ಅವನೊಂದು ಮಹಾನ್ ಚೇತನ ಹಸಿ ಮಣ್ಣಿಗೆ ನೆತ್ತರ ಸುರಿಸಿಬದುಕನ್ನೇ ಉಳುವವನು….. ಹಸಿದ ಹೊಟ್ಟೆಗೆ ಅನ್ನ ನೀಡಲು ತನ್ನನ್ನೇ ಪಣವಾಗಿಟ್ಟು ನಗುವನು ಕಣ್ಣಂಚಿನ ನೋವಿನ ಕತ್ತು ಹಿಸುಕುತ್ತಾ…
ಕಾಣದ ಕನಸಿಗೆ ದಾರಿಯಾಗುವ ಆಸೆ ಬದುಕು ಬರಡಾಗಿರಲು ಭೂಮಿಗೆಲ್ಲಿ ಫಸಲು? ಬಾರದ ಬೆಳೆಗಾಗಿ ದಿನವಿಡೀ ಕಾಯುವನು ಬಹುಶಃ ನಾಳೆಯೂ ಕೂಡಾ!!
ಹಸಿಮಣ್ಣ ಎಡೆಯಲ್ಲಿ ಗುಂಡಿತೋಡಿ ಉಸಿರ ಬಚ್ಚಿಡಬಹುದಿತ್ತು ನಿರಾಶಾವಾದಿಯಾಗಿದ್ದಲ್ಲಿ ಆದರೆ ಅವನಲ್ಲ….. ಹಸಿದ ಕಂದನ ಕಣ್ಣು ನೆನೆದು ಮತ್ತೆ ಪುಟಿದೇಳುವುದು ಹುಮ್ಮಸ್ಸು ಮೊಳಕೆಯೊಡೆಯುವುದು ಆಸೆಯೇಹೊರತು ಬೆಳೆ ಅಲ್ಲ….. ನೆಲದಂತೆಯೇ ಈಗ ಬದುಕೂ ಬೆತ್ತಲೆ ಶ್ರಮ ಮೈಮುಚ್ಚುವುದಿಲ್ಲ;ಆಸೆ ಹೊಟ್ಟೆತುಂಬುವುದಿಲ್ಲ.
ಅಂದು ಭಾಷಣದ ಮಳೆ ಸುರಿಸಿ ಐದು ವರ್ಷಕ್ಕೊಮ್ಮೆ ಊರದಾರಿ ಹುಡುಕುವರೆಲ್ಲಾ “ಅಪರಾಧಿಗಳು”ಇವನ ಕಂಗಳಲ್ಲೀಗ..? ಅವು ಪಂಚವಾರ್ಷಿಕ ಕೈಗಳೇ ಹೊರತು ಅಭಯ ಹಸ್ತಗಳಲ್ಲ…..!! ಯಾವ ಮರದಲ್ಲಿ ಯಾವ ಕ್ಷಣದಲ್ಲಿ ಬದುಕಿನ ಬಂಡವಾಳ ಮುಗಿಯುವುದೋ ಯೋಚಿಸಲು ಯಾರಿಗೂ ಸಮಯವಿಲ್ಲ
ತನ್ನವರ ನೆನೆದು ಅಳುತ್ತಾನೆ ಒಮ್ಮೊಮ್ಮೆಜತೆಗೆ ತಿಂದು ತೇಗುವಷ್ಟು ಸಾಲ ಬೇರೆ!! ಪಾಪ ಹೆದರುತ್ತದೆ ಬಡಪಾಯಿ ಹ್ರದಯ ಕೊನೆಯಿಲ್ಲದ ಕೊನೆಯಲ್ಲಿ ಉಸಿರಿಗೆ ಕೊನೆಹಾಡುತ್ತಾನೆ….! ಆದರೂ ಅವನೊಂದು ಮಹಾನ್ ಚೇತನ….ಯಾರವನು?? ತಿಂದು ಚೆಲ್ಲುವ ಅನ್ನದಲ್ಲಿ ಮತ್ತೆ ಹುಟ್ಟುವನು ….
ಕವನ: ಗಣೇಶ ಭಟ್