ಸಮಾಜ ಸೇವೆ ಮಾಡುವಾಗ ಜಾತಿ-ಧರ್ಮವನ್ನು ನೋಡದೆ ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದಲ್ಲಿ ಸೌಹಾರ್ಧತೆ ಮತ್ತು ಮನುಷ್ಯನ ಮಾನವೀಯತೆಯ ದರ್ಶನವಾಗುತ್ತದೆ.ಒಬ್ಬ ವ್ಯಕ್ತಿ ಅಥವಾ ಸಮಾಜ ಸೇವಾ ಸಂಸ್ಥೆ ತನ್ನನ್ನು ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಾಗ ಮಾನವೀಯ ಮೌಲ್ಯಗಳನ್ನು ಹೊಂದಬೇಕಾಗಿರುವುದು ಅತ್ಯವಶ್ಯಕ.
ಈ ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿ ತನಗೆ ಗೌರವದಿಂದ ಬದುಕಲು ಅವಕಾಶ ಮಾಡಿ ಕೊಟ್ಟ ಸಮಾಜಕ್ಕೆ ಋಣಿಯಾಗಿರುವುದರ ಜೊತೆಗೆ ತಮ್ಮಿಂದ ಸಮಾಜಕ್ಕೆ ಏನಾದರೂ ಸೇವೆ ನೀಡಬೇಕೆಂಬ ಒಂದಿಷ್ಟು ಸೇವಾ ಮನಸ್ಸುಗಳು ಕಾತುರದಿಂದಿರುತ್ತದೆ. ಅಂತ ಜನಪರ ಕೆಲಸ ಮಾಡುವ ಸದ್ಗುಣ ವಂತರ “ಹ್ಯೂಮನಿಟಿ” ಎಂಬ ಸಂಸ್ಥೆಯ ಯುವಕರ ಕನಸು-ಮನಸು -ಯೋಜನೆ- ಯೋಚನೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.
ಆರಂಭದಲ್ಲೇ ಹೇಳಿಬಿಡುತ್ತೇನೆ ಈ ಸಂಸ್ಥೆಯ ಪರಿಚಯ ಲೇಖನ ಪ್ರಚಾರಕ್ಕಾಗಿ ಅಲ್ಲ. ಈ ಸದ್ಗುಣ ಯುವಕರ ಮಹಾನ್ ಸೇವೆಗೆ ನಮ್ಮ ಚಿಕ್ಕದೊಂದು ಅಕ್ಷರ ಕಾಣಿಕೆ ಅಷ್ಟೇ.”ಹ್ಯೂಮನಿಟಿ” ಸಮಾಜ ಸೇವಾ ಸಂಸ್ಥೆ ಹುಟ್ಟಿದ್ದು 2010ರಲ್ಲಿ. ದಾನಿಗಳು ಮತ್ತು ಅಭಿಮಾನಿಗಳು ಈ ಸಂಸ್ಥೆಯ ಸೇವಾ ಕಾಳಜಿಗೆ ಕೈಜೋಡಿಸಿದ್ದು 2016 ರಲ್ಲಿ. ಈ ಸಂಸ್ಥೆ ನೋಂದಣಿಯಾಗಿದ್ದು 2017 ಆದರೆ ಇವರ ಜೋಳಿಗೆಯಲ್ಲಿರುವ ಪುಣ್ಯದ ಕೆಲಸಗಳು ಹಲವಾರು.
ಈ ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿ ಆಧಾರ ಸ್ತಂಭವಾಗಿ ಹಾಗೂ ಸಾರಥಿಯಾಗಿ ಸಂಸ್ಥೆಯ ರಥವನ್ನು ಎಳೆಯಲು ಹಗ್ಗವನ್ನು ಕೈಯಲ್ಲಿಡಿದು ನಿಂತವರು ರೋಷನ್ ಬೆಳ್ಮಣ್ , ಮಾರ್ವಿನ್ ಬೆಳ್ಮಣ್ಣು, ಪ್ರಶಾಂತ್ ಬಂಟವಾಳ’ ರೋಹಿನ್ ಮಂಗಳೂರು, ನವೀನ್ ಬೆಳ್ಮಣ್’ ಹಾಗೂ ಪೃಥ್ವಿನ್ ಬೆಳ್ಮಣ್.
