ಇಂದಿನ ದಿನಗಳಲ್ಲಿ ಯಕ್ಷಗಾನದ ಕಲಾ ಪ್ರಕಾರಗಳಲ್ಲೊಂದಾದ “ಚಿಕ್ಕಮೇಳ”ವನ್ನು ಸತತ ಹತ್ತು ವರ್ಷ ನಡೆಸಿಕೊಂಡು ಬರುವುದೆಂದರೆ ಅದೊಂದು ಸಾಹಸವೇ ಸರಿ. ಈ ವರ್ಷ ಇದ್ದ ಚಿಕ್ಕಮೇಳ ಬರುವ ವರ್ಷ ಇರುವುದಿಲ್ಲ. ಹೀಗಿರುವಾಗ ಆರ್ಥಿಕತೆಯ ಮುಖ ನೋಡದೆ ಕಲೆ ಮತ್ತು ಸೇವೆಯ ಮನೋಭಾವದಿಂದ ಮಳೆಗಾಲದಲ್ಲಿ ಮನೆಯೊಳಗೆ ಕಲಾದೇವಿಯ ಸಾಕ್ಷಾತ್ಕರಿಸುವ ಶ್ರದ್ಧಾಭಕ್ತಿಯ ಆರಾಧನಾ ಕಲೆಯನ್ನು ಕಳೆದ ಹತ್ತು ವರ್ಷಗಳಿಂದ ಮಾಡುತ್ತ ಬಂದವರು ಶ್ರೀ ತಿಮ್ಮಪ್ಪ ದೇವಾಡಿಗ ಮತ್ತು ಶ್ರೀ ನಾಗರಾಜ ಭಟ್.
ಈ ಚಿಕ್ಕ ಮೇಳ ತಂಡ ಪ್ರಾರಂಭಗೊಂಡು ಹನ್ನೊಂದು ನೇ ವರ್ಷಕ್ಕೆ ಕಾಲಿಡುತ್ತಿದೆ. ನಾಗೇಂದ್ರ ಕಾರಂತರ ಮಾರ್ಗದರ್ಶನದಿಂದ ಮಳೆಗಾಲದಲ್ಲಿ ಶ್ರೀ ಮಹಾಸತಿ ದೇವಿ ಚಿಕ್ಕಮೇಳ ನಾಯ್ಕನಕಟ್ಟೆ ಶ್ರೀ ದೇವಿಯ ಹೆಸರಿನಲ್ಲಿ ಹೊರಡುತ್ತದೆ.ಈ ಚಿಕ್ಕಮೇಳ ಮಳೆಗಾಲದಲ್ಲಿ ಕುಂದಾಪುರ ಪರಿಸರ ಹಾಗೂ ಕುಂದಾಪುರ ಪೇಟೆ ,ಆನಗಳ್ಳಿ, ಹೇರಿಕುದ್ರು, ಮುದ್ದು ಗುಡ್ಡೆ , ತಲ್ಲೂರು, ಉಪ್ಪಿನಕುದ್ರು, ಹೆಮ್ಮಾಡಿ ,ಸುಳ್ಸೆ, ಅಬ್ಲಾಡಿ,ಗುಡ್ಡೆಅಂಗಡಿ ಹಟ್ಟಿಯಂಗಡಿ, ಹಟ್ಟಿಕುದ್ರು, ಪಾರ್ತಿ ಕಟ್ಟೆ, ಕೋಟೆಬಾಗಿಲು ,ಕರ್ಕಿ ಕೊಡ್ಲಾಡಿ ಹೀಗೆ ಆಯ್ದ ಸೇವಾರ್ಥಿಗಳ ಮನೆಯಲ್ಲಿ ಪ್ರದರ್ಶನ ನೀಡುತ್ತಾ ಬರುತ್ತಿದೆ.
ಯಾವುದೇ ಒತ್ತಡ ಇಲ್ಲದೆ ಕಲಾಭಿಮಾನಿಗಳು ಇಷ್ಟ ಪಟ್ಟಲ್ಲಿ ಮಾತ್ರ ಮನೆಯಲ್ಲಿ ಸೇವೆ ಮಾಡುತ್ತಾರೆ. ಮಳೆಗಾಲದಲ್ಲಿ ಮನೆಮನೆಯಲ್ಲಿಯೂ ಕಲೆಯ ಆರಾಧನೆ ಗೆಜ್ಜೆ, ಚೆಂಡೆ ,ಮದ್ದಲೆಯ ನಿನಾದ ಮಾಡುವುದರಿಂದ ಮನೆಗೊಂದು ಮಂಗಲಕರ ಮತ್ತು ಭೂತ ಪ್ರೇತಗಳ ಕಾಟ ದೂರವಾಗುತ್ತವೆ ಎಂದು ಪುರಾಣದ ನಂಬಿಕೆಯಿದೆ.
ಸಾಂಪ್ರದಾಯಿಕವಾದ ಚೌಕಟ್ಟಿನಲ್ಲಿ ಮತ್ತು ಶಿಸ್ತುಬದ್ಧವಾಗಿ ಚೌಕಟ್ಟಿನಲ್ಲಿ ಇಂದಿನ ದಿನಗಳಲ್ಲಿ ಚಿಕ್ಕ ಮೇಳವನ್ನು ನಡೆಸುವುದೆಂದರೆ ಕಷ್ಟ .ಆದರೂ ಕೂಡ ಈ ತಂಡ ಯಶಸ್ವಿಯಾಗಿ ಹತ್ತು ವರ್ಷಗಳಿಂದ ಸೇವೆ ಮಾಡುತ್ತಾ ಬರುತ್ತಿದೆ. ಈ ಚಿಕ್ಕ ಮೇಳಕ್ಕೆ ಉತ್ತಮ ಬೇಡಿಕೆ ಹಾಗೂ ಸ್ಪಂದನೆ ಇದೆ .ಈ ಮೇಳದ ಕಲಾವಿದರ ಪ್ರದರ್ಶನ ನೋಡಿ ಕಲಾವಿದರನ್ನು ಭಕ್ತಾದಿಗಳು ತುಂಬಾ ಪ್ರೋತ್ಸಾಹಿಸುತ್ತಿದ್ದಾರೆ.
