ತಮ್ಮ ವೈಯುಕ್ತಿಕ ಹಾಗೂ ಕೌಟುಂಬಿಕ ಸವಾಲುಗಳ ನಡುವೆಯೂ ಜನಸೇವೆ ಮಾಡಬೇಕೆಂದು ಸ್ವಯಂ ಪ್ರೇರಣೆಯಿಂದ, ನಿಸ್ವಾರ್ಥ ಸೇವೆಯಲ್ಲಿ ತಲ್ಲೀನರಾಗಿರುವುದರ ಜೊತೆಗೆ ಜನರಿಗೆ ಜೀವರಕ್ಷಕ ಮತ್ತು ಆಪತ್ಭಾಂಧವನಾಗಿರುವ ಈಶ್ವರ್ ಮಲ್ಪೆ ಯವರ ಕುರಿತಾದ ಸಂದರ್ಶನ ಲೇಖನ ಇಗಾಗಲೇ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ.ಅದೇ ರೀತಿಯಲ್ಲಿ ಇನ್ನೊರ್ವ ಆಪತ್ಭಾಂಧವ ಹಾಗೂ ಆಪ್ತ ರಕ್ಷಕನನ್ನು ನಿಮಗೆ ಪರಿಚಯಿಸಲಿಚ್ಚಿಸುತ್ತೇನೆ.
ಸರ್ವೇಸಾಮಾನ್ಯವಾಗಿ ಜೀವ ರಕ್ಷಕ ಮತ್ತು ಆಪದ್ಬಾಂಧವ ಎಂದು ಪ್ರೀತಿಯಿಂದ ಜನರಿಂದ ಕರೆಯಲ್ಪಡುವವರ ಕಥೆ- ವ್ಯಥೆ ಗಳು ಒಂದೇ ರೀತಿಯದ್ದಾಗಿರುತ್ತದೆ. ಎಲ್ಲಾ ಜೀವ ರಕ್ಷಕರ ನೋವು ಒಂದೇ ತರವಾಗಿರುವುದು ನೋಡಿ ನನ್ನ ಕರುಳಿಗೆ ಕೈ ಹಾಕಿ ಎಳೆದಷ್ಟು ನೋವಾಗುತ್ತಿದೆ. ಆ ನಿಟ್ಟಿನಲ್ಲಿ ಈ ಲೇಖನದ ಮೂಲಕ ಅವರ ಮನಸು, ಕನಸು ವೇದನೆಯ ಪುಸ್ತಕವನ್ನು ತಮ್ಮ ಮುಂದೆ ತೆರೆದಿಡುವ ಅನಿವಾರ್ಯತೆ ನನಗೆ.
ಕೆರೆ ,ತೋರೆ ,ಹರಿವ ನದಿ ಮತ್ತು ಸಮುದ್ರದಂತಹ ಜೀವ ಕಂಟಕ ಸ್ಥಳಗಳಲ್ಲಿ ಅಸಹಾಯಕರಾಗಿ ಸಾವು ಬದುಕಿನ ನಡುವೆ ಹೋರಾಡುವವರ ರಕ್ಷಣೆ ಮತ್ತು ವಿಧಿಯಾಟಕ್ಕೆ ಮ್ರತರಾದವರ ಶವವನ್ನು ಅವರ ವಾರಸುದಾರರಿಗೆ ಒಪ್ಪಿಸುವ ನಿಸ್ವಾರ್ಥ ಸೇವೆ ಮಾಡುತ್ತಿರುವವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕಳಸ ಹೋಬಳಿಯ ಬಾಳೆಹೊಳೆಯ ನಿವಾಸಿ ಆಪತ್ಭಾಂಧವ ಶ್ರೀ ಭಾಸ್ಕರ ತಲಗೋಡು.
