ದೇವರ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇವರ ಕ್ರಪೆಗೆ ಪಾತ್ರರಾಗಲು ಹಲವು ವಿಧಾನಗಳಿವೆ. ಆದರೆ ಭಜನೆ ಸರಳವಾದ ಮಾರ್ಗ.
ಆದರೆ ಆಧುನಿಕತೆಯ ಸ್ಥಿತ್ಯಂತರಕ್ಕೆ ಒಳಗಾದ ಯುವ ಜನತೆ ಆಧ್ಯಾತ್ಮಿಕತೆ , ಭಜನೆ ಹಾಡುವುದು, ಕುಣಿತ ಭಜನೆ, ಜಾನಪದ ಗೀತೆ ಭಾವಗೀತೆಯಂತಹ ಧಾರ್ಮಿಕ ಚಟುವಟಿಕೆಯಿಂದ ದೂರವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಮನೆ-ಮನಗಳಲ್ಲಿ ಭಜನೆಯ ಭಕ್ತಿ -ಭಾವ ಕಡಿಮೆಗೊಳ್ಳುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಭಜನೆಯನ್ನು ಭಕ್ತಿಪೂರ್ವಕವಾಗಿ ಹಾಡುತ್ತಾ, ಇನ್ನೊಬ್ಬರಿಗೂ ಭಜನೆಯ ಕಲಿಸುತ್ತಾ ,ಬದುಕಿನ ಸುದೀರ್ಘ ಅವಧಿಯನ್ನು ಭಜನೆಗಾಗಿ ಕಾಯ್ದಿರಿಸಿದ ಮಹಿಳೆ ಶ್ರೀಮತಿ ಸುಶೀಲಾ ಪೂಜಾರಿ ನಾವುಂದ.
ಇಂದು ಮಕ್ಕಳಿಗೆ ಕಲೆ-ಸಂಸ್ಕೃತಿ ಆಚಾರ-ವಿಚಾರ, ಆಧ್ಯಾತ್ಮ ಕಲಿಸಿಕೊಡುವುದು ತಂದೆ ತಾಯಿಯರ ಆದ್ಯ ಕರ್ತವ್ಯವಾಗಿದೆ. ಆದರೆ ಯುವ ಮನಸ್ಸುಗಳು ವಿಚಲಿತಗೊಳ್ಳುತ್ತಿರುವ ಇಂದಿನ ಈ ಫ್ಯಾಶನ್ ಯುಗದಲ್ಲಿ ಆಧ್ಯಾತ್ಮ, ಭಜನೆಯಂತಹ ಸಾಮೂಹಿಕ ಭಕ್ತಿ ಮಾರ್ಗಗಳು ನಶಿಸಿಸುತ್ತಿದೆ.
ಆದರೆ ಯುನಸ್ಸುಗಳಲ್ಲಿ ಭಜನೆಯಂತಹ ಧರ್ಮ ಪರಿಪಾಲನ ಮಾರ್ಗಗಳ ಭೋದಿಸುವ ನಮ್ಮ ನಾವುಂದದ ಭಕ್ತಿ ಪ್ರಚಾರಕರು, ಭಜನೆ ಗಾಯಕರಾದ ಸುಶೀಲಾ ಪೂಜಾರಿಯವರು ಉಚಿತವಾಗಿ ತಮ್ಮ ಮನೆಯಲ್ಲೇ ಮತ್ತು ಸಂಘ ಸಂಸ್ಥೆಗಳ ಅಡಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಕ್ರಮಬದ್ದವಾಗಿ ಹಾಗೂ ಧರ್ಮರ್ಥವಾಗಿ ಭಜನೆಯನ್ನು ಕಲಿಸಿಕೊಡುತ್ತಿದ್ದು ಭಕ್ತಿ ಸಾಗರವನ್ನು ಹರಿಸುತ್ತಿದ್ದಾರೆ.