ಈ ಚಿಕ್ಕ ಮೇಳದವರು ಇಂತಿಷ್ಟು ಹಣ, ಗೌರವ, ಕಾಣಿಕೆ ಅಂತ ಕೇಳುವುದಿಲ್ಲ .ಕಡ್ಡಾಯವಾಗಿ ಹಣ ಕೊಡಿ ಎನ್ನುವುದಿಲ್ಲ. ಆಟ ಆಡಿಸುವ ಮನೆಯವರು ಸಂತೋಷದಿಂದ ಎಷ್ಟು ಕೊಡುತ್ತಾರೋ ಅಷ್ಟು ಮಾತ್ರ ಸ್ವೀಕರಿಸಿ ಖುಷಿಯಿಂದ ಇನ್ನೊಂದು ಕಡೆ ತೆರಳುತ್ತಾರೆ. ಇವರ ಕಲಾ ಸೇವೆ ದಿನಕ್ಕೆ 13 ಮನೆಯಲ್ಲಿ ನಡೆಯುತ್ತದೆ. ಅದರಲ್ಲಿ ಕೆಲವು ಮನೆಗಳಲ್ಲಿ ಇಪ್ಪತ್ತು ನಿಮಿಷ ಇರುತ್ತದೆ .
ಈ ಚಿಕ್ಕಮೇಳವನ್ನು ಸಂಚಾಲಕರಾಗಿ ನಾಗರಾಜ್ ರವರು ಇಲ್ಲಿಯವರೆಗೆ ನಡೆಸಿಕೊಂಡು ಬಂದಿದ್ದಾರೆ.
ಶ್ರೀ ತಿಮ್ಮಪ್ಪ ದೇವಾಡಿಗ ಹೆರಂಜಾಲು ರವರವ್ಯವಸ್ಥಾಪಕತ್ವದ ಶಿಸ್ತುಬದ್ಧವಾದ ಈ ಚಿಕ್ಕ ಮೇಳದಲ್ಲಿ ಗುಡ್ರಿ ಗಣೇಶ್ ಭಟ್, ತಿಮ್ಮಪ್ಪ ದೇವಾಡಿಗ,ಅಜಿತ್ ಕುಮಾರ್ ಹಟ್ಟಿಕುದ್ರು, ರವಿಶೆಟ್ಟಿ, ಪ್ರದೀಪ್ ಶೆಟ್ಟಿ ನಾರ್ಕಳಿಕಲಾವಿದರಾಗಿ ದುಡಿಯುತ್ತಿದ್ದಾರೆ .ಇವರೊಂದಿಗೆ ಸಹಕರಿಸುತ್ತಿರುವವರು ಪರಮೇಶ್ವರ ದೇವಾಡಿಗ. ಉತ್ತಮ ತಂಡ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ನಡೆಯುವ ಪ್ರದರ್ಶನ ಮೇಳದಲ್ಲಿ ಶಿಸ್ತು ಬದ್ಧ ನಂಬಿಕೆಗಳಿಗೆ ಒತ್ತು ಈ ತಂಡದ ಯಶಸ್ಸಿಗೆ ಕಾರಣವಾಗಿದೆ.
ಸತತವಾಗಿ ಮಳೆಗಾಲದಲ್ಲಿ 5ತಿಂಗಳು ನಡೆಯುವ ಈ ಚಿಕ್ಕ ಮೇಳದ ಕಲಾವಿದರ ಪ್ರದರ್ಶನಕ್ಕೆ ಶಿಸ್ತು,ಬದ್ದತೆ ಮತ್ತು ಶ್ರೀ ದೇವಿಯ ಶಕ್ತಿಯೆ ಕಾರಣವಾಗಿದೆ. ಈ ಪರಿಸರದ ಎಲ್ಲಾ ಭಕ್ತಾದಿಗಳು ಕಲಾವಿದರನ್ನು ಶ್ರೀದೇವಿಯನ್ನು ಬರಮಾಡಿಕೊಂಡು ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ ಎಂದು ಚಿಕ್ಕ ಮೇಳದ ಸಂಸ್ಥಾಪಕರು ಮತ್ತು ಯಜಮಾನರಾದ ತಿಮ್ಮಪ್ಪ ದೇವಾಡಿಗ ತಮ್ಮ ಸಂತಸವನ್ನು ಹಂಚಿಕೊಂಡರು.
ಈ ಚಿಕ್ಕ ಮೇಳದ ಕಲಾ ಸೇವೆ ನಿರಂತರವಾಗಿ ಹಾಗೂ ಯಶಸ್ವಿಯಾಗಿ ಮುನ್ನೆಡೆಯಲಿ ಎಂದು ಕಲಾಮಾತೆಯಲ್ಲಿ ಬೇಡಿಕೊಳ್ಳುತ್ತಾ,ಶ್ರೀ ಮಹಾಸತಿ ದೇವಿ ಚಿಕ್ಕಮೇಳದ ತಂಡಕ್ಕೆ ಶುಭಹಾರೈಸುತ್ತೇನೆ.
ಬರಹ :-ಈಶ್ವರ್ ಸಿ ನಾವುಂದ ಚಿಂತಕ -ಬರಹಗಾರರು 9833259692