ಯಾವುದೇ ಪ್ರತಿಫಲ ಬಯಸದೆ ನಿಸ್ವಾರ್ಥತೆಯಿಂದ ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸುಗಳು ಅತೀ ವಿರಳ. ಜನಸೇವೆಯೇ ಜನಾರ್ದನ ಸೇವೆ ಎಂಬ ಮಾತಿನಂತೆ ಸಮಾಜಸೇವೆಯನ್ನು ದೇವರ ಪೂಜೆಯಷ್ಟೇ ಪವಿತ್ರವಾದ ಕಾರ್ಯ ಎಂದು ಭಾವಿಸಿ ಸಮಾಜ ಸೇವೆಯಯನ್ನು ನಿಸ್ವಾರ್ಥತೆಯಿಂದ ಆತ್ಮ ಸಂತ್ರಪ್ತಿಗಾಗಿ ಮಾಡುವ ಹಲವಾರು ಜನಗಳ ಮಧ್ಯೆ ನಾವಿಂದು ನಿಮಗೆ ಒರ್ವ ನಿಸ್ವಾರ್ಥ ಸಮಾಜ ಸೇವಕನನ್ನು ಕುಂದವಾಹಿನಿ ಅಂತರ್ಜಾಲ ಸುದ್ದಿತಾಣದ ಮೂಲಕ ಪರಿಚಯಿಸಲು ಸಂತೋಷ ಪಡುತ್ತಿದ್ದೇವೆ.
ಸಾಹಸಿ ,ಜೀವರಕ್ಷಕ ,ಜನಸೇವೆಯ ಮನೋಭಾವದ ಈಜು ಪ್ರವೀಣ ,ಆಪತ್ಭಾಂಧವ ಹಾಗೂ ಗಂಡೆದೆಯ ಯುವಕ ಅವರೇ ಶ್ರೀ ಈಶ್ವರ್ ಮಲ್ಪೆ.
ಆಪತ್ಭಾಂಧವ ಶ್ರೀ ಈಶ್ವರ್ ಮಲ್ಪೆಯವರು 1976 ರ ಮೇ 21 ರಂದು ಕರಾವಳಿಯ ಬಂದರು ನಗರಿ ಮಲ್ಪೆಯಲ್ಲಿ ಜನಿಸಿದರು. ತಂದೆ ಆನಂದ್ ಪುತ್ರನ್, ತಾಯಿ ಬೇಬಿ ಕರ್ಕೇರ. ಮೀನುಗಾರಿಕೆ ವೃತ್ತಿ ಮಾಡಿಕೊಂಡು ಜೀವನವನ್ನು ನಡೆಸುತ್ತಿರುವ ಕುಟುಂಬ . ಅಕ್ಕ ಮತ್ತು ತಮ್ಮನ ಒಡನಾಡಿ ,ಕಡು ಬಡತನದಲ್ಲಿ ಹುಟ್ಟಿದ ಈಶ್ವರ್ ರವರು ಪ್ರಾಥಮಿಕ ಶಿಕ್ಷಣವನ್ನು ಯು.ಬಿ.ಮ್. ಸಿ ಹಿರಿಯ ಪ್ರಾಥಮಿಕ ಶಾಲೆ ಮಲ್ಪೆ ಮತ್ತು 9ನೇ ತರಗತಿ ವರೆಗಿನ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಫಿಶರೀಸ್ ಶಾಲೆ ಮಲ್ಪೆಯಲ್ಲಿ ಮುಗಿಸಿದರು.
ಮೊಗವೀರ ಸಮುದಾಯದವರಾದ ಇವರು ಪ್ರಸ್ತುತ ಮೀನುಗಾರಿಕಾ ವೃತ್ತಿಯ ಜೊತೆಗೆ ಬೋಟುಗಳಿಗೆ ನೀರು ಸರಬರಾಜು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ನಿಸ್ವಾರ್ಥ ಸೇವಾ ಮನಸ್ಸಿನ ಇವರನ್ನು ಮಲ್ಪೆಯ ಜನತೆ ಆಪದ್ಬಾಂಧವ ಎಂದು ಕರೆಯುತ್ತಾರೆ.
