ಬೇಲೂರು ರಘುನಂದನ್ ಸರ್ ರವರ ರಚನೆಯ, ಕೃಷ್ಣಮೂರ್ತಿ ಕವತ್ತಾರ್ ಸರ್ ರವರ ನಿರ್ದೇಶನದಲ್ಲಿ, ನನ್ನ ಪುಟ್ಟ ಗೆಳೆಯ ಗೋಕುಲ ಸಹೃದಯ ನಟಿಸಿರುವ ನಾಟಕ ಚಿಟ್ಟೆ.
ಈ ನಾಟಕ ರಚನೆಯಾಗಿ ಪ್ರದರ್ಶನ ಗೊಳ್ಳಲು ಪ್ರಾರಂಭವಾಗಿ ಸುಮಾರು ಒಂದೂವರೆ ವರ್ಷಗಳೇ ಆಗಿರಬಹುದು ಎಂದು ಭಾವಿಸುತ್ತೇನೆ.ಇಂದು ಕರಾವಳಿ ಭಾಗದಲ್ಲಿ ಈ ನಾಟಕದ ಪ್ರದರ್ಶನಗಳು ಆಯೋಜನೆಗೊಂಡಿದ್ದು ಅದೆಷ್ಟೋ ದಿನಗಳಿಂದ ಈ ನಾಟಕವನ್ನು ನೋಡಲು ಅವಕಾಶ ವಂಚಿತನಾಗಿದ್ದ ನಾನು ಇಂದು ಅರೆಹೊಳೆ ಪ್ರತಿಷ್ಠಾನ, ಅರೆಹೊಳೆಯಲ್ಲಿ ಈ ನಾಟಕದ ನಲವತ್ತೈದನೇ ಪ್ರದರ್ಶನ ಆಯೋಜಿಸಿದ್ದು ನಾನು ಕೂಡ ಬೆಂಗಳೂರಿನಲ್ಲಿ ಇರದೆ ನನ್ನ ಊರಿನಲ್ಲೆ ಇದ್ದುದರಿಂದ ನನ್ನ ಊರಿನಲ್ಲೇ ಈ ನಾಟಕವನ್ನು ನೋಡುವ ಅವಕಾಶವನ್ನು ಗಿಟ್ಟಿಸಿಕೊಂಡೆ.
ನಾಟಕ ನೋಡಿದ ಕ್ಷಣ ಮೊದಲು ಮನಸ್ಸಿನಲ್ಲಿ ಬಂದ ಭಾವನೆ ಏನೆಂದರೆ ನಾನು ಈ ನಾಟಕವನ್ನು ನೋಡಲು ಬಹಳ ತಡ ಮಾಡಿದೆ ಎಂಬುದು.ಗೆಳೆಯ ಗೋಕುಲ ಸಹೃದಯನ ಅದ್ಭುತ ಅಭಿನಯಕ್ಕೆ ಮನಸೋತೆ. ಇಷ್ಟೊಂದು ಚಿಕ್ಕ ವಯಸ್ಸಿಗೆ ಸಹ್ರದಯ ಎಷ್ಟು ಮನೋಜ್ಞವಾಗಿ ಅಭಿನಯ ಮಾಡಿದ್ದ ಎಂದರೆ ನೆರೆದ ಪ್ರೇಕ್ಷಕರ ಹೃದಯ ಗೆದ್ದಿದ್ದ . ಪ್ರೇಕ್ಷಕವರ್ಗದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇದ್ದಿದ್ದರಿಂದ ಮಕ್ಕಳನ್ನು ಕ್ಷಣಕಾಲ ಬಿಡದೆ ರಂಜಿಸಿದ್ದ ನಾಟಕ ನೋಡುತ್ತಿದ್ದ ನಾವು ಕುಳಿತಲ್ಲೇ ಅವನ ವಯಸ್ಸಿಗೆ ಇಳಿದು ನಾವು ಪಾತ್ರವಾಗಿ ನಾಟಕವನ್ನು ನೋಡುವಂತೆ ಮಾಡಿದ್ದ ಅವನ ಅಭಿನಯ ನೋಡುತ್ತಾ ಅವನ ಭಾವನೆಯನ್ನು ನಾನು ಹೀರಿ ನಾಟಕವನ್ನು ಅನುಭವಿಸುತ್ತ ಕೂತಿದ್ದೆ .