ಆತ್ಮ ಮತ್ತು ಮನಸ್ಸಿಗೆ ಆನಂದ ತರುವುದೇ ಆಧ್ಯಾತ್ಮ ಅದರಲ್ಲಿ ಉಳಿಯುವುದೊಂದೆ ಜೀವಾತ್ಮ. ಮನಸ್ಸನ್ನು ಸದಾ ಸಂತೋಷವಾಗಿಡಲು ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ, ಭಜನೆ ಮತ್ತು ಭಕ್ತಿಯ ಸೇವೆಗಳು.
ಶ್ರೀಮತಿ ಸುಶೀಲರವರು ತನ್ನ ಬದುಕಿನ ಮುಂದಿನ ಸಂಧ್ಯಾ ಕಾಲದಲ್ಲಿಯೂ ಸಹ ಇನ್ನೂ ಹೆಚ್ಚಿನ ಆಧ್ಯಾತ್ಮಿಕ ವಿಚಾರ ಮತ್ತು ಭಜನೆ ಕಲಾಸೇವೆಯಲ್ಲಿ ತೊಡಗಿಕೊಳ್ಳುವ ಬಯಕೆಯನ್ನು ಹೊಂದಿದ್ದು, ತಮ್ಮ ಮುಂಬೈಯ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡರು.
ಆಧ್ಯಾತ್ಮ ಮತ್ತು ಭಜನೆಯಿಂದ ವೇದನೆಗಳನ್ನು ಮರೆಯಬಹುದು “ತಮ್ಮ” ಎಂದು ಮಾತು ಮುಂದುವರೆಸುತ್ತಾ ಹೇಳುತ್ತಿದ್ದರೆ “ಅಕ್ಕ”ನ ಹೊಳೆಯುವ ಕಣ್ಣುಗಳು ಆ ದೇವತೆಯ ಮೊಗವನ್ನೇ ನೋಡುತ್ತ ಇದ್ದೆನಾನು. ಅಂದಿನ ಮುಂಬೈಯ ಸಂಸಾರದ ಕಷ್ಟ ಚಾಲ್ (ಸಾಲು )ಮನೆಗಳ ಕಥೆ, ಅದನ್ನು ದಾಟಿ ಬೆಳೆದು ಬಂದ ರೀತಿ ಇಲ್ಲಿ ಉಲ್ಲೇಖಸಲೇ ಬೇಕು. ಅಂದಿನ ಆ ಕಷ್ಟದ ದಿನ ಗಳಲ್ಲಿ ಅವರ ಪತಿ ಸೀನ ಪೂಜಾರಿಯವರ ಸಣ್ಣ ಅಂಗಡಿಮಾಡಿಕೊಂಡಿದ್ದು ಅವರ ಕಷ್ಟ -ನಷ್ಟ -ಇಷ್ಟಗಳಿಗೂ ಹೆಗಲು ಕೊಟ್ಟು ತಮ್ಮ ಮೂರು ಹೆಣ್ಣು ಮಕ್ಕಳಿಗೂ ಮುಂಬೈಯಲ್ಲಿದ್ದು ಕನ್ನಡ ಮಾಧ್ಯಮದಲ್ಲಿ ಶಾಲೆ ಕಲಿಸಿ ಒಳ್ಳೆ ಉದ್ಯೋಗ ಸಿಗುವಂತೆ ಮಾಡಿ ಪುತ್ರಿಯರು ಸಂಸಾರ ಜೀವನದ ಜೊತೆಗೆ ಒಳ್ಳೆಯ ಹುದ್ದೆಯಲ್ಲಿರುವುದು, ಇದೆಕ್ಕೆಲ್ಲಾ ಕಾರಣ ನನ್ನ ಆದ್ಯಾತ್ಮಿಕ ವಿಚಾರ ಭಜನೆ ಮತ್ತು ಭಕ್ತಿ ಮಾರ್ಗಗಳೇ ಕಾರಣವಾಗಿದೆ ಎಂದು ಸಂತೋಷದಿಂದ ಹೇಳಿಕೊಂಡರು.
