ಅಂಪಾರು(ಅ,9):ಇತ್ತೀಚೆಗೆ ಅಂಪಾರು ಪರಿಸರದಲ್ಲಿ ಗುಡುಗು ,ಮಿಂಚು ಸಹಿತ ಸುರಿದ ಅಕಾಲಿಕ ಮಳೆಯ ಪರಿಣಾಮವಾಗಿ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆ, ಶಾನ್ಕಟ್ಟು ಕನ್ನಾಲಿಗೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಜೋರಾಗಿ ಬೀಸಿದ ಗಾಳಿಯಿಂದಾಗಿ ಬೃಹದಾಕಾರದ ಮರಗಳು ಮನೆ ಹಾಗೂ ರಸ್ತೆಯ ಮೇಲೆರಗಿದ್ದವು.ಇನ್ನೂ ಕೆಲವು ಭಾಗಗಳಲ್ಲಿ ಫಲವತ್ತಾದ ಅಡಿಕೆ, ತೆಂಗಿನ ಮರಗಳು ಧರೆಗುರುಳಿ ಬಿದ್ದಿದೆ.ಅದಲ್ಲದೇ ಗಾಳಿಯ ರಭಸಕ್ಕೆ ಮನೆಗಳ ಹಾಗೂ ದನದ ಕೊಟ್ಟಿಗೆಗಳ ಹೆಂಚು ಹಾಗೂ ತಗಡಿನ ಮಾಡು ಸಂಪೂರ್ಣ ಜಖಂಗೊಂಡಿದ್ದು, ಸಿಡಿಲಿನ ಹೊಡೆತಕ್ಕೆ ಸಿಲುಕಿ ಮನೆಯೊಂದು ಹಾಳಾಗಿದೆ.
ಮೂಡುಬಗೆಯ ಭಾಗದ ಎಲ್ಲಾ ರಸ್ತೆಗಳು ಹಾಗೂ ಮೂಡುಬಗೆಗೆ ಸಂಪರ್ಕ ಕಲ್ಪಿಸುವ ಒಳಭಾಗದ ರಸ್ತೆಗಳಾದ ಶಾನ್ಕಟ್ಟು ರಸ್ತೆ, ಬಾಳ್ಕಟ್ಟು ರಸ್ತೆ, ಹೊಸಿಮನೆ ರಸ್ತೆ, ಕನ್ನಾಲಿ ರಸ್ತೆ, ಕೋಟೆಬೆಟ್ಟು ರಸ್ತೆ, ಮಾರ್ಡಿ ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದವು. ಕೃಷಿ ಯನ್ನೇ ಜೀವನಾಧಾರ ಮಾಡಿಕೊಂಡಿದ್ದು ಇಲ್ಲಿನ ಕೃಷಿಕರ ಸಾವಿರಾರು ಫಲಭರಿತ ಬೆಳೆದ, ಬಲಿತ ಅಡಿಕೆ ಗಿಡಗಳು ಮುರಿದು ಬಿದ್ದು ಅನೇಕರ ಹೊಟ್ಟೆಪಾಡಿಗೆ ಪೆಟ್ಟು ಬಿದ್ದಂತಾಗಿದೆ.
ಈ ಅಕಾಲಿಕ ಮಳೆಯಿಂದಾದ ಅಪಾರ ನಷ್ಟದಿಂದಾಗಿ ಇಡೀ ಜನಜೀವನವೇ ಅಸ್ತವ್ಯಸ್ತ ಗೊಂಡಿದ್ದು ಇದರಿಂದ ಹೊರಬರಲು ಇನ್ನೂ ಅನೇಕ ವರ್ಷಗಳೇ ಬೇಕಾಗುವುದು.126 ಕರೆಂಟ್ ಕಂಬ ಸಂಪೂರ್ಣ ಧರೆಗುರುಳಿದೆ.