ಸಮಾಜ ಸೇವೆಯ ಆಶಯದಿಂದ ರಚಿತವಾದ ಈ ಸಂಸ್ಥೆ ಯಾವುದೇ ಒಳ್ಳೆಯ ದಿನ ನೋಡಿ ಆರಂಭಿಸಿದ್ದಲ್ಲ, ಬದಲಾಗಿ ಸಮಾನ ಸೇವಾ ಮನಸ್ಕರ ಕೂಡುವಿಕೆಯಲ್ಲಿ ಇದರ ಆರಂಭವಾಗಿದ್ದು. ಈ ಸಂಸ್ಥೆ ಯಾವುದೇ ವಿಐಪಿಗಳಿಂದ ಉದ್ಘಾಟನೆಗೊಂಡಿದಲ್ಲ ಹಾಗೂ ಯಾವುದೇ ನಿರ್ದಿಷ್ಟ ಧಾರ್ಮಿಕ ಆಚರಣೆಗಳಿಂದ ನಡೆದಿಲ್ಲ .”ಹ್ಯೂಮನಿಟಿ” ಆಫೀಸಿನಲ್ಲಿ ಯಾವುದೇ ಧರ್ಮದ ದೇವರ ಮೂರ್ತಿ ಅಥವಾಚಿತ್ರಗಳು ಕಾಣಸಿಗುವುದಿಲ್ಲ. ಆದರೆ ನಿಜವಾದ ದೇವರು ನಮ್ಮ ಜೊತೆಗಿದ್ದು ಅವರೇ ನಮ್ಮ ಮೂಲಕ ಎಲ್ಲರ ವೇದನೆಗಳನ್ನು ನಿವಾರಿಸಿ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಎಂದು ಸಂಸ್ಥೆಯ ಸೇವಾ ಮನಸ್ಸುಗಳ ಬಲವಾದ ನಂಬಿಕೆ.
4 ವರ್ಷಗಳ ಹಿಂದೆ “ಹ್ಯೂಮನಿಟಿ” ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮವು ಬಹಳ ಸರಳ ರೀತಿಯಲ್ಲಿ ನೆರವೇರಿಸಿದ್ದು,ಕಳೆದ ನಾಲ್ಕು ವರ್ಷದಿಂದ “ಹ್ಯೂಮನಿಟಿ” ವಾರ್ಷಿಕೋತ್ಸವ ಹಾಗೂ ಹಬ್ಬ-ಹರಿದಿನ ಆಚರಣೆ ಮಾಡಿದವರಲ್ಲ. ಸರಳ ಹಾಗೂ ದುಂದುವೆಚ್ಚವಿಲ್ಲದ ಆಚರಣೆಯೇ ನಮ್ಮ ಸಂಸ್ಥೆ ಉದ್ದೇಶ. ಈ ನಿಯಮಗಳೇ ಹಲವರಿಗೆ ಪ್ರೇರಣೆಯಾಗಬಹುದು ಹಾಗೂ ಪ್ರೇರಣೆಯಾಗಲಿ ಎನ್ನುವುದು ಸಂಸ್ಥೆಯ ಸದಸ್ಯರ ಮನದಿಂಗಿತ. ನಮ್ಮ ಈ ಸಂಸ್ಥೆ ಒಂದು ಹಳ್ಳಿಯಲ್ಲಿದ್ದು ,ಅಲ್ಪ ಸಮಯದಲ್ಲಿ ನಮ್ಮ ಸಂಸ್ಥೆ ನೀಡಿದ ಗರಿಷ್ಠ ಸೇವೆಯನ್ನು ಮಾಡಿದೆ ಎಂದು ರೋಷನ್ ರವರು ಪ್ರೀತಿಯಿಂದಲೇ ಹೇಳಿಕೊಂಡರು.
