ಒಂದು ಕುರ್ಚಿಒಂದು ಸಿಸ್ಟಮ್…. .ಆಗೊಮ್ಮೆ ಇಗೊಮ್ಮೆ ಹೈ ಸ್ಪೀಡ್ ನಲ್ಲಿ ಕೆಲಸ ಮಾಡೋ ಇಂಟರ್ನೆಟ್ಟು…. ಬೆನ್ನು ನೋವಾಗದಿರಲಿ ಎಂದು ಬೆನ್ನು ಹಿಂದೊಂದು ತಲೆದಿಂಬು…. ಯಾಕಂದ್ರೆ ನನ್ನದು ವರ್ಕ್ ಫ್ರಮ್ ಹೋಮ್ ಸ್ವಾಮಿ..!
ಹಿಂದೆ ಆಫೀಸಿನಲ್ಲಿ ಕೇಳಿಸುತ್ತಿದ್ದ ಮಾತಿನ ಸದ್ದಿಲ್ಲ….. ಮೈ ಮರೆತು ನಕ್ಕ ನಗುವಿನ ಅಲೆಯಿಲ್ಲ…… ಸೂರ್ಯೋದಯ ಕಾಣೋಲ್ಲ ,ಸೂರ್ಯಾಸ್ತಮವೂ ಕಂಡಿಲ್ಲ….. ಸಮಯದ ಅರಿವಿಲ್ಲ, ಹಸಿವಿನ ಪರಿವಿಲ್ಲ ………ಯಾಕೆ ಅಂದ್ರೆ ನಮ್ದು ವರ್ಕ್ ಫ್ರಮ್ ಹೋಮ್ ಸ್ವಾಮಿ..
ಸಂಬಂಧಗಳು ಹಳಸಿವೆ,ಭಾವನೆಗಳ ತಿಳಿಯಲು ಸಮಯವಿಲ್ಲ………..ಮನೆಯೊಳಿದ್ದರೂ ಮನೆಯ ಆಗುಹೋಗುಗಳ ಅರಿವಿಲ್ಲ, ಆರೋಗ್ಯದೆಡೆ ಗಮನವಿಲ್ಲ………… ಬಿಸಿ ಬಿಸಿ ಊಟ ತಿಂಡಿಮಾಡುವ ಭಾಗ್ಯವಿಲ್ಲ………. ಯಾಕೆಂದ್ರೆ ನಮ್ದು ವರ್ಕ್ ಫ್ರಮ್ ಹೋಂ ಸ್ವಾಮಿ.
ಕುಳಿತುಕೊಳ್ಳಲೊಂದು ಕುರ್ಚಿಎದುರಿಗೊಂದು ಟೇಬಲ್…. ಮೇಲೊಂದು ಲ್ಯಾಪ್ಟಾಪ್ ಪಕ್ಕದಲ್ಲೊಂದು ಮೊಬೈಲು, ಒಂದಷ್ಟು ಸ್ಟೇಷನರಿ ಐಟೆಮ್ಮು ಇಷ್ಟೇ ನಮ್ಮ ಪ್ರಪಂಚ, ನಿಟ್ಟುಸಿರು ಬಿಡಲೂ ಸಮಯವಿಲ್ಲ…………. ಯಾಕಂದ್ರೆ ನಮ್ದು ವರ್ಕ್ ಫ್ರಮ್ ಹೋಮು ಸ್ವಾಮಿ..
ಕುಳಿತಲ್ಲಿಯೇ ಕುಳಿತುಕಾಲುಗಳೆರಡು ಬಾತು ಮಾತುಗಳೆಲ್ಲವು ಮರೆತು ಬದುಕಾಗಿದೆ……….. ಬರಡು ಮನವಾಗಿದೆ ಕಣ್ಣಾಗಿವೆ ಕುರುಡು ……ಯಾಕಂದ್ರೆ ನಮ್ಮದು ವರ್ಕ್ ಫ್ರಮ್ ಹೋಮು ಸ್ವಾಮಿ..
ಅಮ್ಮನೂ ಕಾಯುತ್ತಿದ್ದಾರೆ ನಾನು ಯಾವಾಗ ಕೋಣೆಯಿಂದ ಹೊರಬರುತ್ತೆನೆಂದು ……….. ಹೆಂಡತಿನೂ ಅವರಿಗಿಂತ ಮೊದಲೇ ಪಟ್ಟಿ ಹಿಡಿದು ರೆಡಿ ಆಗಿ ಕುಳಿತಿದ್ದಾಳೆ. ನನಗೆ ಮಾತ್ರ ಬಿಡುವಿಲ್ಲ ! ಡೇನೋ, ನೈಟೊ ಕೆಲಸ ಎಷ್ಟೇ ಇದ್ದರೂ ಮಾಡಿ ಮುಗಿಸಲೇಬೇಕು…….ಯಾಕಂದ್ರೆ ನಮ್ಮದು ವರ್ಕ್ ಫ್ರಮ್ ಹೋಮು ಸ್ವಾಮಿ..