ಉಡುಪಿ ಮತ್ತು ಮಲ್ಪೆ ಪರಿಸರದಲ್ಲಿ ಯಾವುದೇ ಪ್ರಚಾರ ಬಯಸದೇ, ಸುತ್ತಮುತ್ತಲಿನ ಯಾವುದೇ ಊರುಗಳಲ್ಲಿ ನೆರೆ ಪರಿಹಾರ ಕಾರ್ಯಾಚರಣೆ, ನೀರಿನಲ್ಲಿ ಮುಳುಗಿದ ಅಮೂಲ್ಯ ವಸ್ತು ,ನೀರಿಗೆ ಬಿದ್ದ ವ್ಯಕ್ತಿಗಳ ಹಾಗೂ ಪ್ರಾಣಿಗಳ ರಕ್ಷಣೆ ,ಜೊತೆಗೆ ನೀರಿನಲ್ಲಿ ಮುಳುಗಿದ ದೋಣಿ ಮತ್ತು ಬೋಟು ಹಾಗೂ ಇತರ ವಾಹನಗಳನ್ನು ದಡ ಸೇರಿಸುವುದು ಇವರ ನಿಸ್ವಾರ್ಥದ ಕಾಯಕ.
ಸರಿಸುಮಾರು 200 ಕ್ಕಿಂತಲೂ ಹೆಚ್ಚು ಶವಗಳನ್ನು ಮೇಲೆತ್ತಿ ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.ಯಾವತ್ತೂ , ಯಾರಿಂದಲೂ ಪ್ರತಿಫಲ ಬಯಸದೇ ಸಾವು ಮತ್ತು ಬದುಕಿನ ಮಧ್ಯೆ ಸಮುದ್ರ ಪಾಲಾಗುತ್ತಿದ್ದ ಅನೇಕರನ್ನು ದಡಕ್ಕೆ ಸೇರಿಸಿದ ಪುಣ್ಯಾತ್ಮ ಶ್ರೀ ಈಶ್ವರ್. ಇವರ ಆಪತ್ಕಾಲದ ತುರ್ತು ಸೇವೆಯನ್ನು ಗುರುತಿಸಿ ಅದೆಷ್ಟೋ ಜನರು ತುಂಬು ಹ್ರದಯದಿಂದ ಆಶೀರ್ವಾದಿಸಿದ್ದಾರೆ. ತಮಗೆ ಈ ಪುಣ್ಯಕೆಲಸಕ್ಕೆ ಪ್ರೇರಣೆ ಏನು ಅಂತ ಕೇಳಿದಾಗ ನನಗೆ ಇವರು ಗಂಡದೆಯ ಗಟ್ಟಿ ಯುವಕ ಅನಿಸಿದ್ದು ಸುಳ್ಳಲ್ಲ .
ಈಶ್ವರ್ ರವರಿಗೆ ಮೂರು ಜನ ಮಕ್ಕಳು. ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು. ಹುಟ್ಟಿದ ಮೂವರೂ ಮಕ್ಕಳು ವಿಕಲಚೇತನರು ಎಂಬ ವಿಷಯ ತಿಳಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಹೆಂಡತಿ ಮಕ್ಕಳಿಗಾದರೂ ನನ್ನ ಸಮಾಜ ಸೇವೆಯ ಪುಣ್ಯವಾದ್ರೂ ದೊರೆಯಲಿ ಎಂದು ಜೀವ ರಕ್ಷಕ ಕಾಯಕದಲ್ಲಿ ಸ್ವಯಂ ಪ್ರೇರಣೆಯಿಂದ ತನ್ನನ್ನು ತಾನು ತೊಡಿಸಿ ತೊಡಗಿಸಿಕೊಂಡಿದ್ದೇನೆ ಎಂದು ಈಶ್ವರ್ ರವರು ಹೇಳಿದಾಗ ಅವರ ಹ್ರದಯ ಶ್ರೀಮಂತಿಕೆಯ ಅರಿವಾಯಿತು.