ಭ್ರಷ್ಟರ ಕಣ್ಣು ತೆರೆಯಲಿ, ಮೌಢ್ಯದಿಂದ ತುಂಬಿದ ಆಚರಣೆ ಹಾಗೂ ಸ್ವಾರ್ಥಕ್ಕಾಗಿ ತೋರುವ ದೇಶಪ್ರೇಮ ಸಮಾಜಕ್ಕೆ ಒಳಿತಲ್ಲ. ನಮ್ಮ ಈ ಸಮಾಜಸೇವೆಯಿಂದ ಕಿಂಚಿತ್ತಾದರೂ ಜ್ಞಾನೋದಯವಾಗಲಿ ಎಂಬುವುದೇ ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.
ನಾನು ಮತ್ತು ಸಮಾಜ ಸೇವೆ ಈ ವಿಷಯದಲ್ಲಿ ಮಾತನಾಡುತ್ತಾ ಸಮಾಜ ಬದಲಾಗಬೇಕಾದರೆ ಮೊದಲು ನಾನು ಬದಲಾಗಬೇಕು. ನಾನು ಬದಲಾದರೆ ಸಮಾಜ ತನ್ನಿಂದತಾನೆ ಬದಲಾಗುತ್ತದೆ. ದೇಶ ಉದ್ಧಾರವಾಗಬೇಕಾದರೆ ಒಬ್ಬ ವ್ಯಕ್ತಿಯಿಂದ ಅಸಾಧ್ಯ. ಪ್ರತಿಯೊಬ್ಬನ ಕೊಡುಗೆ ಸೇರಿದಾಗ ಮಾತ್ರ ದೇಶಕ್ಕೆ ಉಜ್ವಲ ಭವಿಷ್ಯ ಸಾಧ್ಯ. ಎಲ್ಲಾ ಮತ-ಧರ್ಮಗಳು ನಮಗೆ ಮಾನವೀಯತೆ ಪಾಠ ಕಲಿಸುತ್ತದೆ. ಧರ್ಮದ ಸಾರ ತಿಳಿಯದ ಅವಿವೇಕಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಾರೆ.
ಇಲ್ಲಿ ನಾವು ಧರ್ಮಪ್ರಚಾರಕರಲ್ಲ ಬದಲಾಗಿ ಮಾನವೀಯತೆ ಹಾಗೂ ಸಮಾಜಸೇವೆಯ ಪ್ರತಿಪಾದಕರು.
ನನ್ನಲ್ಲಿ ಇವತ್ತು ಏನಾದರೂ ಒಳ್ಳೆಯ ಗುಣಗಳು ಇದ್ದರೆ ಅದು ನಾನು ಈ ಸಮಾಜದಿಂದಲೇ ಕಲಿತಿರುವುದಾಗಿದೆ. ನನ್ನಲ್ಲಿ ಏನಾದರೂ ಕೆಟ್ಟ ಗುಣಗಳಿದ್ದರೂ ಅದು ಕೂಡ ನಾನು ಕಲಿತಿದ್ದು ಸಮಾಜದಿಂದಲೇ! ದಿನದಿಂದ ದಿನಕ್ಕೆ ಈ ಸಮಾಜದಿಂದ ಒಳ್ಳೆತನವನ್ನು ಕಲಿತು ನನ್ನಲ್ಲಿರುವ ಕೆಟ್ಟತನವನ್ನು ತೊರೆದು, ಸಾಧ್ಯವಾದಷ್ಟು ಪರರ ಮತ್ತು ಪರಿಸರದ ಜವಾಬ್ದಾರಿ ಹೊತ್ತು, ಅನ್ಯಾಯ ಹಾಗೂ ಅನೀತಿಯ ವಿರುದ್ಧ ಧ್ವನಿಯೆತ್ತುವ ಉತ್ತಮ ಸಮಾಜ ಸೇವೆ ಇನ್ನೊಂದಿಲ್ಲ . ಈ ಸಂಸ್ಥೆಯ ದೃಷ್ಟಿಕೋನ ಮೌಲ್ಯಾಧಾರಿತ
ಆಚರಣೆಗಳು, ಮನುಜನನ್ನು ಮಾನಸಿಕವಾಗಿ ಸಾಮಾಜಿಕವಾಗಿ ಉನ್ನತಿಗೆ ಕೊಂಡೊಯ್ಯುದಾಗಿದೆ.