ಇವರು ಆರ್ಥಿಕವಾಗಿ ಕಡು ಬಡವರಾಗಿದ್ದು, ಕೌಟುಂಬಿಕ ಸವಾಲುಗಳು ಹಾಗೂ ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.ಜನಸೇವೆ ಮಾಡಬೇಕೆಂದು ಸ್ವಯಂ ಪ್ರೇರಣೆಯಿಂದ, ನಿಸ್ವಾರ್ಥ ಸೇವೆಯಲ್ಲಿ ತಲ್ಲೀನರಾಗಿರುವುದರ ಜೊತೆಗೆ ಜನರಿಗೆ ಜೀವರಕ್ಷಕ ಮತ್ತು ಆಪದ್ಬಾಂಧವನಂತೆ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲಿನಿಂದಲೂ ಈ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಶ್ರೀ ಭಾಸ್ಕರ ತಲಗೋಡು ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಆಪತ್ ಕಾಲದಲ್ಲಿ ಜೀವ ರಕ್ಷಣೆ ಮತ್ತು ಮ್ರತರ ಶವವನ್ನು ವಾರಸುದಾರರಿಗೆ ಒಪ್ಪಿಸುವ ನಿಸ್ವಾರ್ಥ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಲಿಸ್ ಇಲಾಖೆ ಮತ್ತು ಅಗ್ನಿಶಾಮಕ ದಳ, ತುರ್ತು ಸೇವೆಗಳ ಇಲಾಖೆ, ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಆಡಳಿತ ಉಸ್ತುವಾರಿ ಮತ್ತು ನಿರ್ವಹಣೆ ಇಲಾಖೆ ಈ ಬರಹ ಗಮನಿಸಿ ಇಬ್ಬರು ವ್ಯಕ್ತಿಗಳಾದ ಈಶ್ವರ್ ಮಲ್ಪೆ ಮತ್ತು
ಭಾಸ್ಕರ ತಲಗೋಡುರವರ ಜೀವ ಮತ್ತು ಜೀವನ ನಿರ್ವಹಣೆ ಬಗ್ಗೆ ಗಮನಹರಿಸಬೇಕೆಂದು ಅವರ ಈ ಸೇವೆಯನ್ನು ಮನಗಂಡು, ಪರೀಕ್ಷಿಸಿ ಜೀವನ ನಿರ್ವಹಣೆಗಾಗಿ ಒಂದು ಸರಕಾರಿ ಖಾಯಂ ಉದ್ಯೋಗ ದೊರಕಿಸಿ ಕೊಡಬೇಕೆಂದು ವಿನಂತಿಸಿ ಕೊಳ್ಳುವುದರ ಜೊತೆಗೆ ಭಾಸ್ಕರ್ ರವರ ಕಥೆ- ವ್ಯಥೆಯನ್ನು ನಿಮಗೆ ತಿಳಿಸುತ್ತಿದ್ದೇನೆ.
ಜೀವರಕ್ಷಕ ನಾಗಿ ನಿಸ್ವಾರ್ಥ ಸೇವೆ ಮಾಡುವ ಶ್ರೀ ಭಾಸ್ಕರ ತಲಗೋಡು ರವರು ಕೂಲಿ ಕಾರ್ಮಿಕನಾಗಿ ಜೀವನ ನಿರ್ವಹಣೆಗಾಗಿ ಕೆಲಸ ಮಾಡಿಕೊಂಡಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಹಲವಾರು ಸಾಮಾಜಿಕ ಸಂಘಟನೆಗಳು , ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ವಿಪರ್ಯಾಸವೆಂದರೆ ಇವರಿಗೆ ಉಳಿದುಕೊಳ್ಳಲು ವಾಸಯೋಗ್ಯ ಮನೆಯಿಲ್ಲದೆ, ತನಗೆ ಸನ್ಮಾನ ಸಮಾರಂಭಗಳಲ್ಲಿ ಅರ್ಪಿಸಿದ ಪ್ರಶಸ್ತಿ ಪತ್ರಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಇಟ್ಟಿರುತ್ತಾರೆ…!!!
