆಯಲಿರುವುದು. ಯುವ ಯಕ್ಷಗಾನ ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ವತಿಯಿಂದ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ: ಸಂಖ್ಯೆ 9844212104 / 9663424981/9845150802 ಸಂಪರ್ಕಿಸಬಹುದು.