ಸೇವಾ ಮನೋಭಾವದ ಮುಖವಾಡ ಹೊತ್ತ ಕೆಲವು ರಾಜಕೀಯ ಮುಖಂಡರ ಸ್ವಾರ್ಥದಿಂದ ದೇಶದ ಅಭಿವೃದ್ಧಿಯ ಪತನವಾಗುತ್ತಿದೆ. ಬಡವರ ಏಳಿಗೆಗಾಗಿ ಉಪಯೋಗಿಸ ಬೇಕಾದ ಬಂಡವಾಳ ಹಲವು ಬಾರಿ ಅನಗತ್ಯವಾಗಿ ಬೇರೆಲ್ಲೋ ಸೊರಿಹೋಗುತ್ತದೆ. ಇಂಥ ಬಂಡವಾಳಗಳು ನೈಜ ಫಲಾನುಭವಿಗಳಿಗೆ ಸೇರುವಂತಾಗಬೇಕೆನ್ನುವುದೇ ನಮ್ಮ ಆಶಯ
.
ನಿಸ್ವಾರ್ಥ ಮನಸ್ಸಿನ “ದಾನ ಮಾಣಿಕ್ಯ ರು ” ಎಲ್ಲಾ ಜಾತಿಯ ಧರ್ಮಗಳಲ್ಲೂ ಇದ್ದಾರೆ. ಆದರೆ ಕೆಲವೊಮ್ಮೆ ದಾನಿಗಳಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ. ಮಾಹಿತಿ ಕೊರತೆಯಿಂದಾಗಿ ಕೆಲವು ಬಾರಿ ಹೆಚ್ಚಿನ ಸಹಾಯ ಬಡವರನ್ನು ತಲುಪದೇ ಅವರನ್ನು ವಂಚಿತರನ್ನಾಗಿಸುತ್ತದೆ.
ಧಾರ್ಮಿಕ ಚೌಕಟ್ಟು ಹಾಗೂ ರಾಜಕೀಯ ಪ್ರಭಾವ ವಿಲ್ಲದೆ, ಅಸಹಾಯಕರ ಭಾವನೆಗಳಿಗೆ ಸ್ಪಂದಿಸಿ ಅವರನ್ನು ಕೈಹಿಡಿದು ಮೇಲೆತ್ತಲು ಪ್ರಯತ್ನಿಸಿರುವ ಈ ಸಂಸ್ಥೆಯು ಬೆಳೆಯುತ್ತಲಿರುವುದು ನಾವೆಲ್ಲರೂ ಮೆಚ್ಚಿಕೊಳ್ಳಬೇಕು.
ಈ ಸಂಸ್ಥೆ ಕಡುಬಡತನದ ಫಲಾನುಭವಿಗಳನ್ನು ಗುರುತಿಸಿ, ಬಡತನವನ್ನು ಮೆಟ್ಟಿನಿಂತು ಸುಂದರ ಸಮಾಜ ಕಟ್ಟುವ ಕನಸು ಕಾಣುತ್ತಿದೆ. ಹಾಗೂ ನಿರ್ಭಯದಿಂದ ಮುನ್ನುಗ್ಗುತ್ತಿದೆ ಧೈರ್ಯವಾಗಿ ಹೇಳಬಹುದು.
