ಬೈಂದೂರು(ಅ,4): ಉಡುಪಿ ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಕಡಲ ತೀರದಲ್ಲಿ ಒಂದಾದ ಅಳ್ವೆಗದ್ದೆ ಬೀಚ್ ನಲ್ಲಿ ಇಂದು ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ , ಬೈಂದೂರು -ಶಿರೂರು ಘಟಕ, ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಬೀಚ್ ಅಭಿವೃದ್ಧಿಯ ದೃಷ್ಟಿಯಿಂದ ‘ಕಡಲ ಕಿನಾರೆಯಲ್ಲಿ ಉದ್ಯಾನವನ’ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಪ್ರವಾಸಿಗರಿಗೆ ನೆರಳು ನೀಡುವ ಹಾಗೂ ಮರಳನ್ನು ಸಂರಕ್ಷಿಸುವ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಕಾರ್ಯಕ್ರಮವನ್ನು ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಸಂಘಟನೆಯ ಗೌರವ ಸಲಹೆಗಾರರಾದ ರಾಮ .ಎನ್ .ಅಳ್ವೆಗದ್ದೆ ಅವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ನಾರಾಯಣ ಟಿ. ಅಳ್ವೆಗದ್ದೆ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಹಾಗೂ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ಯುವಕರೆಲ್ಲಾ ಸೇರಿ ಪರಿಸರ ಜಾಗೃತಿಯ ಈ ಕಾರ್ಯಕ್ರಮ ಆಯೋಜಿಸಿದ್ದು ಅತ್ಯುತ್ತಮ ಕಾರ್ಯ ಎಂದು ತಿಳಿಸಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಯಿಸಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ರವಿರಾಜ ಚಂದನ್ ಕಳವಾಡಿ, ಮತ್ಸ್ಯೋಧ್ಯಮಿ ತಿಮ್ಮಪ್ಪ ಮೊಗೇರ, ಹಾಲಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ ಟಿ ಅಳ್ವೆಗದ್ದೆ, ಬಾಬು ಮೊಗೇರ ,ಜಿಲ್ಲಾ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಮೊಗವೀರ ಪಡುವರಿ ,ಘಟಕದ ಉಪಾಧ್ಯಕ್ಷರಾದ ಲಕ್ಷ್ಮಣ್ ಮೊಗವೀರ, ಸಂಘಟನೆಯ ಪದಾಧಿಕಾರಿಗಳಾದ ಭಾಸ್ಕರ್ ಸೋಮೇಶ್ವರ ,ನಾಗರಾಜ್ ಕೋಟೆಬಾಗಿಲು, ವಿಜಯ್ ಮಯ್ಯಾಡಿ ,ಈಶ್ವರ ಮಯ್ಯಾಡಿ, ಸಾವಿತ್ರಿ ಎನ್ ಅಳ್ವೆಗದ್ದೆ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ನಾಗವೇಣಿ ಮೊಗೇರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಮತ್ತು ಸರಕಾರ ಕೈಜೋಡಿಸಿದಲ್ಲಿ ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯದ ವ್ಯವಸ್ಥೆ ಕಲ್ಪಿಸಿದಾಗ ಮುಂದಿನ ದಿನದಲ್ಲಿ ಈ ಬೀಚ್ ಪಶ್ಚಿಮ ಕರಾವಳಿಯ ಅತ್ಯುತ್ತಮ ಬೀಚ್ ಆಗಲಿ ಎಂದು ಸಂಘಟನೆ ಬಯಸುತ್ತದೆ ಎಂದು ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ರವಿರಾಜ್ ಚಂದನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು. ವಿಶ್ವನಾಥ ರಾಮಪ್ಪ ಮೊಗೇರ ಸ್ವಾಗತಿಸಿದರು ಲೋಕೇಶ ನಾಗಪ್ಪ ಮೊಗೇರ ವಂದಿಸಿದರು,ಉಪಾಧ್ಯಕ್ಷರು ಹಾಗೂ ಶಿಕ್ಷಕರಾದ ಪಾಂಡುರಂಗ ಅಳ್ವೆಗದ್ದೆ ನಿರೂಪಿಸಿದರು.