ಕುಂದಾಪುರ (ಅ,22) : ಅಸ್ಪ್ರಶ್ಯತೆ, ಆಹಾರ ಪದ್ಧತಿ ಇವುಗಳಿಗೆ ಮಹತ್ವ ಕೊಡದೆ ಗುಣಕ್ಕೆ ಮಹತ್ವಕೊಡಬೇಕೆಂಬ ನಿಲುವುಗಳು ಮತ್ತು ಧಾರ್ಮಿಕ ಚಿಂತನೆಯನ್ನು ತನ್ನದೇ ಆದ ನೆಲೆಯಲ್ಲಿ ಪ್ರಶ್ನಿಸಿ ಹಲವು ಸಮಾಜ ಸುಧಾರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಅಂಬಿಗರ ಚೌಡಯ್ಯನವರ ವಚನಗಳ ವಿಚಾರ ಧಾರೆಗಳು ಇಂದಿಗೂ ಪ್ರಸ್ತುತ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ| ಎಚ್.ಕೆ. ವೆಂಕಟೇಶ್ ಹೇಳಿದರು.
ಇವರು ಮಂಗಳೂರು ವಿಶ್ವವಿದ್ಯಾನಿಲಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮತ್ತು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ “ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ಚಿಂತನೆ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೆಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಅಂಬಿಗರ ಚೌಡಯ್ಯನ ವಿಚಾರ ಧಾರೆಗಳು ಪ್ರಸ್ತುತ ಸಾಮಾಜಿಕ ಸಂದರ್ಭಕ್ಕೆ ಅನಿವಾರ್ಯ ಎಂದರು.
ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ| ಸೋಮಣ್ಣ ಪ್ರಾಸ್ತಾವಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕನ್ನಡ ಸಂಘದ ಸಂಯೋಜಕಿ ಶ್ರೀಮತಿ ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಪ್ರವೀಣಾ ಮಹಾಬಲ ಪೂಜಾರಿ ವಂದಿಸಿದರು.
ವಿದ್ಯಾರ್ಥಿಗಳಾದ ಪ್ರತೀಕ್ಷಾ, ಅಭಿನಯ ಅನಿಸಿಕೆ ಹಂಚಿಕೊoಡರು. ದೀಕ್ಷಾ ಪ್ರಾರ್ಥಿಸಿ, ಶಿವಾನಿ ಪಿ. ನಾಯ್ಕ್ ನಿರೂಪಿಸಿದರು.