ಸಮಾಜಸೇವೆ ಮತ್ತು ಮಿಡಿಯುವ ಹೃದಯ ಈ ಸಂಸ್ಥೆಯ ಬೆನ್ನೆಲುಬು. ಹಿಂದೂ-ಮುಸ್ಲಿಂ-ಕ್ರೈಸ್ತ ಹೀಗೆ ಎಲ್ಲಾ ಧರ್ಮದವರು “ಹ್ಯೂಮನಿಟಿ” ಸಂಸ್ಥೆಗೆ ದೇಣಿಗೆ ನೀಡಿ ಹೃದಯವಂತಿಕೆಯನ್ನು ಮೆರೆದಿದ್ದಾರೆ. ಇದನ್ನು ನಾವು ಸ್ಮರಿಸಿಕೊಳ್ಳುವುದು ಮಾನವ ಧರ್ಮ ಎಂದು ಗೌರವಪೂರ್ವಕವಾಗಿ ಹೇಳಿಕೊಂಡರು.
ಅದೆಷ್ಟೋ ದಾನಿಗಳು ಹೆಸರು, ಪ್ರಚಾರ ಬಯಸದೆ ಈ ಸಂಸ್ಥೆಗೆ ದೇಣಿಗೆ ನೀಡುತ್ತಿದ್ದಾರೆ. ಕೆಲವೊಮ್ಮೆ ನಮ್ಮ ಒತ್ತಾಯದ ಮೇರೆಗೆ ಕೆಲವು ದಾನಿಗಳು ತಮ್ಮ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ಸಮ್ಮತಿಸುತ್ತಾರೆ. ಇವರ ಸೇವಾ ಮನೋಧರ್ಮವನ್ನು ನೋಡಿ ಬೇರೆಯವರು ಪ್ರೇರಿತರಾಗಲಿ ಎಂಬುದೇ ಇದರ ಉದ್ದೇಶ. ಈ “ಹ್ಯೂಮನಿಟಿ “ಸಂಸ್ಥೆ ಜನ ಸಾಮಾನ್ಯರ ಆಸ್ತಿಯಾಗಿದೆ.ಇದರ ಶ್ರೇಯಸ್ಸು ಕೇವಲ ಒಬ್ಬರಿಗೆ ಸಲ್ಲದೆ ನಮ್ಮ ಜೊತೆ ಇರುವ ತಮಗೆಲ್ಲರಿಗೂ ಸಲ್ಲುತ್ತದೆ.
ಬರೇ ಬೈಬಲ್, ಕುರಾನ್, ವೇದವನ್ನು ಕಲಿತು ಅರಿತರೆ ನಾವು ಎಲ್ಲವನ್ನೂ ಸಾಧಿಸಲಾಗುವುದಿಲ್ಲ. ಜನರ ಜೊತೆ ವೇದನೆಗಳನ್ನು ಅರಿತರೆ ಮಾತ್ರ ಮಾನವೀಯತೆಗೆ ಬೆಲೆ ಇರುತ್ತದೆ .ಎಂದಿಗೂ ನಮ್ಮ ಹೆಜ್ಜೆ ಗುರಿತಪ್ಪಿ ಹೋಗಬಾರದು. ಪರರ ಮತ್ತು ಪರಿಸರದ ಮೇಲಿನ ಪ್ರೀತಿ ನಮ್ಮಲ್ಲಿ ಅಡಕವಾಗಿರಬೇಕು. ಎಲ್ಲಾ ನುಡಿಮುತ್ತುಗಳು “ಹ್ಯೂಮನಿಟಿ” ಸಂಸ್ಥೆಯ ವೇದವಾಕ್ಯ ಮತ್ತು ನಡೆಯುವ ದಾರಿ ಕೂಡ ಆಗಿರುತ್ತದೆ.
