ಕುಂದಾಪುರ( ಅ,29): ನಾಡು ನುಡಿಯ ಕುರಿತು ಅಭಿಮಾನ ಮೂಡಿಸುವ , ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಿದ “ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮವನ್ನು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಂಶುಪಾಲರನ್ನು ಒಳಗೊಂಡoತೆ ಸಮೂಹ ಗೀತಗಾಯನ ಅ.28 ರಂದು ಯಶಸ್ವಿಯಾಗಿ ನೆರವೇರಿತು.
ವಿದ್ಯಾರ್ಥಿಗಳೆಲ್ಲರೂ ಸಮವಸ್ತ್ರ ಧರಿಸಿ ಶಿಸ್ತು ಬದ್ಧವಾಗಿ ಸರ್ಕಾರವು ನಿಗದಿಪಡಿಸಿದ ಗೀತೆಗಳಾದ ಜಯಭಾರತ ಜನನಿಯ ತನುಜಾತೆ, ಉದಯವಾಗಲಿ ಚೆಲುವ ಕನ್ನಡನಾಡು, ಬಾರಿಸು ಕನ್ನಡ ಡಂಡಿಮವ, ಹಚ್ಚೇವು ಕನ್ನಡದ ದೀಪ , ವಿಶ್ವವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಎನ್ನುವ ಗೀತೆಯನ್ನು ಹಿನ್ನೆಲೆ ಸಂಗೀತದೊoದಿಗೆ ಹಾಡಿದರು.
ಈ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ್ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿಯವರು ವಹಿಸಿದರು. ವೇದಿಕೆಯಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಖಜಾಂಚಿಯಾದ ಶ್ರೀಯುತ ಭರತ್ ಶೆಟ್ಟಿ , ಪ್ರೌಢ ಶಾಲೆಯ ಮುಖ್ಯಶಿಕ್ಷಕಿಯಾದ ಶ್ರೀಮತಿ ಸುರೇಖಾ ಆಚಾರ್ಯ ಉಪಸ್ಥಿತರಿದ್ದರು.
ಕನ್ನಡ ಶಿಕ್ಷಕರಾದ ಶರತ್ ಕುಮಾರ್ ರವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗೈದು ಕಾರ್ಯಕ್ರಮ ನಿರೂಪಿಸಿದರು. ಶಾಲೆ ಮತ್ತು ಕಾಲೇಜಿನ ಶಿಕ್ಷಕ, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.