ಅಡುಗೆ ಕೋಣೆಯಲ್ಲಿ ಮಾಡಿಟ್ಟ ಅಡುಗೆ ಅಣಕಿಸುತಿದೆ…..ಗರಿಗೆದರುವ ಆಸೆಗಳು ಮುದುಡಿಕುಳಿತಿವೆ……ಅವನೊಂದು ಕೋಣೆ,ಇವಳೊಂದು ಕೋಣೆ,ಸಂಸಾರದ ವೀಣೆ ಮಿಡಿವುದು ಹೇಗೋ ನಾ ಕಾಣೆ………..ಎಲ್ಲವೂ ಇದ್ದರು ನಾವು ಒಂಟಿ..ಯಾಕಂದ್ರೆ ನಮ್ಮದು ವರ್ಕ್ ಫ್ರಮ್ ಹೋಮು ಸ್ವಾಮಿ..
ಬೂಸ್ಟ್ ಹಿಡಿದ ಬೂಟು…..ಇಸ್ತ್ರಿ ಕಾಣದ ಶರ್ಟು……ದೂಳು ಹಿಡಿದ ಫೈಲ್ಸುಎಲ್ಲಿ…. ಹೋಯಿತು ಆ ಶೋಕಿ, ಗತ್ತು ದವಲತ್ತು.. ಈಗ ನಮ್ಮನ್ನು ಮುಟ್ಟಿ ಮೂಸುವವರಿಲ್ಲ……….ಯಾಕಂದ್ರೆ ನಮ್ಮದು ವರ್ಕ್ ಫ್ರಮ್ ಹೋಮು ಸ್ವಾಮಿ..
ಅನುದಿನವು ಬರೀ ತಲೆ ಬಾಚಿಕೊಂಡು,ಬರೀ ಚಡ್ಡಿ ಟೀಶರ್ಟ್ ಹಾಕಿಕೊಂಡು ಕ್ಯಾಮೆರಾದ ಎದುರು ಮೂಕ ಪ್ರೇಕ್ಷಕರ ಜೀವನ ನಮ್ಮದಾಗಿದೆ…….ಯಾಕಂದ್ರೆ ನಮ್ಮದು ವರ್ಕ್ ಫ್ರಮ್ ಹೋಮು ಸ್ವಾಮಿ..
ಅಂದು ಮನೆಯಲ್ಲೇ ಕೆಲಸ ಮಾಡಿ ಅಂದಾಗ ಹಿಗ್ಗಿ ಹಿರಿದವರು ನಾವು, ಈಗ ಕುಳಿತಲ್ಲೇ ಕುಳಿತು ಹೊಟ್ಟೆ ಟೇಬಲ್ ಗೆ ತಾಗುತ್ತಿದೆ……. ಆಫೀಸ್ ತೆರೆಯುತ್ತದೆ ಹೋಗೋಣ ಎಂದು ಖುಷಿ ಪಡೋ ಹೊತ್ತಿಗೆ ಮತ್ತೆ ನಾಲ್ಕನೇ ಅಲೆ ಅಂತೆ…………ನಮ್ಮ ಅರ್ಧ ಪ್ರಾಯ ಮುಗಿಯುತ್ತ ಬಂತು,ಕೋಣೆಯೊಳಗಿನ ಜೇಡಗಳಾಗಿ ಬದುಕುತ್ತಿದ್ದೇವೆ..ಕನಸುಗಳು ಕಮರುತ್ತಿವೆ….ಬದುಕೇಕೋ ನೀರಸವೆಂದೆನಿಸುತ್ತದೆ…….ಯಾಕಂದ್ರೆ ನಮ್ಮದು ವರ್ಕ್ ಫ್ರಮ್ ಹೋಮು..
ನಮಗೆಂದು ಈ ವರ್ಕ್ ಹೋಮ್ ನಿಂದ ಮುಕ್ತಿ ಸಿಗುತ್ತೋ ಅಂತ ಕಾತರಿಸುವಂತಾಗಿದೆ..
ಬರಹ:ಹರೀಶ್ ಕಾಂಚನ್ ಉಪನ್ಯಾಸಕರು, ಕುಂದಾಪುರ