ಅನುಭವ ಹಂಚಿಕೊಳ್ಳುತ್ತಾ…. ಸಾಮಾಜಿಕ ಜಾಲತಾಣಗಳ ಫೇಸ್ಬುಕ್ ವಾಟ್ಸ್ಅಪ್ ಗಳಲ್ಲಿ ಅಸಹಾಯಕರ ಪರಿಸ್ಥಿತಿ ಮತ್ತು ಅವರ ಬ್ಯಾಂಕ್ ಖಾತೆಗೆ ವಿವರ ಸಹಿತ ದಿನಪ್ರತಿ ಕಾಣಸಿಗುತ್ತದೆ. ಆದರೆ ದಾನಿಗಳಿಂದ ಸಿಕ್ಕಿದ ಮೊತ್ತ ಎಷ್ಟು ಎಂಬ ಮಾಹಿತಿ ಜನರಿಗೆ ಹೆಚ್ಚಾಗಿ ಸಿಗುವುದಿಲ್ಲ. “ಹ್ಯೂಮನಿಟಿ” ಸಂಸ್ಥೆಗೆ ಬರುವ ಮನವಿಗಳ ಸತ್ಯಾಂಶಗಳನ್ನು ಪರಿಶೀಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಾವೆಲ್ಲ ಎಷ್ಟೇ ಜಾಗರೂಕತೆ ವಹಿಸಿದರೂ ಸಾಲದು. ಕೆಲವು ಫಲಾನುಭವಿಗಳು ದುಡಿಯಲು ಪ್ರಯತ್ನಿಸದೆ , ಪದೇಪದೇ ಸಹಕಾರ ಕೇಳುತ್ತಿರುತ್ತಾರೆ .ಅದೇ ಅನೇಕ ರೀತಿಯಲ್ಲಿ ನಾವು ಮೋಸ ಹೋದ ಕೆಲವು ಘಟನೆಗಳು ಕೂಡ ನಡೆದಿದೆ.
“ಹ್ಯೂಮನಿಟಿ” ಸಂಸ್ಥೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ತಾಳ್ಮೆಯಿಂದ ಎಲ್ಲಾ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ಫಲಾನುಭವಿಗಳಿಗೆ ಸಹಾಯಹಸ್ತ ಚಾಚಲು ಶ್ರಮಿಸುತ್ತಿದೆ. ಸಂಸ್ಥೆ ನಡೆಸಲು ನೂರಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಆದರೆ ಸಮಸ್ಯೆಗಳನ್ನೆಲ್ಲ ಮೆಟ್ಟಿನಿಂತು ಸಾವಿರಾರು ಮಂದಿಗೆ ಸಹಾಯ ಹಸ್ತ ಚಾಚಿದ ಸಂತೃಪ್ತಿ ನಮಗಿದೆ. ಈ ಸಂಸ್ಥೆಯಿಂದ ಸಹಾಯ ಪಡೆದ ಎಲ್ಲಾ ಫಲಾನುಭವಿಗಳು ನಮ್ಮ ಸಂಸ್ಥೆ ಮತ್ತು ದಾನಿಗಳ ನೆನಪಿಟ್ಟುಕೊಳ್ಳುತ್ತಾರೋ ಇಲ್ಲವೊ ತಿಳಿದಿಲ್ಲ. ಆದರೆ ಆ ಭಗವಂತ ಎಲ್ಲವನ್ನು ತಿಳಿಯುತ್ತಿದ್ದಾನೆ ಎಂಬ ಭಾವನೆ ಅವರ ಮನದಲ್ಲಿ ಇದ್ದರೆ ಸಾಕು. ದೇವರು ಎಲ್ಲರಿಗೂ ತಕ್ಕ ಫಲ ನೀಡುತ್ತಾನೆ.