ಪ್ರಸ್ತುತ ಕಳಸ ಹೋಬಳಿ, ತೋಟದೂರು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಭಾಸ್ಕರ್ ರವರ ಪರಿವಾರ ಕಡು ಬಡತನದಲ್ಲೇ ಬದುಕುವ ಜೀವಗಳು.ತಂದೆ ಸಂಜೀವ (ದಿವಂಗತ) ತಾಯಿ ಸುಶೀಲಾರ ಐದು ಜನ ಮಕ್ಕಳಲ್ಲಿ 1ಅಕ್ಕಾ 1ತಂಗಿ(ದಿವಂಗತ )ಮತ್ತು ಇಬ್ಬರು ತಮ್ಮನ ಒಡನಾಡಿ ಈ ಭಾಸ್ಕರ್. ಮೂರನೇ ತರಗತಿಯ ತನಕ ಮಾತ್ರ ವಿದ್ಯಾಭ್ಯಾಸ. ಅಮ್ಮ ಸುಶೀಲಾರವರ ಆಸೆಯಂತೆ ಈಜು ಪಟುವಾಗಿ, ಅವರ ಪ್ರೇರಣೆಯಂತೆ ಈ ಜೀವ ರಕ್ಷಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ರಕ್ಷಣೆ ಸಮಯದಲ್ಲಿ ಅಮ್ಮ ನ ಹೆಸರು ಹೇಳಿ ಕಣ್ಣು ಮುಚ್ಚಿ ಹರಿವ ನೀರಿಗೆ ದುಮಿಕಿ ಬಿಡುತ್ತೇನೆ ಎಂದು ಹೇಳುವಾಗ ಹೆತ್ತಮ್ಮಗೆ ಗೌರವ ತೋರಿದ್ದು ಅವರ ಮಾತಿನಲ್ಲೇ ಗೊತ್ತಾಗುತಿತ್ತು. ಮಾತು ಮುಂದುವರಿಸುತ್ತಾ ತನಗೆ ನೀರಿನಲ್ಲಿ ಆಕ್ಸಿಜನ್ ಅಗತ್ಯವಿಲ್ಲದೆ ಹತ್ತು ನಿಮಿಷಗಳ ಕಾಲ ನೀರಿನಡಿಯಲ್ಲಿ ಮುಳುಗಿರುವ ಕ್ಷಮತೆ ಬಗ್ಗೆ ಹೇಳಿಕೊಂಡರು.ಕೆಲವೊಂದು ಸಲ ಸಂಶೋಧನೆಗೆ 15 ರಿಂದ 20 ದಿನಗಳು ತಗುಲಿದ್ದು ಕೆಲವು ಗ್ರಾಮಸ್ಥರು ಅಲ್ಪ ಸ್ವಲ್ಪ ಹಣಕಾಸಿನ ಸಹಾಯ ಮಾಡಿರುವ ಬಗ್ಗೆ ಭಾಸ್ಕರ್ ರವರು ಕ್ರತಜ್ಙತಾ ಪೂರ್ವಕವಾಗಿ ನೆನಪಿಸಿಕೊಂಡಿದ್ದಾರೆ.
ಭಾಸ್ಕರ್ ಬಳಿ ಯಾವುದೇ ವಾಹನಗಳು ಇಲ್ಲದೆ ಶವ ಶೋಧನೆಗಾಗಿ ದೂರದ ಊರಿಗೆ ಬಸ್ಸಿನಲ್ಲಿ ಮತ್ತು ಖಾಸಗಿ ವಾಹನವನ್ನು ಮಾಡಿಕೊಂಡು ಹೋಗಿ ಬಂದಿರುವುದು ಉಂಟು. ಸಾರಿಗೆ ವೆಚ್ಚವನ್ನು ಕೂಡ ತನ್ನ ಕೂಲಿ ಮಾಡಿದ ಸಂಬಳದಲ್ಲಿ ಬರಿಸಿದ್ದು ಉಂಟು.