ಹಾಸ್ಯ ಸನ್ನಿವೇಶಗಳಲ್ಲಿ ಎಲ್ಲರನ್ನು ನಕ್ಕು ನಲಿಸುತ್ತಾ ,ಭಾವುಕ ಸನ್ನಿವೇಶಗಳಲ್ಲಿ ಎಲ್ಲರನ್ನು ಭಾವುಕ ಗೊಳಿಸುತ್ತಿದ್ದ ವಿಶೇಷ ಸಂಗತಿಯೇನಂದರೆ ಗೋಕುಲ ಈ ನಾಟಕ ಪ್ರಾರಂಭ ಮಾಡಿದ್ದು ಈತ ಐದನೇ ತರಗತಿ ಇರುವಾಗ . ಈಗ ಈತ ಏಳನೇ ತರಗತಿಯಲ್ಲಿದ್ದಾನೆ .ಈತ ಭಾವುಕ ಸನ್ನಿವೇಶಗಳನ್ನು ರಂಗದ ಮೇಲೆ ಅನುಭವಿಸಿ ನಟಿಸುವುದನ್ನು ಕಂಡ ನನಗೆ ಅನಿಸಿದ್ದೇನೆಂದರೆ ನಾವು ಈ ವಯಸ್ಸಿನಲ್ಲಿದ್ದಾಗ ಅಂತಹ ಭಾವನೆಗಳ ಪ್ರಜ್ಞೆಯೇ ನಮ್ಮಲ್ಲಿರಲಿಲ್ಲ ,ತಿಳಿಯದೇ ಇರುವ ಭಾವನೆಯನ್ನು ಅನುಭವಿಸಿ ಅಭಿನಯಿಸುತ್ತಿದ್ದುದ್ದನ್ನು ಕಂಡು ನನಗೆ ಅನಿಸಿದ್ದು ಒಂದೆ, ಈತ ನಟನಾಗಲೆ ಜನಿಸಿರುವ ಪೋರನೆಂದು. ಖಂಡಿತವಾಗಿಯೂ ಗೆಳೆಯ ಗೋಕುಲ ಸಹೃದಯನಿಗೆ ನಟನಾಗಿ ಉಜ್ವಲ ಭವಿಷ್ಯವಿದೆ . ಮುಂದೊಂದು ದಿನ ಜನಮನ ಗೆಲ್ಲುವ ನಟನಾಗಿ ದೇಶ ವಿದೇಶ ದಾದ್ಯಂತ ಕೀರ್ತಿ ಗಳಿಸುತ್ತಾನೆ.
ಈತನ ಮತ್ತೊಂದು ವಿಶೇಷವೇನೆಂದರೆ ಭಾರತದಲ್ಲೇ ಅತಿ ಚಿಕ್ಕ ವಯಸ್ಸಿನಲ್ಲಿ ಒಂದು ಗಂಟೆಯ ಕಾಲಾವದಿಗೆ ಏಕ ವ್ಯಕ್ತಿ ಪ್ರದರ್ಶನ ಮಾಡುತ್ತಿರುವ ಏಕೈಕ ನಟ ಎಂಬ ಕೀರ್ತಿ ಯನ್ನು ಈಗಾಗಲೇ ಗಿಟ್ಟಿಸಿಕೊಂಡಿದ್ದಾನೆ.ಒಬ್ಬ ಪುಟ್ಟ ಬಾಲಕನ ಮನದಾಳದಲ್ಲಿರುವ ಆಸೆ ಆಕಾಂಕ್ಷೆಗಳು ಹೇಗಿರುತ್ತದೆ .ಅವನ ನೋವು ನಲಿವುಗಳೇನು ಎಂದು ನಾಟಕವು ಸಾರುತ್ತಾ ಹೋಗುತ್ತದೆ. ಪುಟ್ಟ ಮಕ್ಕಳ ಕುರಿತಾದ ಎಷ್ಟೋ ವಿಚಾರಗಳು ಈ ನಾಟಕವು ಒಳಗೊಂಡಿದೆ. ಈ ನಾಟಕವು ಇನ್ನೂ ಹೆಚ್ಚು ಜನರಿಗೆ ತಲುಪಲಿ ಈ ನಾಟಕವನ್ನು ನೋಡುವುದರಿಂದ ಎಷ್ಟೋ ಜನ ಪೋಷಕರಿಗೆ ತಮ್ಮ ಮಕ್ಕಳ ಕುರಿತಾದ ಒಂದಿಷ್ಟು ತಾವು ಅರಿಯದ ಬೇರೆ ರೀತಿಯಾದಂತಹ ವಿಚಾರ ಗಳು ಅವರ ಮನದಲ್ಲಿ ತೆರೆದುಕೊಳ್ಳುವ ಸಾಧ್ಯತೆ ಇದೆ ಎಂದು ನನಗೆ ಅನ್ನಿಸುತ್ತದೆ. ಇದು ಅವರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ಉಪಯುಕ್ತವಾಗುತ್ತದೆ ಎನ್ನುವುದು ಕೂಡ ನನ್ನ ಅಭಿಪ್ರಾಯ .
ಬೇಲೂರು ರಘುನಂದನ್ ಸರ್ ನಾಟಕದ ರಚನೆ ಅದ್ಬುತವಾಗಿದೆ . ಕೃಷ್ಣಮೂರ್ತಿ ಕವತ್ತಾರ್ ಸರ್ ಅವರ ನಿರ್ದೇಶನ ಸೂಪರ್. ಎಲ್ಲವನ್ನೂ ಮೀರಿ ಮತ್ತೆ ಹೇಳಲು ಬಯಸುತ್ತೇನೆ ಗೆಳೆಯ ಗೋಕುಲ ಸಹೃದಯ ಬೊಂಬಾಟ್ ನಾಟಕದ ಕೇಂದ್ರ ಬಿಂದುವೇ ನೀನು ಡಿಯರ್. ಐವತ್ತನೇ ಪ್ರದರ್ಶನಕ್ಕೆ ಸನಿಹದಲ್ಲಿರುವ ಈ ನಾಟಕವು ಇನ್ನೂ ನೂರಾರು ಪ್ರದರ್ಶನಗಳನ್ನು ಮಾಡಲಿ ಎಂದು ಹೃದಯಪೂರ್ವಕವಾಗಿ ಶುಭಾಶಯವನ್ನು ಕೋರುತ್ತಿದ್ದೇನೆ ಶುಭವಾಗಲಿ
ಲೇಖನ : ಮಾರುತಿ ಬೈಂದೂರು
(ತೇಜಸ್ ಬೈಂದೂರು )