ಮುಂದುವರಿಯುತ್ತ ಮಾತನಾಡಿದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೇಂಬ ಅದಮ್ಯ ಬಯಕೆ ಇತ್ತು. ಆದರೆ ವಿದ್ಯಾಭ್ಯಾಸ ಕಡಿಮೆ ಇದ್ದುದರಿಂದ ಸಾಧ್ಯವಾಗಲಿಲ್ಲ. ಮಲ್ಪೆಯಲ್ಲಿ ಕೋಸ್ಟ್ ಗಾರ್ಡ್ಸ ಕೆಲಸದ ಆಯ್ಕೆ ಸಂದರ್ಭದಲ್ಲಿ ಮಲ್ಪೆಯ ಸಮುದ್ರದ ಹರಿವು, ಆಳ, ಯಾವುದೇ ವಿಷಮ ಪರಿಸ್ಥಿತಿಯಲ್ಲೂ ಸಮುದ್ರ ಧುಮುಕು ಅರ್ಹತೆ ನನ್ನಲ್ಲಿ ಇದ್ದರೂ ಕೂಡ ಸ್ವಯಂ ಪ್ರೇರಣೆಯಿಂದ ಸಂಬಳ ಇಲ್ಲದೆ ಅ ಕೆಲಸ ನಾನು ಮಾಡುತ್ತಾ ಇದ್ದರೂ ನನ್ನ 9ನೇ ತರಗತಿಯ ತನಕದ ವಿದ್ಯಾಭ್ಯಾಸ ಇರುವುದರಿಂದ ನನ್ನನ್ನು ಆಯ್ಕೆಯಿಂದ ಹೊರಗಿಡಲಾಯಿತು.
ನನಗೆ ಸರಕಾರದ ಈ ಕೆಲಸ ಸಿಕ್ಕಿರುತ್ತಿದ್ದರೆ ಹೆಂಡತಿ, ಮೂರು ಅಂಗವಿಕಲ ಮಕ್ಕಳ ಜೀವನ ನಿರ್ವಹಣೆಗೆ ಅನುಕೂಲವಾಗುತ್ತಿತ್ತು ಎಂದು ಹತಾಶೆಯ ಮಾತುಗಳನ್ನು ಗದ್ಗದಿತ ಧ್ವನಿ ಯಲ್ಲೇ ಹೇಳಿದರು.
ಈ ಜೀವ ರಕ್ಷಣೆ ಸಮಯದಲ್ಲಿ ಸರಕಾರ, ಮತ್ತು ಸಾಮಾಜಿಕ ಸಂಸ್ಥೆಯಿಂದ ಏನಾದರೂ ಸಹಾಯ ದೊರತಿದೆಯಾ ಅಂತ ಕೇಳಿದಾಗ ಇಲ್ಲಾ ಎಂದು ಹೇಳಿದರು. ಮಲ್ಪೆ ಪರಿಸರದಲ್ಲಿ ಸಮುದ್ರ ತೀರದಲ್ಲಿ ತುರ್ತು ಸಂದರ್ಭದಲ್ಲಿ ಯಾರನ್ನಾದರೂ ಆಸ್ಪತ್ರೆಗೆ ಕೊಂಡು ಹೋಗಲು ಒಂದು ಅಂಬುಲೆನ್ಸ್ ವ್ಯವಸ್ಥೆ ಬೇಕೆಂದು ನಾನು ಮನವಿ ಮಾಡಿಕೊಂಡಿದ್ದೆ . ಆದರೇ ಯಾರೂ ಸಹ ಇದರ ಬಗ್ಗೆ ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ. ಒಂದು ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದರೆ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆ ಮಾಡಬಹುದು. ಇಲ್ಲಿ ಮಸೀದಿ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆಯಿದೆ.ಆದರೆ ದೇವಸ್ಥಾನ, ಸಾಮಾಜಿಕ ಸಂಸ್ಥೆ ಮತ್ತು ಸರಕಾರದ ಬಂದರು ಇಲಾಖೆ ವತಿಯಿಂದ ಯಾವುದೇ ಸೌಲಭ್ಯಗಳು ಇಲ್ಲ.
