ಮುಸ್ಲಿಂ ಸಮುದಾಯ ಆಚರಿಸುವ ಹಬ್ಬಗಳಲ್ಲಿ ರಂಜಾನ್ ಮತ್ತು ಬಕ್ರೀದ್ ಪ್ರಮುಖವಾದುದು. ರಂಜಾನ್, ಮುಸ್ಲಿಂ ಸಮುದಾಯ ತಮ್ಮ ಬದುಕಿನಲ್ಲಿ ಅನುಸರಿಸಬೇಕಾದ 5 ಪ್ರಮುಖ ತತ್ವಗಳಲ್ಲಿ ಒಂದಾದರೆ, ಬಕ್ರೀದ್ ತ್ಯಾಗದ ಪ್ರತೀಕವಾಗಿ ಆಚರಿಸಲಾಗುತ್ತದೆ.
ಬಕ್ರೀದ್ ನ್ನು ಈದ್-ಉಲ್-ಅದಾ ಎಂದು ಸಹ ಕರೆಯುತ್ತಾರೆ. ಈದ್-ಉಲ್-ಅದಾ(ಬಕ್ರೀದ್) ಇದರ ಹಿಂದೆ ಒಂದು ರೋಚಕ ಇತಿಹಾಸವೇ ಇದೆ. ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹು ಯಾರನ್ನು ಹೆಚ್ಚು ಪ್ರೀತಿಸುತ್ತಾನೋ ಅಂತಹ ವ್ಯಕ್ತಿಗಳಿಗೆ ಕಷ್ಟ ಕೊಟ್ಟು ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾನೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಅಲ್ಲಾಹು ತನ್ನ ಭಕ್ತ ಇಬ್ರಾಹಿಂ- ಅಲೈಹಿ- ಸಲಾಂ ನನ್ನು ಪರೀಕ್ಷೆ ಮಾಡುತ್ತಾನೆ. ಒಂದು ರಾತ್ರಿ ಈತನ ಕನಸಿನಲ್ಲಿ ಅಲ್ಲಾಹು ಬಂದು ನಿನ್ನ ಪ್ರೀತಿಯ ವಸ್ತುವನ್ನು ನನಗಾಗಿ ತ್ಯಾಗ ಮಾಡಬೇಕು ಎಂದಾಗ ಇಬ್ರಾಹಿಂ- ಅಲೈಹಿ- ಸಲಾಂ ತನ್ನಲ್ಲಿರುವ ಎಲ್ಲಾ ಒಂಟೆಗಳನ್ನು ಅಲ್ಲಾಹುವಿಗೆ ಸಮರ್ಪಣೆ ಮಾಡುತ್ತಾನೆ .ಆದರೆ ಈತನ ತಾಳ್ಮೆಯನ್ನು ಇನ್ನೂ ಪರೀಕ್ಷೆ ಮಾಡಲು ಮತ್ತೊಮ್ಮೆ ಕನಸಿನಲ್ಲಿ ಬಂದು ನಿನಗೆ ತುಂಬಾ ಇಷ್ಟವಾದ್ದನ್ನು ನನಗೆ ಸಮರ್ಪಿಸಬೇಕು ಎಂದು ಹೇಳಿದಾಗ ಇಬ್ರಾಹಿಂ- ಅಲೈಹಿ- ಸಲಾಂ ಯೋಚನೆ ಮಾಡುತ್ತಾನೆ. ನನ್ನಲ್ಲಿರುವ ಎಲ್ಲಾ ವಸ್ತುಗಳನ್ನು ಅಲ್ಲಾಹುವಿಗೆ ಸಮರ್ಪಿಸಿದೆ ಈಗ ನನಗೆ ತುಂಬಾ ಹತ್ತಿರವಾದ ಹಾಗೂ ಇಷ್ಟವಾದ ವಸ್ತುವೆಂದರೆ ಅದು ನನ್ನ ಮಗ ಇಸ್ಮಾಯಿಲ್.
