ಕೋಟೇಶ್ವರ ( ಆ .19): ಮೊಳಹಳ್ಳಿ ದಿನೇಶ್ ಹೆಗ್ಡೆ ಜಯ ರತ್ನ ಟ್ರಸ್ಟ್ (ರಿ.) ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಟ್ರಸ್ಟಿನ ಕಾರ್ಯವೈಖರಿ ಸರ್ವರಿಗೂ ಮಾದರಿಯಾದದ್ದು ಹಾಗೂ ಇದನ್ನುಫಲಾನುಭವಿಗಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೊಳಹಳ್ಳಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುರೇಂದ್ರ ಶೆಟ್ಟಿ ಹೇಳಿದರು.
ಅವರು ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ.)ಮೊಳಹಳ್ಳಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್( ರಿ.) ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( ಅಂಧತ್ವ ನಿವಾರಣ ವಿಭಾಗ ) ಉಡುಪಿ, ಇವುಗಳ ಜಂಟಿ ಸಹಯೋಗದಲ್ಲಿ ಆಗಸ್ಟ್ 18 ರಂದು ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜಯರತ್ನ ಟ್ರಸ್ಟ್ ನ ಪ್ರವರ್ತಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಮಾತನಾಡಿ, ಜನರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಉಚಿತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ. ಎಂದು ಹೇಳಿದರು.
ಶಿಬಿರದಲ್ಲಿ ಒಟ್ಟು 250 ಕ್ಕೂ ಅಧಿಕ ಮಂದಿ ಜನ ಪಾಲ್ಗೊಂಡಿದ್ದು 21 ಮಂದಿಯನ್ನು ಪೊರೆ ಶಸ್ತ್ರ ಚಿಕಿತ್ಸೆ ಗೆ ಗುರುತಿಸಿಕೊಳ್ಳಲಾಗಿದೆ. ಸಮೀಪ ದೃಷ್ಟಿ ಹಾಗೂ ದೂರ ದೃಷ್ಟಿ ದೋಷ ಉಳ್ಳಂತಹ ಸುಮಾರು 150 ಮಂದಿಗೆ ಉಚಿತ ಕನ್ನಡಕವನ್ನು ಟ್ರಸ್ಟ್ ವತಿಯಿಂದ ಮುಂದಿನ ಹದಿನೈದು ದಿನಗಳೊಳಗಾಗಿ ಮೊಳಹಳ್ಳಿ ಟೈಲ್ಸ್ ಕಚೇರಿಯಲ್ಲಿ ವಿತರಿಸಲಾಗುವುದು ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಮಹೇಶ್ ಹೆಗ್ಡೆ ಎಂ., ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಶೆಟ್ಟಿ ದ್ಯಾವಲ್ ಬೆಟ್ಟು, ಪ್ರಸಾದ್ ನೇತ್ರಾಲಯ ಉಡುಪಿ ಇಲ್ಲಿನ ನೇತ್ರ ತಜ್ಞರಾದ ಡಾ. ತೇಜಸ್ವಿನಿ, ತೋಟಗಾರಿಕಾ ಇಲಾಖೆಯ ನಿವೃತ್ತ ನಿರ್ದೇಶಕರಾದ ಶ್ರೀ ಎಚ್ ಜಯಶೀಲ ಶೆಟ್ಟಿ, ಮೊಳಹಳ್ಳಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಚೈತ್ರ ವಿವೇಕ್ ಅಡಪ, ನೇತ್ರ ತಜ್ಞರಾದ ಡಾ. ಕೆ. ಎಸ್. ವೈದ್ಯ ಉಪಸ್ಥಿತರಿದ್ದರು. ಟ್ರಸ್ಟ್ ನ ಕೋ ಆರ್ಡಿನೇಟರ್ ಶ್ರೀ ಗಿರೀಶ್ ಎಂ. ಎನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಶ್ರೀ ಗಣೇಶ್ ಶೆಟ್ಟಿ ಮೊಳಹಳ್ಳಿ ನಿರೂಪಿಸಿದರು. ಶ್ರೀಮತಿ ಸುಜಾತ ವಂದಿಸಿದರು.