ನನ್ನ ಕುಟುಂಬದ ಸ್ಥಿಗತಿ ಹಾಗೂ ನಾನು ಮಾಡಿರುವ ಸೇವೆಯನ್ನು ಗಮನಿಸಿ ಸರಕಾರದ ವತಿಯಿಂದ ಒಂದು ಕೆಲಸ ಸಿಕ್ಕಿದರೆ ನನ್ನ ಸಂಸಾರಕ್ಕೆ ನೆರಳು ಆಗುತ್ತಾ ಇತ್ತು ಎಂದು ಹೇಳಿದ ಈಶ್ವರ್ ,ನಾನು ಮಾಡುತ್ತಿರುವ ಸೇವೆ ತುಂಬಾ ಅಪಾಯಕಾರಿ, ನನ್ನಲ್ಲಿ ಲೈಫ್ ಇನ್ಸೂರೆನ್ಸ್ ಕೂಡ ಇಲ್ಲ, ನನಗೆ ಏನಾದ್ರು ಜೀವಕ್ಕೆ ಅಪಾಯವಾದ್ರೆ ನನ್ನ ಅಂಗವಿಕಲ ಮಕ್ಕಳ ಹೊಣೆ ಯಾರು…..? ಮಲ್ಪೆ ಬಂದರನಲ್ಲಿ ಪ್ರಸ್ತುತ ಸೇವಾನಿರತ ಹೋಂ ಗಾರ್ಡ್ ಇದ್ದರೂ ಕೂಡ ಜನತೆ ಮತ್ತು ಪೊಲೀಸ್ ಇಲಾಖೆ ತುರ್ತು ಸಂದರ್ಭದಲ್ಲಿ ನನ್ನನ್ನು ಕರೆಯುತ್ತಾರೆ. ಇದು ಸಂತೋಷದ ವಿಷಯ ಹಾಗೂ ನಾನು ಕೂಡ ಶ್ರದ್ಧೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದೇನೆ. ಈಗ ನಾನು ಈ ಮೂಲಕ ಜನತೆ ಮತ್ತು ಪೊಲೀಸ್ ಇಲಾಖೆಯಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನಿಮ್ಮ ಶಿಫಾರಸ್ಸಿನ ಮೇರೆಗೆ ಈ ಜೀವ ರಕ್ಷಕ ಸಂಸ್ಥೆಯಲ್ಲಿ ನನ್ನ ಸೇವೆಯನ್ನು ಗುರುತಿಸಿ ನನ್ನ ಸಂಸಾರ ನಿರ್ವಹಣೆಗೆ ಒಂದು ಸರಕಾರಿ ಕೆಲಸ ಸಿಗುವಂತಾಗಲಿ ಎನ್ನುವುದು.
ಶ್ರೀಯುತ ಈಶ್ವರ್ ಮಲ್ಪೆ ಹಾಗೂ ಶ್ರೀ ಮತಿ ಗೀತಾ ಮತ್ತು ಪುತ್ರರಾದ ನಿರಂಜನ ಮತ್ತು ಕಾರ್ತಿಕ್, ಮಗಳು ಬ್ರಾಹ್ಮಿ ಯವರಿಗೆ ಸಹಸ್ರಾರು ಜನರ ಆಶೀರ್ವಾದ ಇದೆ. ಆದರೆ ಸರ್ಕಾರ ಈಶ್ವರ್ ರವರಿಗೆ ಒಂದು ಖಾಯಂ ಸರಕಾರಿ ಉದ್ಯೋಗವನ್ನು ನೀಡಬೇಕಿದೆ.
ಇವರ ಸಂಸಾರಕ್ಕೆ ಸುಖ, ಶಾಂತಿ ನೆಮ್ಮದಿ, ಕೊಟ್ಟು ಈ ಸಂದರ್ಶನ ಲೇಖನ ಇವರ ಸಮಾಜ ಮುಖಿ ಕಾರ್ಯಕ್ಕೆ ಪ್ರೇರಣೆಯಾಗಲಿ ಎನ್ನುವುದು ನಮ್ಮ ಬಯಕೆ .
ಈಶ್ವರ್ ಮಲ್ಪೆ ಯವರ ಈ ಕೋರಿಕೆಯಲ್ಲಿ ಒಂದು ಅರ್ಥವಿದೆ ಅವರ ಸೇವೆಯನ್ನು ಗುರುತಿಸಿ ಆದಷ್ಟು ಬೇಗ ಅವರಿಗೆ ಒಂದು ಸರಕಾರಿ ಕೆಲಸ ದೊರಕಲಿ,ಅದೆಷ್ಟು ಬೇಗ ಹೊಸ ಮೀನುಗಾರಿಕಾ ಮಂತ್ರಿಗಳ ಕಣ್ಣು ತೆರೆದು ಈಶ್ವರ್ ರವರ ಮೇಲೆ ಕೃಪಾದೃಷ್ಟಿ ಬೀರಲಿ ಅನ್ನುವುದು ನಮ್ಮ ಹರಕೆ ಮತ್ತು ಹಾರೈಕೆ.
ಸಂದರ್ಶನ ಬರಹ ✍️ಈಶ್ವರ ಸಿ ನಾವುಂದ. ಚಿಂತಕ ಮತ್ತು ಬರಹಗಾರರು.