ಕುಂದಾಪುರ (ಜೂ,02): ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ(ರಿ.) ಬೆಂಗಳೂರು ಇವರ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮಂಗಳೂರು ಉತ್ತರ ವಲಯದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮುಲ್ಲಕಾಡು ಇಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕರಾದ ನಾಗರಾಜ ಖಾರ್ವಿಯವರು ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟದ ನಾಗರಿಕ ಸೇವಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಕೂಟದ ಈಜುಸ್ಪರ್ಧೆಯಲ್ಲಿ 100 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕ, 200 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕ, 50 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚಿನ ಪದಕ, 4×50 ಮೀ. ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟದ ನಾಗರಿಕ ಸೇವಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಅತ್ಯಂತ ವೇಗವಾಗಿ ಈಜಿದ ದಾಖಲೆ ಹೊಂದಿರುವ ಇವರು ಮೂರು ಪುಸ್ತಕಗಳನ್ನು, ಐನೂರು ವಚನಗಳನ್ನೂ ಬರೆದಿದ್ದಾರೆ. ಸಾಗರ ಸಾಮ್ರಾಟ ಪತ್ರಿಕೆಯಲ್ಲಿ ಕಡಲ ಕಥೆಗಳು ಎಂಬ ಅಂಕಣ, ಜಯಕಿರಣ ಪತ್ರಿಕೆಯಲ್ಲಿ ಪಡುಗಡಲಿನಿಂದ ಅಂಕಣವನ್ನು ಬರೆಯುತ್ತಿದ್ದಾರೆ. ಮೂಲತಃ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿಯಾದ ಇವರು ಸರಸ್ವತಿ ವಿದ್ಯಾಲಯ ಗಂಗೊಳ್ಳಿ, ಸ.ಹಿ.ಪ್ರಾ. ಶಾಲೆ ಕಂಚುಗೋಡು ಮತ್ತು ಸ.ಹಿ.ಪ್ರಾ.ಶಾಲೆ ಗುಜ್ಜಾಡಿಯ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.