ಕಳೆದ ಇಪ್ಪತೈದು ವರ್ಷಗಳಿಂದ ಮುಂಬೈಯ ಆನೇಕ ಮಂದಿರ, ಬಿಲ್ಲವ ಸಂಘ- ಸಂಸ್ಥೆಗಳ ಮಹಿಳಾ ಸಮಿತಿಯ ಹಾಗೂ ಧಾರ್ಮಿಕ ಸಮಿತಿಯ ಅಧ್ಯಕ್ಷೆ ಯಾಗಿ ಸೇವೆ ಸಲ್ಲಿಸಿದ ಇವರ ಕಲಾಸೇವೆಯ ಕುರಿತು ಬರೆಯುತ್ತಾ ಹೋದರೆ ತುಂಬಾ ಇದೆ. ಆದರೆ ಅದನ್ನು ಸಂಕ್ಷಿಪ್ತವಾಗಿ ತಮಗೆ ಹೇಳುವ ಹೊಣೆ ನನಗಿದೆ. ಮುಂಬೈಯ ವಿವಿಧ ಸಂಘ -ಸಂಸ್ಥೆಯ ಗುರು ಭಜನೆ, ಶ್ರಾವಣ ಮಾಸ, ನವರಾತ್ರಿ ಹೀಗೆ ವಿಶೇಷ ದಿನಗಳಲ್ಲಿ ಭಜನಾ ಕಮ್ಮಟವನ್ನು ಆಯೋಜಿಸಿ ಆಸಕ್ತ ಗಾಯಕರನ್ನು ಸ್ಪರ್ಧೆಗಾಗಿ ತಯಾರುಮಾಡಿ ತಾವು ಹಾಡಿ, ಇತರರನ್ನು ಹಾಡಿಸಿ ಸ್ಪರ್ಧಿಗಳಿಗೆ ಬಹುಮಾನ ಹೆಸರು ಬರುವ ವರೆಗೆ ಈ ಸೇವೆ ಅವರ ಯೋಗದಾನವಿರುತ್ತದೆ. ಇವರ ಈ ಕಲಾ ಸೇವೆಯನ್ನು ಮುಂಬೈ . ಕುಂದಾಪುರ ಬಿಲ್ಲವ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿದ್ದಾರೆ.
ಶ್ರೀಮತಿ ಸುಶೀಲಾರವರು ಮೂಲತಃ ನಾವುಂದ ಪರಿಸರದ ಗರಡಿಬೆಟ್ಟು ಮೂಲದವರು. ನಾವುಂದ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಾವುಂದದ ಜೂನಿಯರ್ ಕಾಲೇಜ್ ನಲ್ಲಿ ಎಸ್ .ಎಸ್.ಎಲ್ .ಸಿ ತನಕ ವಿದ್ಯಾಭ್ಯಾಸ ಮಾಡಿರುತ್ತಾರೆ. ನಂತರ ಮದುವೆಯಾಗಿ ತನ್ನ ಗಂಡ ಶೀನ ಪೂಜಾರಿ ಜೊತೆ ಸಂಸಾರ ಜೀವನಕ್ಕೆಂದು ಮುಂಬೈ ಗೆ ಹೊರಟು ನಿಲ್ಲುತ್ತಾರೆ.
