ಬೈಂದೂರು(ಅ,25): ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ 33/11 ಕೆವಿ ವಿದ್ಯುತ್ ಉಪಕೇಂದ್ರ ಉದ್ಘಾಟನೆಯನ್ನು ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರು ಅ .25 ರಂದು ನೆರವೇರಿಸಿದರು.
ಇದರಿಂದಾಗಿ ಕೊಲ್ಲೂರು, ಜಡ್ಕಲ್, ಮುದೂರು, ಗೋಳಿಹೊಳೆ, ಇಡೂರು ಕುಂಜ್ಞಾಡಿ ಗ್ರಾಮಗಳ ಸುತ್ತ ಮುತ್ತಲಿನ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿ ಪ್ರತ್ಯೇಕ 11 ಕೆ.ವಿ. ಫೀಡರುಗಳ ಮೂಲಕ ಗುಣಮಟ್ಟದ ವಿದ್ಯುತ್ ಸರಬರಾಜು ಸಾಧ್ಯವಾಗುತ್ತದೆ. ಇದರಿಂದಾಗಿ ಕೃಷಿಯನ್ನು ಬದುಕಾಗಿಸಿಕೊಂಡಿರುವ ಈ ಭಾಗದ ಸುಮಾರು 1,745ಕ್ಕೂ ಮಿಕ್ಕಿ ಕೃಷಿ ಕುಟುಂಬಗಳಿಗೆ ಸಹಾಯವಾಗಲಿದೆ.
ಈ ಯೋಜನೆಯ ಅನುಷ್ಠಾನ ಸಮಯದಲ್ಲಿ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ನಡುವಿನ ಕಾನೂನು ತೊಡಕಿನ ಸಂಧರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸಿದ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರರವರಿಗೆ ಬೈಂದೂರಿನ ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಸೌಕೂರಿನಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ಅಕಾಲಿಕ ಮರಣ ಹೊಂದಿದ ಪ್ರಶಾಂತ್ ದೇವಾಡಿಗ ಕುಟುಂಬಕ್ಕೆ ಇಲಾಖೆ ವತಿಯಿಂದ 1 ಲಕ್ಷ ರೂ. ಪರಿಹಾರ ವಿತರಿಸಲಾಯಿತು. ಇದೇ ವೇಳೆ ಮಾನ್ಯ ಶಾಸಕರು ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ಪರಿಹಾರ ನೀಡಿದನ್ನು ಕುಟುಂಬದವರು ಸ್ಮರಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಬಿ.ಅಪ್ಪಣ್ಣ ಹೆಗ್ಡೆ, ಕೊಲ್ಲೂರು, ಇಡೂರು, ಜಡ್ಕಲ್, ಗೋಳಿಹೊಳೆ, ಕೆರಾಡಿ ಪಂಚಾಯತ್ ಅಧ್ಯಕ್ಷರು, ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.