ಗ್ರಾಮಪಂಚಾಯತ್ ನ ಅಧ್ಯಕ್ಷರ ಹಾಗೂ ಸದಸ್ಯರ ಅವಿರತ ಪ್ರಯತ್ನ :ಅಂಪಾರು ಗ್ರಾಮಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಭಾರತಿ ಶೇಟ್ , ಉಪಾಧ್ಯಕ್ಷ ಅಶೋಕ್ . ಕೆ ಹಾಗೂ ಸದಸ್ಯರು ತೊಂದರೆಗೀಡಾದ ಜನರ ನಡುವೆಯೇ ಇದ್ದು ಅವರ ಕಷ್ಟಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದಿನರಾತ್ರಿ ಶ್ರಮಿಸಿದ್ದಾರೆ.ನಿರಂತರ ಕೆಲಸದಿಂದ ಎರಡೇ ದಿನಗಳಲ್ಲಿ ಅಷ್ಟೂ ರಸ್ತೆಗೆ ಅಡ್ಡಲಾದ ಮರಗಳನ್ನು ತೆಗೆದು ದಾರಿಯನ್ನು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಯ ಮೇಲೆಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. 2ದಿನದಲ್ಲಿ 90% ದುರಸ್ತಿ ಕಾಮಗಾರಿ ಮುಗಿದಿದೆ.
ಶಾಸಕ ಶ್ರೀ ಬಿ. ಎಂ .ಸುಕುಮಾರ ಶೆಟ್ಟಿ ಭೇಟಿ – ನೆರವು ಘೋಷಣೆ : ಅಪಾರ ಮಳೆಯಿಂದಾಗಿ ಹಾನಿಯೊಳಗಾಗಿರುವ ಮನೆಗಳಿಗೆ ಶಾಸಕರಾದ ಶ್ರೀ ಸುಕುಮಾರ ಶೆಟ್ಟಿ ಭೇಟಿ ನೀಡಿ ಹನಿಗೋಳಾಗದ ಮನೆಗಳಿಗೆ 1500 ಹಂಚುಗಳನ್ನು ನೀಡಿದರು.ಹಾಗೂ ಎಲ್ಲಾ ಅಧಿಕಾರಿಗಳನ್ನೂ ಘಟನಾ ಸ್ಥಳಕ್ಕೆ ಕರೆಯಿಸಿ ಎಲ್ಲರ ಸಮಸ್ಯೆಗಳನ್ನು ವಿವರಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿ ಸೂಕ್ತ ಪರಿಹಾರ ನೀಡುವಂತೆ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಶಾಸಕರ ಮನವೊಲಿಸಿದರು.
ಶಾಸಕ ಶ್ರೀ ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ಸಂತೈಸಿ ಸೂಕ್ತ ಪ್ಯಾಕೇಜ್ ನೀಡುವ ಭರವಸೆ ನೀಡುವುದರೊಂದಿಗೆ ಉಸ್ತುವಾರಿ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿ ಶೀಘ್ರದಲ್ಲೇ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದರು. ತಾಲೂಕಿನ ತಹಶೀಲ್ದಾರ ಶ್ರೀ ಕಿರಣ್ ಗೋರಯ್ಯ ,ಅಸಿಸ್ಟಂಟ್ ಕಮಿಷನರ್ ಕೆ . ರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಧರ್ಭದಲ್ಲಿ ಎಲ್ಲರ ಕಷ್ಟದಲ್ಲಿ ಭಾಗಿಯಾದ ಎಲ್ಲರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರಮಿಸಿದ, ನೋವಿನ ಕಣ್ಣೀರನ್ನು ಒರಸುವಲ್ಲಿ ಯಶಸ್ಸನ್ನು ಸಾಧಿಸಿದ ಅಂಪಾರು ಗ್ರಾಮಪಂಚಾಯತ್ ನ ಅಧ್ಯಕ್ಷರು ಹಾಗೂ ಸದಸ್ಯರ ಪರಿಶ್ರಮ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಯಿತು.