ಭಾರತದ ನೈಜ ಇತಿಹಾಸವನ್ನು ಅರಿತುಕೊಳ್ಳುವಲ್ಲಿ ನಾವು ಸ್ವಯಂಸ್ಪೂರ್ತಿಯಿಂದ ಕಾರ್ಯಪ್ರವೃತ್ತರಾಗಬೇಕಿದೆ ಆ ಮೂಲಕ ಭಾರತೀಯ ಸಂಸ್ಕೃತಿಯ ಅಪೂರ್ವ ಮೌಲ್ಯಗಳನ್ನು ಕಾಪಿಟ್ಟು ಈ ಜಗತ್ತಿಗೆ ಸಾರಿ ಹೇಳುವ ಕೆಲಸವಾಗಬೇಕಿದೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ, ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗಂಗೊಳ್ಳಿಯ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಏಳಿ ಎದ್ದೇಳಿ ಎಚ್ಚರಗೊಳ್ಳಿ ಎನ್ನುವ ವಿವೇಕಾನಂದರ ನುಡಿಯಂತೆ ನಮ್ಮ ಪಠ್ಯಪುಸ್ತಕಗಳಲ್ಲಿನ ಇತಿಹಾಸದ ನೈಜತೆಯನ್ನು ಅರಿತುಕೊಳ್ಳುವಲ್ಲಿ ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ವಿವೇಕಾನಂದರವಿಚಾರಧಾರೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಂತಹ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅಸಿಸ್ಟೆಂಟ್ ಗವರ್ನರ್ ಡಾ. ನಾಗಭೂಷಣ ಉಡುಪ, ವಲಯ ಲೆಫ್ಟಿನೆಂಟ್ ಐ.ನಾರಾಯಣ, ರೋಟರಿ ಕ್ಲಬ್ ಗಂಗೊಳ್ಳಿಯ ಕಾರ್ಯದರ್ಶಿ ಎಂ. ನಾಗೇಂದ್ರ ಪೈ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿಯ ರೋಟರಿ ಕ್ಲಬ್ ಅಧ್ಯಕ್ಷ ಲಕ್ಷ್ಮಿಕಾಂತ ಮಡಿವಾಳ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.