ರಾಜಕೀಯ ಲಾಭಕ್ಕೋಸ್ಕರ ಅಥವಾ ಜಾತಿ, ಧರ್ಮ ನೋಡಿ ಸಮಾಜ ಸೇವೆ ಮಾಡಿದರೆ ಅದು ಸಾರ್ಥಕ ಸೇವೆಯಾಗುದಿಲ್ಲ. ಎಲ್ಲಾ ಅಧಿಕಾರಿಗಳು ನಿಸ್ವಾರ್ಥತೆಯಿಂದ ಕರ್ತವ್ಯ ನಿರ್ವಹಿಸಿದರೆ ಸಮಾಜದ ಏಳಿಗೆ ಅಸಾಧ್ಯವಲ್ಲ
ನಮ್ಮ ದೇಶ ವೇಗವಾಗಿ ಬದಲಾಗುತ್ತಿದೆ. ಎಲ್ಲಾ ಸಮಸ್ಯೆಗೂ ಪರಿಹಾರವಿದೆ. ಎಲ್ಲರೂ ಉತ್ತಮ ರೀತಿಯ ಬದುಕಲು ಸಾಧ್ಯವಿದೆ .ಆದರೆ ಮೊದಲು ನಾವು ನಮ್ಮ ವಿಚಾರಗಳನ್ನು ಬದಲಿಸಬೇಕಾಗಿದೆ. ಬನ್ನಿ, ಮೊದಲು ನಮ್ಮ ಮನಸ್ಥಿತಿ ಬದಲಾಯಿಸುವ ನಾವೆಲ್ಲರೂ ಸೇರಿ ಸಮಾಜ ಬದಲಾಯಿಸೋಣ. ದೇಶಪ್ರೇಮ ಮತ್ತು ಪರಮಾತ್ಮನ ಸೇವೆ ಏನೆಂಬುದನ್ನು ಬರೇ ಅಡಿ ತೋರಿಸದೆ ಮಾಡಿ ತೋರಿಸೋಣ.
ಕೊನೆಯ ಮಾತಿನಲ್ಲಿ ಹೀಗೆ ಹೇಳುತ್ತಾರೆ .ಮಕ್ಕಳಿಗೆ ಮತ್ತು ಯುವ ಜನತೆಗೆ ಮೌಲ್ಯಭರಿತ ಶಿಕ್ಷಣದ ಅಗತ್ಯತೆ ಇದೆ. ಶಿಕ್ಷಣದಿಂದ ಜ್ಞಾನ ಪಡೆಯುವುದರ ಜೊತೆಗೆ ನಮ್ಮೊಳಗಿರುವ ಎಲ್ಲಾ ರೀತಿಯ ಅಂಧಕಾರ ತೊಲಗಲಿ. ಶಿಕ್ಷಣದ ಗುಣಮಟ್ಟ ಹೆಚ್ಚಾಗಲಿ,
ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಮಾಡುವ ಹಾನಿ ನಿಲ್ಲಲಿ.ಅವೈಜ್ಞಾನಿಕ ಕಾಮಗಾರಿ ಹಾಗೂ ದೂರದೃಷ್ಟಿ ಇಲ್ಲದ ಕೆಲಸ ಉತ್ತಮ ಫಲಿತಾಂಶ ನೀಡಲಾರದು. ಮುಂದೊಂದು ದಿನ ಇದು ಮನುಕುಲದ ಕೆಡುಕಿಗೆ ಕಾರಣವಾದೀತು.
ಹೊಟ್ಟೆಗೆ ಅನ್ನ ಬೇಕು. ರೋಗಿಗಳಿಗೆ ಚಿಕಿತ್ಸೆ ಬೇಕು. ಸಮಸ್ಯೆಗೆ ಪರಿಹಾರ ಬೇಕು. ಕಾಯಿಲೆಗಳು ಬಾರದಂತೆ ಮತ್ತು ಹರಡದಂತೆ ಮುನ್ನೆಚ್ಚರಿಕೆ ವಹಿಸ ಬೇಕು. ಬಡತನ -ನಿರುದ್ಯೋಗ ಇಂತಹ ಹಲವು ಸಮಸ್ಯೆಗಳು ಸಮಾಜದಲ್ಲಿರುವಾಗ ಹೆಚ್ಚುವರಿ ಸಮಸ್ಯೆಗಳು ಜನಸಾಮಾನ್ಯರ ನೆಮ್ಮದಿ ಗೆಡಿಸಿದೆ.ಅದಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ.
