ಉಡುಪಿ (ಡಿ,26): ನಮ್ಮ ಖಾಸಗಿ ಮಾಹಿತಿಗಳು ಕ್ಲೌಡ್ ಸರ್ವರ್ ಗಳಲ್ಲಿ ಶೇಖರವಾಗುವುದರಿಂದ ಇವು ಸುರಕ್ಷಿತವಲ್ಲ. ಯಾವುದೇ ಮೊಬೈಲ್ ತಂತ್ರಾಂಶಗಳನ್ನು ಉಪಯೋಗಿಸುವಾಗ ಮಾಹಿತಿಗಳನ್ನು ಅಪರಿಚರೊಡನೆ ಹಂಚಿಕೊಳ್ಳಬಾರದು . ನಮಗೆ ಬರುವ ಇಮೇಲ್ ಮತ್ತು ಎಸ್ ಎಂ ಎಸ್ ಗಳ ಬಗೆಗೆ ಜಾಗರೂಕರಾಗಿರಬೇಕು . ಯಾವುದೇ ಬ್ಯಾಂಕ್ ನವರು ಕರೆ ಮಾಡಿ ಒಟಿಪಿ, ಪಾಸ್ವರ್ಡ್ ಅಥವಾ ಸಿವಿವಿ ಗಳನ್ನು ಕೇಳುವುದಿಲ್ಲ. ಬಳಕೆದಾರರು ವಿವೇಚನೆಯನ್ನು ಬಳಸಿ ವ್ಯವಹರಿಸಿದರೆ ಹಾನಿಯನ್ನು ತಪ್ಪಿಸಬಹುದು . ಫೇಸ್ ಬುಕ್ ನ ನಕಲಿ ಅಕೌಂಟ್ ಗಳಿಂದ ಹಾಗೂ ಇಮೇಲ್ ಗಳಿಂದ ಬರುವ ಲಿಂಕ್ ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ” ಎಂದು ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಷನ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಾಜಶ್ರೀ ನಂಬಿಯಾರ್ ತಿಳಿಸಿದರು.

ಅವರು ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಆಯೋಜಿಸಿದ್ದ “ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮ” ದಲ್ಲಿ ಸಂಪನ್ಮೂಲ ತಜ್ಞರಾಗಿ ಮಾತನಾಡಿದರು . ಇಂದಿನ ಆಧುನಿಕ ಯುಗದಲ್ಲಿ ಜಾಗರೂಕರಾಗಿ ಬಳಕೆದಾರರು ವ್ಯವಹರಿಸಬೇಕು . ಖಾಸಗಿ ಮಾಹಿತಿಗಳು , ಒಟಿಪಿ , ಪಾಸ್ ವರ್ಡ್ ಗಳನ್ನೂ ಎಂದೂ ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಶಾಲಾ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ಗುರುದತ್ತ ಸೋಮಯಾಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು . ಉದ್ಯಮಿ ದೀಪಕ್ ಕಾಮತ್, ಹಿತೈಷಿಗಳಾದ ಚಂದ್ರಿಕಾ ಪೂಜಾರಿ, ಅಕ್ಷತಾ , ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು. ಶ್ರುತಿ ಆಚಾರ್ಯ ಸ್ವಾಗತಿಸಿ ಸಹಶಿಕ್ಷಕಿ ದೀಪಾ ಮೋಹನ್ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತಾ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ರಮ್ಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.