ಇವರು ಕೂಡ ಈಶ್ವರ್ ಮಲ್ಪೆ ಯವರಂತೆ ಆಕ್ಸಿಜನ್ ಕಿಟ್ ಕೂಡ ಇಲ್ಲದೆ ರಕ್ಷಣಾ ಕಾರ್ಯಾಚರಣೆಗೆ ಇಳಿದು ಅನೇಕ ಜೀವ ಉಳಿಸಿರುವ ಜೊತೆಗೆ, ಅನೇಕ ಬಾರಿ ,ಶವ ಶೋಧಿಸಿ ವಾರಸುದಾರರಿಗೆ ತಲುಪಿಸಿದ್ದಾರೆ. ಇಲ್ಲಿತನಕ ಸರಿಸುಮಾರು 79 ಹೆಣವನ್ನು ವಾರಸುದಾರರಿಗೆ ಅರ್ಪಿಸಿದ್ದಾರೆ.
ಭಾಸ್ಕರ್, ರವರ ಪತ್ನಿ ಸರೋಜ, ಮೂವರು ಹೆಣ್ಣು ಮಕ್ಕಳಾದ, ಸುಷ್ಮೀತಾ, ವರ್ಷ ಮತ್ತು ಪ್ರಥ್ವಿ ಜೊತೆಗೆ ಬಡತನದಲ್ಲೂ, ಮಳೆಗಾಲದ ಈ ಸಂದರ್ಭದಲ್ಲಿ ಸೋರುವ ಶಿಟ್ ಹಾಕಿದ ಮಾಡಿನ ಮೇಲ್ಚಾವಣಿ, ಗೋಡೆ ಸರಿಯಾಗಿ ಇಲ್ಲದ ಮನೆಯಲ್ಲಿ ವಾಸ. ಇದನ್ನು ಭಾಸ್ಕರ್ ರವರು ತೋಟದೂರು ಗ್ರಾಮ ಪಂಚಾಯತ್ ಗಮನಕ್ಕೆ ತಂದಾಗ ಮನೆ ಕಟ್ಟಲು ಪ್ರಥಮ ಸುತ್ತಿನ 30 ಸಾವಿರ ಹಣ ಬಿಡುಗಡೆ ಆಗಿತ್ತು.ಸ್ವಲ್ಪ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಧಿಕ ಬಡ್ಡಿಯಲ್ಲಿ ಹಣ ಹೊಂದಿಸಿ ಮನೆಯ ಅಡಿಪಾಯ ಹಾಕಿಸಿದ್ದಾರೆ. ಕಲ್ಲಿನ ಗೋಡೆಯಿಲ್ಲದ ದಬ್ಬೆಯ ಗೋಡೆಯ ಮನೆ. ಮನೆಗೆ ಗೋಡೆ ಕಟ್ಟುವ ಕೆಲಸಕ್ಕೆ ಹಣಕಾಸಿನ ಸಮಸ್ಯೆಯಿಂದಾಗಿ ಮನೆ ಕಟ್ಟುವ ಕಾರ್ಯ ಸ್ಥಗಿತ ತೆಗೆದುಕೊಂಡಿದೆ.
ಮುಂದಿನ ಕಂತಿಗಾಗಿ ಐದು, ಆರು ಸಲ ಪಂಚಾಯತ್ ಮೆಟ್ಟಿಲು ಅಲೆದಾಡಿದರೂ ಕೋವಿಡ್ 2ನೇ ಮತ್ತು 3ನೇ ಅಲೆಯ ಸಮಸ್ಯೆ ಹೇಳಿ ಭಾಸ್ಕರ್ ರವರನ್ನು ಹಿಂದಕ್ಕೆ ಕಳಿಸಿದ್ದಾರೆ. ಸೋರುವ ಶೀಟ್ ಮನೆಯಲ್ಲಿ ವೃದ್ಧ ತಾಯಿ ಸುಶೀಲಮ್ಮ, ಪತ್ನಿ ಮತ್ತು ಶಾಲೆಗೆ ಹೋಗುವ ಮೂರು ಹೆಣ್ಣು ಮಕ್ಕಳು ಅವ್ಯವಸ್ಥೆಯ ಗುಡಿಸಲಿನಲ್ಲಿ ವಾಸಮಾಡುತ್ತಿದ್ದಾರೆ.