“ಹ್ಯೂಮನಿಟಿ” ಸಂಸ್ಥೆ ಪ್ರಭಾವ ಸ್ವಲ್ಪ ಪ್ರಮಾಣದಲ್ಲಾದರೂ ಸಮಾಜದ ಮೇಲೆ ಬಿದ್ದಿದೆ. ಹಲವು ಸಮಾಜಸೇವಕರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಪ್ರೇರಣೆ ನೀಡಿದೆ. ಹಲವರು ಈ ಸಂಸ್ಥೆಯ ಬಗ್ಗೆ ಮುಕ್ತವಾಗಿ ಹೊಗಳಿರುವ ಸಾಕ್ಷಿ ನಮ್ಮ ಮುಂದಿದೆ. ಇದು ನಮಗೆ ಸಂತೋಷದ ವಿಷಯವಾಗಿರುತ್ತದೆ .ರಾಜಕೀಯ ಮರೆತು ಎಲ್ಲ ಜಾತಿ ಧರ್ಮದವರಿಗೆ ಒಳಿತು ಬಯಸಿ “ಹ್ಯೂಮನಿಟಿ “ಸಂಸ್ಥೆ ನಿರಂತರವಾಗಿ ಸೇವೆ ಮಾಡುತ್ತಾ ಬಂದಿದೆ.
ಇಷ್ಟು ದೊಡ್ಡ ಮಟ್ಟದ ದಾನ ಸರ್ಕಾರದಿಂದ ಅಥವಾ ವಿದೇಶಿ ದಾನಿಗಳಿಂದ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಾವು ದಾನ ಕೇಳಿ ಪಡೆದಿಲ್ಲ. ತಮ್ಮ ಸಂಸ್ಥೆಯ ದೂರದೃಷ್ಟಿ ,ವಿಚಾರಗಳು ಮತ್ತು ಕಾರ್ಯ ವೈಖರಿಗಳನ್ನು ಮೆಚ್ಚಿ ನಿಸ್ವಾರ್ಥ ದಾನಿಗಳು ನಮ್ಮನ್ನು ಸಂಪರ್ಕಿಸಿ ನೀಡಿದ ದಾನ ಇದಾಗಿದೆ. ಪರರ ಸೇವೆಯಲ್ಲಿ ಪರಮಾತ್ಮನನ್ನು ಕಂಡ ಎಲ್ಲಾ ದಾನಿಗಳಿಗೆ ಧನ್ಯವಾದಗಳು. ನಮ್ಮ ಈ ಜನಸೇವೆಗೆ ನಿಮ್ಮ ಪ್ರೋತ್ಸಾಹ ಸದಾ ಇರಲಿ.ನಮ್ಮ ಕನಸು ನನಸಾಗುತ್ತದೆಯೋ ತಿಳಿದಿಲ್ಲ. ಆದರೆ ನಿಸ್ವಾರ್ಥ ಕನಸು ಕಂಡು ಆಶಾಭಾವದ ಮೊದಲ ಹೆಜ್ಜೆ ಇಟ್ಟಿದ್ದು ಯಶಸ್ಸು ಎಂದು ನಂಬಿದವರು ನಾವು.
ಇಂಥ ಒಂದು ಒಳ್ಳೆ ಸಮಾಜ ಸೇವಾ ಸಂಸ್ಥೆ ಮುಂದೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ಕಷ್ಟಗಳನ್ನು ಆಲಿಸಿ ಇನ್ನು ಉತ್ತಮ ಮಟ್ಟದ ಜನಸೇವೆ ಮಾಡುವಂತಾಗಲಿ ಎಂದು ಆಶಿಸುತ್ತಾ “ಹ್ಯೂಮನಿಟಿ”ಸಂಸ್ಥೆಯನ್ನು ಕುಂದವಾಹಿನಿ ಹೃದಯಪೂರ್ವಕ ಅಭಿನಂದಿಸುತ್ತಿದೆ.
ಈಶ್ವರ್ ಸಿ ನಾವುಂದ
ಚಿಂತಕ -ಬರಹಗಾರರು
9833259692