ಮಂಗಳೂರು (ಆ, 3) : ಕರೋನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾದ ಮಂಗಳೂರು ವಿ. ವಿ. 1, 3, 5 ಸೆಮಿಸ್ಟರ್ ನ ಪರೀಕ್ಷೆಗಳು ಅಗಸ್ಟ್ 2 ರಂದು ಪ್ರಾರಂಭಗೊಂಡಿದ್ದು, ಈಗ ಮತ್ತೆ ಕರೋನಾ ಮೂರನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿದೆ. ರಾಜ್ಯದ ಗಡಿಭಾಗ ಕಾಸರಗೋಡು ಹಾಗೂ ಕೇರಳದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಂಗಳೂರಿಗೆ ಆಗಮಿಸುತ್ತಿರುವುದರಿಂದ ಕರೋನಾ ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಿದೆ. ಆ ಕಾರಣದಿಂದಾಗಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಮಂಗಳೂರು ವಿ.ವಿ. ಯಿಂದ ನಡೆಯುತ್ತಿರುವ ಎಲ್ಲಾ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಮಂಗಳೂರು ವಿ.ವಿ. ರಿಜೆಸ್ಟ್ರಾರ್ ಗೆ ಪತ್ರದ ಮೂಲಕ ಸೂಚಿಸಿದ್ದಾರೆ.