ಕುಂದಾಪುರ (ಸೆ. 01) : ಸತತ ಐದು ವರ್ಷಗಳ ನಿರಂತರ ಸೇವೆ ಪರಿಗಣಿಸಿ 2011ರಲ್ಲಿ ವಿಶೇಷ ವಿಧೇಯಕದ ಮೂಲಕ ಖಾಯಮಾತಿ ಪಡೆದ ಜೆಒಸಿ ನೌಕರರು ತಮಗೆ ಹಳೆ ಪಿಂಚಣಿ ಸೌಲಭ್ಯ ವಿಸ್ತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ಅವರಿಗೆ ಸಚಿವರ ಕಚೇರಿಯಲ್ಲಿ ಇತ್ತೀಚಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಜೆಒಸಿ ನೌಕರರ ಸಂಘದ ಗೌರವಾಧ್ಯಕ್ಷ ಬಾಲಚಂದ್ರ ಹೆಬ್ಬಾರ್ ಖಾಯಂ ಪೂರ್ವ ಅವಧಿಯ ಸೇವೆಯನ್ನು ಹಳೆ ಪಿಂಚಣಿಗೆ ಪರಿಗಣಿಸುವ ನಿಟ್ಟಿನಲ್ಲಿ ವಿಶೇಷ ವಿಧೇಯಕ ತಿದ್ದುಪಡಿಗೆ ಶಿಫಾರಸು ಮಾಡುವಂತೆ ಸಚಿವರನ್ನು ವಿನಂತಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜೆಓಸಿ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಹೆರಂಜಾಲು ಶ್ರೀಧರ ಗಾಣಿಗ, ದುರ್ಪಜೆ ಸುರೇಶ್ ಭಟ್, ಮುಂಡ್ಲಿ ಗುಣಪಾಲ ಜೈನ್ ರವರು ಸಚಿವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ದಿನಕರ್, ಪ್ರತಿನಿಧಿಗಳಾದ ನಿತ್ಯಾನಂದ ಬಿ ಶೆಟ್ಟಿ, ಶರ್ಮಿಳಾ ರಾವ್ ಪೂರ್ಣಿಮ ರಾವ್ ಉಪಸ್ಥಿತರಿದ್ದರು.