ವಂಡ್ಸೆ (ಸೆ,27):ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು, ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟದ ನಾಲ್ಕು ಹೊಸ ತಂಡಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಕ್ಕೆ ಒಕ್ಕೂಟ ಅಧ್ಯಕ್ಷರಾದ ಎಂ.ಜೆ. ಬೇಬಿ ವಹಿಸಿದ್ದರು. ಮೆಕ್ಕೆ ಒಕ್ಕೂಟದ ಸೇವಾ ಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಕೊಲ್ಲೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಮಹಾಬಲ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಯೋಜನೆ 16 ವರ್ಷದ ಹಿಂದೆ ನಮ್ಮಲ್ಲಿಗೆ ಪಾದಾರ್ಪಾಣೆ ಮಾಡಿದೆ, ಆದರೆ ಪರಮ ಪೂಜ್ಯರ ಕುಟುಂಬಕ್ಕೆ ಸದಸ್ಯರಾಗುವ ಸುವರ್ಣ ಅವಕಾಶ ಇಂದು ನಿಮಗೆ ಲಭಿಸಿದೆ, ನಮ್ಮ ಒಕ್ಕೂಟಕ್ಕೆ ಒಟ್ಟು ಐದು ನೂತನ ತಂಡಗಳು ಸೇರ್ಪಡೆಗೊಂಡವು. ನಿಮ್ಮ ನಿಮ್ಮ ತಂಡವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೋಗಿ ಎಂದು ಹಾರೈಸಿದರು.
ವಲಯ ಮೇಲ್ವಿಚಾರಕರಾದ ಶ್ರೀ ರಾಮ್ ಎನ್. ನಾಲ್ಕು ಹೊಸ ತಂಡದ ಸದಸ್ಯರಿಗೆ ದಾಖಲಾತಿ ಹಸ್ತಾಂತರಿಸಿ ತಂಡದ ಸಭಾ ನಡವಳಿಕೆ ಮತ್ತು ಜವಾಬ್ದಾರಿಗಳನ್ನು ತಿಳಿಸಿದರು. ಯೋಜನೆಯ ನಿಕಟವರ್ತಿ ಶ್ರೀ ದಿನೇಶ್ ಶಾಸ್ತ್ರೀ, ರಾಜು ನಾಯ್ಕ ಮೇಲ್ ಕೆಂಜಿ, ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಸೂಲ್ಯ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ವಿದ್ಯಾ ಜೊತೆ ಕಾರ್ಯದರ್ಶಿ ಶ್ರೀಮತಿ ಶ್ಯಾಮಲಾ, ಕೋಶಾಧಿಕಾರಿ ಶ್ರೀ ಮಂಜುನಾಥ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊಳಲು ತಂಡದ ಸದಸ್ಯರಾದ ಸತೀಶ್ ನಾಯ್ಕ ತನ್ನ ಅನಿಸಿಕೆ ವ್ಯಕ್ತಪಡಿಸಿದರು. ನೂತನ ನಾಲ್ಕು ತಂಡದ ಸದಸ್ಯರ ಕುಟುಂಬದವರು ಹಿರಿಯ ತಂಡಗಳ ಸದಸ್ಯರು ಹಾಜರಿದ್ದರು. ತಂಡ ಉದ್ಘಾಟನಾ ಸವಿನೆನಪಿಗಾಗಿ ನಾಲ್ಕು ತಂಡಕ್ಕೆ ಗಿಡಗಳನ್ನು ನೀಡಲಾಯಿತು. ಶ್ರೀಮತಿ ವಿದ್ಯಾ ಕಾರ್ಯಕ್ರಮ ನಿರ್ವಹಿಸಿ, ಸ್ಪಂದನ ತಂಡದ ಸದಸ್ಯೆ ಶ್ರೀಮತಿ ವಸಂತಿ ವಂದಿಸಿದರು.