ಮಲೆನಾಡಿನ ಅಧಿಕ ಮಳೆ ಮತ್ತು ಗಾಳಿಯಿಂದಾಗಿ ಮನೆಯಲ್ಲಿ ರಾತ್ರಿ ಮಲಗದೆ ಎಚ್ಚರ ಇದ್ದು ಇಂದು ಬೀಳುತ್ತೋ, ನಾಳೆ ಬೀಳುತ್ತೋ ಅನ್ನೋ ಪರಿಸ್ಥಿತಿಯ ಮನೆ…! ಹಾಗಾಗಿ, ಭಾಸ್ಕರ್ ರವರ ಕೋರಿಕೆ ಏನೆಂದರೆ ಯಾರಾದರೂ ರಾಷ್ಟ್ರೀಕತ ಬ್ಯಾಂಕಿನಲ್ಲಿ ಸಾಕ್ಷಿ ಮುಂದಾಳತ್ವದಿಂದ ಲೋನ್ ವ್ಯವಸ್ಥೆ ಮಾಡಿ ಕೊಟ್ಟು, ಮತ್ತೆ ಪಂಚಾಯತ್ ನಿಂದ ಮುಂದಿನ ಕಂತುಗಳನ್ನು ಶೀಘ್ರದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಿಕೊಟ್ಟರೆ ಕಂತಿನ ಹಣವನ್ನಾದರೂ ನಾನು ಕೂಲಿ ಮಾಡಿ ಕಟ್ಟುತ್ತೇನೆ.
ಜೊತೆಗೆ ಯಾವುದಾದರೂ ಸರ್ಕಾರಿ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯಡಿಯಲ್ಲಿ ಒಂದು ಖಾಯಂ ಕೆಲಸ ಒಂದನ್ನು ನೀಡಿದರೆ ನನ್ನ ಅಮ್ಮ ಮತ್ತು ಸಂಸಾರ, ಮೂರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಬಹುದು, ಜೊತೆಗೆ ನನ್ನ ಈ ಸೇವೆ ಕೆಲಸ ಸಂತೋಷದಿಂದಲೇ ಮಾಡಬಹುದೆಂಬ ಇವರ ಮುಂದಿನ ಮಾತು ಕೇಳಿ ಮೂಕವಿಸ್ಮಿತನಾದ ನನಗೆ ಇವರ ಹೃದಯ ಶ್ರೀಮಂತಿಕೆಯ ಅರಿವಾಯಿತು. ಸರಕಾರ ನನಗೆ ಯಾವುದೇ ಕೆಲಸ ಕೊಡದಿದ್ರೂ ನಾನು ಜೀವ ರಕ್ಷಣೆ, ಶವ ಶೋಧನೆ ಮಾಡುವುದನ್ನು ಮಾತ್ರ ನನ್ನ ಜೀವ ಇರೋ ತನಕ ಮುಂದುವರಿಸುತ್ತೇನೆ ಎಂದು ಭಾಸ್ಕರ್ ರವರು ಹೇಳಿದಾಗ ಎರಡು ನಿಮಿಷ ನಾನು ಮೌನವಾದೆ.