ಇಬ್ರಾಹಿಂ- ಅಲೈಹಿ- ಸಲಾಂ ಅಲ್ಲಾಹುವಿಗೆ ತನ್ನ ಮಗನನ್ನು ತ್ಯಾಗ ಮಾಡಲು ಸಿದ್ಧನಾಗುತ್ತಾನೆ .ಆದರೆ ಈ ಮಾತನ್ನು ತನ್ನ ಪತ್ನಿ ಬಿಬಿ ಹಾಜಿರಾ ಗೆ ಹೇಳಲಾಗದೆ ಚಿಂತಾಕ್ರಾಂತನಾಗುತ್ತಾನೆ .ಯಾಕೆಂದರೆ ಹಜಿರಾ ತನ್ನ ಮಗನನ್ನು ತುಂಬಾ ಪ್ರೀತಿ ಹಾಗೂ ಮಮತೆಯಿಂದ ಸಾಕಿರುತ್ತಾಳೆ.ಆದರೆ ಇಬ್ರಾಹಿಂ- ಅಲೈಹಿ- ಸಲಾಂ ತನ್ನ ಪತ್ನಿಗೆ ಯಾವುದನ್ನು ತಿಳಿಸುದಿಲ್ಲ. ಒಂದು ದಿನ ಪತ್ನಿ ಹಜಿರಾಳ ಬಳಿ ಬಂದು ಮಗನಿಗೆ ತುಂಬಾ ಚೆಂದವಾಗಿ ಬಟ್ಟೆಯನ್ನು ತೊಡಿಸಲು ಹೇಳಿ, ಅವನನ್ನು ತನ್ನ ಸ್ನೇಹಿತನ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಸುಳ್ಳು ಹೇಳುತ್ತಾನೆ. ಹಾಜಿರಾ ಪತಿಯ ಮಾತನ್ನು ಪಾಲಿಸಿ ಮಗನನ್ನು ಕಳುಹಿಸಿ ಕೊಡುತ್ತಾಳೆ.
ಇಬ್ರಾಹಿಂ- ಅಲೈಹಿ- ಸಲಾಂ ತನ್ನ ಮಗನನ್ನು ಬಲಿದಾನಕ್ಕೆಂದು ಕರೆದುಕೊಂಡು ಹೋಗುವಾಗ ಪಿಶಾಚಿಯೊಂದು ಬಿಬಿ ಹಾಜಿರಾಳ ಬಳಿ ಬಂದು ಪತಿ ತನ್ನ ಮಗನನ್ನು ಎಲ್ಲಿಗೆ ಮತ್ತು ಏಕೆ ಕರೆದುಕೊಂಡು ಹೋಗುತ್ತಿದ್ದಾನೆ ಎನ್ನುವ ವಿಷಯವನ್ನು ತಿಳಿಸುತ್ತದೆ. ಆದರೆ ಬಿಬಿ ಹಾಜಿರಾ ಈ ವಿಷಯ ತಿಳಿದು ಸ್ವಲ್ಪವೂ ವಿಚಲಿತಳಾಗದೆ ತನ್ನ ಪತಿ ಮಗನನ್ನು ಅಲ್ಲಾಹುಗಾಗಿ ಸಮರ್ಪಣೆ ಮಾಡುತ್ತಿರುವುದು ನನಗೆ ಹೆಮ್ಮೆಯ ವಿಷಯ ಎಂದು ಹೇಳುತ್ತಾಳೆ.
ಪಿಶಾಚಿಯು ಇಬ್ರಾಹಿಂ- ಅಲೈಹಿ- ಸಲಾಂ ಬಳಿ ಬಂದು ನೀನು ಯಾಕೆ ನಿನ್ನ ಮಗನನ್ನು ಅಲ್ಲಾಹುಗಾಗಿ ತ್ಯಾಗ ಮಾಡುತ್ತೀಯಾ ? ಇದರಿಂದ ನಿನಗೆ ಏನು ಸಿಗುತ್ತದೆ ? ಆತನನ್ನು ಬಲಿದಾನ ಮಾಡಬೇಡ ಎಂದು ಹೇಳಿ ಇಬ್ರಾಹಿಂ- ಅಲೈಹಿ- ಸಲಾಂ ನನ್ನು ತನ್ನ ಕಡೆಗೆ ಸೆಳೆಯುತ್ತದೆ .ಆದರೆ ಇಬ್ರಾಹಿಂ- ಅಲೈಹಿ- ಸಲಾಂ ಅಲ್ಲಾಹುಗಾಗಿ ನಾನು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧ , ನನ್ನ ಬಳಿ 100 ಮಕ್ಕಳಿದ್ದರೂ ಅಲ್ಲಾಹುಗಾಗಿ ತ್ಯಾಗ ಮಾಡುತ್ತೇನೆ ಎಂದು ಪಿಶಾಚಿಗೆ ಪ್ರತ್ಯುತ್ತರ ನೀಡುತ್ತಾನೆ .ಪಿಶಾಚಿಗೆ ಈತನ ತ್ಯಾಗದ ಭಾವನೆ ಅರ್ಥವಾಗದೆ ಹೋಗುತ್ತದೆ.