ಮುಂಬೈಯ ಬಿಲ್ಲವ ಅಸೋಸಿಯನ್ ಜೋಗೇಶ್ವರಿ ಮಹಿಳಾ ವಿಭಾಗದ ಭಜನೆ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಿ ಎಲ್ಲಾ ಸದಸ್ಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.ಬಹುಮುಖ ಪ್ರತಿಭಾ ಸಂಪನ್ನರಾಗಿರುವ ಇವರು ನಾಟಕ ಮತ್ತು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಈ ಎಲ್ಲಾ ಅನುಭವಗಳ ಬಗ್ಗೆ ಮಾತನಾಡುವಾಗ ನಾನೇನು ಮಾಡಲಿಲ್ಲ.ನಿಮ್ಮಂತಹ ಹಲವಾರು ನನ್ನ ಹಿತ -ಚಿಂತಕರು ಹಿತ ನುಡಿಗಳಿಂದ ನನ್ನನ್ನು ಬೆಂಬಲಿಸಿ ,ನನ್ನಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೀತಿ ತುಂಬಿದ ಮಾತು ಹೇಳಿ ಮುಖ್ಯವಾಹಿನಿಗೆ ತಂದಿದ್ದು. ಈಗ ಒಮ್ಮೆ ಹಿಂದಿರುಗಿ ನೋಡುವಾಗ ನನ್ನ ಪ್ರತಿಭೆ ಅನಾವರಣದ ಬಗ್ಗೆ ಹೆಮ್ಮೆಯ ಅನಿಸುತ್ತಿದೆ.
ನನಗೆ ಅವಕಾಶ ಮಾಡಿ ಕೊಟ್ಟ ಬಿಲ್ಲವ ಅಸೋಸಿಯನ್ ಮುಂಬೈ ಹಾಗೂ ಇತರ ಎಲ್ಲಾ ಸಂಘ, ಸಂಸ್ಥೆ ಮತ್ತು ನನ್ನನ್ನು ಅಭಿನಂದಿಸಿದ ಎಲ್ಲಾ ಕಲಾವಿದರು ಮತ್ತು ಸಂಸ್ಥೆ ಸದಸ್ಯರನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಅವರಿಗೆ ಗೌರವ ಸೂಚಿಸಿವುದರ ಮೂಲಕ ಹೇಳಿ ಕೊಳ್ಳುವಾಗ ಅವರಿಗಾದ ಖುಷಿಯನ್ನು ಅಕ್ಷರದಲ್ಲಿ ತಿಳಿಸಲು ನನ್ನಿಂದ ಸಾಧ್ಯವಿಲ್ಲ.
ಶ್ರೀಮತಿ ಸುಶೀಲಾರವರು ಈಗ ಮುಂಬೈ ಬದುಕಿಗೆ ತಾತ್ಕಾಲಿಕ ವಿದಾಯ ಹೇಳಿ ನಾವುಂದ ಪರಿಸರದ “ಒಮೆಕೋಡ್ಲು “ಇಲ್ಲಿ ತಮ್ಮ ಪತಿ ಸೀನಾ ಪೂಜಾರಿ ಜೊತೆ ವಾಸವಾಗಿದ್ದಾರೆ. ಇವರ ಆಧ್ಯಾತ್ಮಿಕ ವಿಚಾರ, ಭಜನೆ ಕಲಿಕೆ, ಜಾನಪದ ಗೀತೆ, ಭಾವಗೀತೆ, ಭಕ್ತಿ ಗೀತೆ ಗಳನ್ನು ಕಲಿಯಲು ಮತ್ತು ಹಾಡಲು ಆಸಕ್ತಿ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಅನುಕೂಲವಾಗಲಿ ಎಂದು ಈ ಸಂದರ್ಶನ ಲೇಖನ ಜೊತೆಗೆ ಅವರ ದೂರವಾಣಿ ಸಂಖ್ಯೆ ಪ್ರಕಟಿಸುತ್ತಿದ್ದೇವೆ.
ಕರೆ ಮಾಡಿ ಆಧ್ಯಾತ್ಮಿಕ ಭಜನೆಯ ಜ್ಞಾನ ಸಂಪತ್ತನ್ನು ತಾವು ಪಡೆಯಬಹುದು.
9892948375
ಈಶ್ವರ್ ಸಿ ನಾವುಂದ
ಚಿಂತಕ ಬರಹಗಾರರು.