ಕುಂದಾಪುರ (ಆ,15) : ಯುವಶಕ್ತಿ ಮಿತ್ರ ಮಂಡಲ (ರಿ.) ಹೆಗ್ಗಾರ್ ಬೈಲು, ವಕ್ವಾಡಿ ಈ ಊರಿನ ಸಾಕ್ಷಿ ಪ್ರಜ್ಞೆ. ಊರಿನ ಸಮಗ್ರ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಂಸ್ಥೆ ಸೂರ್ಯ ಚಂದ್ರರಿರುವ ಕಾಲದವರೆಗೂ ಉಳಿಯಲಿ, ಬೆಳೆಯಲಿ ಎಂದು ಕಾಳಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಆಶಾಲತಾ ಶೆಟ್ಟಿ ಹೇಳಿದರು.
ಯುವಶಕ್ತಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಶಕ್ತಿಯಂತಹ ಸಂಸ್ಥೆ ಪ್ರತಿ ಊರಿಗೂ ಅಗತ್ಯ. ವಕ್ವಾಡಿ ಈ ಮಟ್ಟಿಗೆ ಅಭಿವೃದ್ಧಿ ಕಾಣಬೇಕಾದರೆ ಅದಕ್ಕೆ ಯುವಶಕ್ತಿಯ ಬಹುಪಾಲಿದೆ. ಇಂತಹ ಸಂಘಟನೆ ಒಂದು ಊರಿನ ಶಕ್ತಿ ಮಾತ್ರವಲ್ಲ, ಇದು ದೇಶದ ಶಕ್ತಿ. ದಿನನಿತ್ಯ ಕೋಮು ಗಲಭೆಯಂತಹ ಅಸಹ್ಯ ಬೆಳವಣಿಗೆಗಳ ನಡುವೆ ದೇಶದಲ್ಲಿ ಶಾಂತಿ ಕಾಪಾಡಬೇಕಾದರೇ ಯುವಶಕ್ತಿಯಂತಹ ಚಿಂತನೆಯುಳ್ಳ ಸಂಘ ಸಂಸ್ಥೆಗಳ ಪಾಲು ತುರ್ತಾಗಿ ದೇಶಕ್ಕೆ ಬೇಕಾಗಿದೆ. ಇತ್ತೀಚೆಗಷ್ಟೇ ತನ್ನ ಇಪ್ಪತ್ತೈದನೇ ವಾರ್ಷಿಕೋತ್ಸವ ಪೂರೈಸಿದ ಸಂಸ್ಥೆ ಈ ಊರಿಗೆ ನೂರ್ಕಾಲ ನೆರಳಾಗಿ ಬೆಳೆಯಲಿ ಎಂದು ಅಭಿಪ್ರಾಯ ಪಟ್ಟರು.
ಸಂಸ್ಥೆಯ ಅಧ್ಯಕ್ಷ ಸುಧೀಂದ್ರ ವಕ್ವಾಡಿ ಮಾತನಾಡಿ, ಯುವಶಕ್ತಿ ಅಭಿವೃದ್ಧಿಯನ್ನೇ ತನ್ನ ಉಸಿರಾಗಿಸಿಕೊಂಡಿದ್ದಕ್ಕಾಗಿ ಈವರೆಗೆ ಬೆಳೆಯುವುದಕ್ಕೆ ಸಾಧ್ಯವಾಗಿದೆ. ಶಾಂತಿ ಸಮಾಜದ ದಾರಿದೀಪವಾಗಿ ನಿಲ್ಲುವ ಯುವಶಕ್ತಿಯ ಸಂಕಲ್ಪವನ್ನು ಯಾವುದೇ ಅಘೋಚರ ಶಕ್ತಿಯಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ. ಸಂಸ್ಥೆಯ ಕಾರ್ಯಗಳುದ್ದಕ್ಕೂ ಜೊತೆಗಿದ್ದ ಕಾಳವಾರ ಗ್ರಾಮ ಪಂಚಾಯತ್ ಗೆ, ಊರಿನ ಸಮಸ್ತ ಜನತೆಗೆ ಸಂಸ್ಥೆ ಅಭಾರಿಯಾಗಿರಲಿದೆ ಎಂದರು.
ಈ ಸಂದರ್ಭದಲ್ಲಿ ಕಾಳವಾರ ಗ್ರಾಮ ಪಂಚಾಯತ್ ನ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.