ಇಬ್ರಾಹಿಂ- ಅಲೈಹಿ- ಸಲಾಂ ಅಲ್ಲಾಹುವಿಗೆ ಮಗನನ್ನು ಸಮರ್ಪಣೆ ಮಾಡಲು ಮುಂದಾಗುವಾಗ ಮಗ ಇಸ್ಮಾಯಿಲ್ ಅಪ್ಪನ ಬಳಿ ಒಂದು ಮಾತನ್ನು ಹೇಳುತ್ತಾನೆ .ಅಪ್ಪ … ನಿನಗೆ ತುಂಬಾ ವಯಸ್ಸಾಗಿದೆ, ನಿನಗೆ ನನ್ನನ್ನು ಬಲಿದಾನ ಮಾಡುವಾಗ ನೋವು ಜೊತೆಗೆ ಬೇಸರವಾಗಬಹುದು . ಆದ್ದರಿಂದ ನೀನು ಕಣ್ಣಿಗೆ ಬಟ್ಟೆ ಕಟ್ಟಿಕೋ ಹಾಗೂ ನನ್ನ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ ಬಿಡು ಎಂದು ಹೇಳುತ್ತಾನೆ. ಮಗನ ಮಾತನ್ನು ಅನುಸರಿಸಿದ ತಂದೆ ಬಲಿದಾನಕ್ಕಾಗಿ ತನ್ನ ಮಗನ ಕೈ,ಕಾಲುಗಳನ್ನು ಕಟ್ಟಿ ಕುತ್ತಿಗೆ ಕೊಯ್ಯಲು ಚಾಕುವನ್ನು ಇಟ್ಟಾಗ ಅಲ್ಲಾಹು ತನ್ನ ದೂತನಾದ ಜಿಬ್ ರಾಯಿಲ್ ಗೆ ಒಂದು ತುರ್ತು ಆದೇಶವನ್ನು ನೀಡುತ್ತಾನೆ.
ನೀನು ಇಸ್ಮಾಯಿಲ್ ನ ಸ್ಥಳದಲ್ಲಿ ಬೇರೊಂದು ಸ್ವರ್ಗದ ಪ್ರಾಣಿಯನ್ನು ಬೇಗನೆ ತೆಗೆದುಕೊಂಡು ಹೋಗು. ಅಲ್ಲಿ ಇಬ್ರಾಹಿಂ- ಅಲೈಹಿ- ಸಲಾಂ ನನಗಾಗಿ ತನ್ನ ಪ್ರೀತಿಯ ಮಗ ಇಸ್ಮಾಯಿಲ್ ನನ್ನು ಬಲಿದಾನ ಮಾಡಲು ಸಿದ್ಧನಾಗುತ್ತಿದ್ದಾನೆ ಎಂದು.
ಆ ಸಂದರ್ಭದಲ್ಲಿ ದೂತ ಜಿಬ್ ರಾಯಿಲ್ ಇಸ್ಮಾಯಿಲ್ ನ ಜಾಗದಲ್ಲಿ ಒಂದು ಪ್ರಾಣಿಯನ್ನು ತಂದು ಇಡುತ್ತಾನೆ. ಆಗ ಅಲ್ಲಾಹು ಹೀಗೆ ಹೇಳುತ್ತಾನೆ… ಇಬ್ರಾಹಿಂ- ಅಲೈಹಿ- ಸಲಾಂ ನಾನು ನಿನ್ನ ಭಕ್ತಿಯನ್ನು ಮೆಚ್ಚಿದೆ .ನಿನ್ನ ಮಗ ಇಸ್ಮಾಯಿಲ್ ಜೀವಂತವಾಗಿ ನಿನ್ನ ಬಳಿಯೇ ಇರುತ್ತಾನೆ.ಈ ಪ್ರಪಂಚ ಇರುವ ತನಕ ನಿನ್ನ ತ್ಯಾಗವನ್ನು ಎಲ್ಲರೂ ನೆನಪಿಸಿಕೊಳ್ಳ ಬೇಕು. ಆ ಹಿನ್ನೆಲೆಯಲ್ಲಿ ಪ್ರತಿವರ್ಷ ಅಲ್ಲಾಹುವಿನ ಹೆಸರಿನಲ್ಲಿ ಭಕ್ತರು ಒಂದು ಪ್ರಾಣಿಯನ್ನು ಸಮರ್ಪಣೆ ಮಾಡುತ್ತಾರೆ ಎಂದು ಹೇಳುತ್ತಾನೆ.
ಆದ್ದರಿಂದ ಮುಸ್ಲಿಂ ಬಂಧುಗಳು ತ್ಯಾಗದ ಹೆಸರಿನಲ್ಲಿ ಪ್ರತಿವರ್ಷ ಬಕ್ರೀದ್ ಸಂದರ್ಭದಲ್ಲಿ ಪ್ರಾಣಿಯನ್ನು ಬಲಿದಾನ ಮಾಡುತ್ತಾರೆ. ಇದನ್ನು ಈದ್-ಉಲ್-ಅದಾ ಎಂದು ಜಾಗತಿಕವಾಗಿ ಕರೆಯಲಾಗುತ್ತದೆ.
🖋 ಸುಹಾನಾ
ಸಹಾಯಕ ಪ್ರಾಧ್ಯಾಪಕರು
ಹಿಂದಿ ವಿಭಾಗ
ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