ಇನ್ನೊಂದು ಸತ್ಯವಾದರೂ ತಾವುಗಳು ನಂಬಲಾರಾರಿ, ಇಷ್ಟರ ತನಕ 79 ಶವವನ್ನು ಯಾವುದೇ ರೀತಿಯ ಆಕ್ಸಿಜನ್ ಕಿಟ್ ಮತ್ತು ಈಜಲು ಉಪಯೋಗಿಸುವ ಲೈಫ್ ಜಾಕೆಟ್ ಇಲ್ಲದೆ ಆಧುನಿಕ ಉಪಕರಣದ ಅವಸ್ಥೆ ಇಲ್ಲದೆ ಬರಿದಾದ ನೀರಿನ ಕ್ಯಾನ್ ಸಹಾಯದಿಂದ ಕಾರ್ಯಾಚರಣೆ ಮಾಡಿರುವುದಾಗಿ ಹೇಳಿಕೊಂಡರು.
ಅವರ ಬಳಿ ಲೈಫ್ ಇನ್ಸೂರೆನ್ಸ್ ಪಾಲಿಸಿ ಕೂಡ ಇಲ್ಲ. ಭಾಸ್ಕರ್ ರವರ ಕತೆ-ವ್ಯಥೆ ಕೇಳುವಾಗ ಹುಟ್ಟಿಕೊಂಡ ಪ್ರಶ್ನೆಗಳು ನೂರಾರು. ಆದರೆ ಯಾರಲ್ಲಿ ಕೇಳಲಿ ಯಾರಿಗಾದರೂ ಹೃದಯವಂತರಿಗೆ ಇವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದ್ದರೆ ತಾವುಗಳು ಸಂಬಂಧಪಟ್ಟ ಇಲಾಖೆಗೆ ಪ್ರಶ್ನಿಸಬಹುದು.
ಭಾಸ್ಕರ್ ಗೆ ವಾಹನ ಚಾಲನೆ ಗೊತ್ತಿರುವುದರಿಂದ ಯಾರಾದರೂ ಅವರಿಗೆ ಒಂದು ಅಂಬುಲೆನ್ಸ್ ಆಕ್ಸಿಜನ್ ಕಿಟ್ ಕೊಡುಗೆ ನೀಡುವುದರ ಮೂಲಕ ಅವರ ಮನೆ ಕಟ್ಟುವುದಕ್ಕೆ ಸಹಾಯವಾಗಲಿ.ನೀರಿನ ಜೊತೆ ಈಜಿ ಗೆದ್ದವನಿಗೆ ಬದುಕಿನ ಸಾಗರ ದಾಟಲು ಕಷ್ಟ ವಾಗುತ್ತಿದೆ ಎಂಥ ವಿಪರ್ಯಾಸ? ಇಂಥವರಿಗೆ ಈ ಸಮಾಜದಲ್ಲಿ ಒಳ್ಳೆಯ ರೀತಿಯಿಂದ ಬದುಕಲು ಸಹಾಯ ಮಾಡುವವರು ಯಾರೂ ಇಲ್ಲವೇ..?
ಇಂತಹ ಸಮಾಜ ಸೇವೆಯನ್ನು ಉಸಿರ- ಉಸಿರಿನಲ್ಲೂ, ನರನಾಡಿಯಲ್ಲಿ ತುಂಬಿಕೊಂಡಿರುವ ಭಾಸ್ಕರ್ ರವರ ಪರಿಸ್ಥಿತಿ ಹೇಗಿದೆ ನೋಡಿ? ಈ ಕಥೆ ಮತ್ತು ವ್ಯಥೆ ಸಂಬಂಧಪಟ್ಟವರ ಮನಸ್ಸನ್ನಾದರೂ ಮುಟ್ಟಲಿ. ಎನ್ನುವುದೇ ಈ ಸಂದರ್ಶನ ಲೇಖನದ ಆಶಯ.
(ಭಾಸ್ಕರ್ ತೋಟದೂರು -9480654757-ಈಜು ಪ್ರವೀಣ ಮತ್ತು ಜೀವ ರಕ್ಷಕ )
ಸಂದರ್ಶನ ಲೇಖನ ಈಶ್ವರ್ ಸಿ ನಾವುಂದ. ಚಿಂತಕ -ಬರಹಗಾರರು.
9833259692