ನವರಸಗಳಿಂದ ಕೂಡಿದ ಒಂದು ಕಲಾ ಪ್ರಕಾರ ಇದೆ ಎಂದಾದರೆ ಅದು ಯಕ್ಷಗಾನ ಮಾತ್ರ. ಹಾಡುಗಾರಿಕೆ, ವೇಷ ಭೂಷಣಗಳ ಒಳಗೊಂಡ ಒಂದು ಸ್ವತಂತ್ರ ಕಲೆಯಾದ ಯಕ್ಷಗಾನ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು, ಕೇರಳದ ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನವನ್ನು ಭಕ್ತಿಯಿಂದ ಆರಾಧನಾ ಕಲೆಯಾಗಿ ನಂಬಿದವರು ಇದ್ದಾರೆ. ಯಕ್ಷಗಾನವು ಮೂರು ತಿಟ್ಟುಗಳು ಬಡಗು ತಿಟ್ಟು, ತೆಂಕುತಿಟ್ಟು , ನಡುತಿಟ್ಟು ಎಂದು ವಿಂಗಡಿಸಲ್ಪಟ್ಟಿದ್ದರೂ ಆದರ ಮೂಲ ತತ್ವಗಳು ಮತ್ತು ಆಶಯ ಒಂದೇ ಆಗಿದೆ.
ಕಲಾವಿದರ ಕುಂಚವನ್ನೇ ಹೊಂದಿರುವ ಬಡಗು ತಿಟ್ಟಿನ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಒಂದಾದ ಮಾರಣಕಟ್ಟೆ ಮೇಳದಲ್ಲಿ ಮಹಿಷಾಸುರನ ಪಾತ್ರಕ್ಕೆ ಹೊಸ ಮೇರುಗನ್ನು ನೀಡಿದ ಕಲಾವಿದ ಅಬ್ಬರದ ಮಹಿಷಾಸುರ ಖ್ಯಾತಿಯ ನಂದೀಶ್ ಜನ್ನಾಡಿಯವರನ್ನು ಪರಿಚಯಿಸುವ ಸಣ್ಣ ಪ್ರಯತ್ನ ನಮ್ಮದು.
24ವರ್ಷ ಪ್ರಾಯದ ಶ್ರೀ ನಂದೀಶ ರವರು ಹಾಲಾಡಿ ಸಮೀಪದ ಜನ್ನಾಡಿಯವರು. ಮಂಜುನಾಥ್ ಮತ್ತು ಬೇಬಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಇವರು ಒಬ್ಬಳು ತಂಗಿಯ ಮುದ್ದಿನ ಅಣ್ಣಾ. ಊರಿನ ಪರಿಸರದಲ್ಲಿ ಯಕ್ಷಗಾನ ಕಂಡು 9ನೇ ತರಗತಿಯಲ್ಲೇ ಓದುವಾಗಲೇ ಯಕ್ಷಗಾನಕ್ಕೆ ಆಕರ್ಷಿತರಾಗಿ ಮಡಾಮಕ್ಕಿ ಮೇಳಕ್ಕೆ ಸೇರ್ಪಡೆ ಆಗುತ್ತಾರೆ. ಐದು ವರ್ಷ ಮಡಾಮಕ್ಕಿ ಮೇಳದಲ್ಲಿ ಸೇವೆ ಸಲ್ಲಿಸಿ, ಒಂದು ವರ್ಷ ಸಿಗಂದೂರು ಮೇಳದಲ್ಲಿ ಸೇವೆ ಸಲ್ಲಿಸಿದ ನಂತರ ಹರಕೆ ಮತ್ತು ಬಯಲಾಟಗಳಿಗೆ ಹೆಸರುವಾಸಿಯಾದ ಮಾರಣ ಕಟ್ಟೆ ಮೇಳಕ್ಕೆ ಸೇರ್ಪಡೆಯಾಗುತ್ತಾರೆ.
ಕಳೆದ 4ವರ್ಷಗಳಿಂದ ಶ್ರೀದೇವಿ ಮಹಾತ್ಮೆ ಪ್ರಸಂಗದ ಮಹಿಷಾಸುರ ಪಾತ್ರಕ್ಕೆ ಯಕ್ಷಗಾನದ ಚೌಕಟ್ಟಿನ ಒಳಗೆ ಮಹಿಷಾಸುರ ಪಾತ್ರಕ್ಕೆ ಹೊಸ ಆಯಾಮವನ್ನು ತಂದು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ,ಆ ಪಾತ್ರಕ್ಕೊಂದು ಜೀವತುಂಬಿದ ಶ್ರೇಯಸ್ಸು ನಂದೀಶ್ ಅವರದ್ದು. ಮಾತಿಗೆ ಸಿಕ್ಕ ನಂದೀಶ್ ಅವರಲ್ಲಿ ಮೊದಲು ವಿಚಾಸಿದ್ದು, ಸ್ವತಃ ನನಗೂ ಮತ್ತು ಅವರ ಅಭಿಮಾನಿಗಳ ಪ್ರಶ್ನೆಯಾದ ಮಹಿಷಾಸುರನ ಪಾತ್ರ ನಿರ್ವಹಿಸುವಾಗ ಆವೇಶ ಭಾರಿತವಾಗಿ ರಂಗಸ್ಥಳದ ಕಂಬಗಳಿಗೆ ತಲೆ ಗುದ್ದಿಕೊಳ್ಳುರಿಂದ ನಿಮ್ಮ ತಲೆ ಮತ್ತು ದೇಹಕ್ಕೆ ಯಾವುದೇ ತೊಂದರೆ ಆಗುದಿಲ್ಲವೇ.? ಎಂದು ಕೇಳಿದಾಗ ಇಲ್ಲಾ! ವೇಷಭೂಷಣ ಮಾಡಿಕೊಳ್ಳುವಾಗ ತಲೆಗೆ ಸರಿಯಾದ ಯಾವುದೇ ರೀತಿಯ ನೋವು ಆಗದಂತೆ ಪೂರ್ಣ ವ್ಯವಸ್ಥೆ ಮಾಡಿಕೊಂಡು ಇರುತ್ತೇನೆ. ಯಕ್ಷಗಾನ ಚೌಕಟ್ಟಿನೊಳಗೆ ಅಭಿಮಾನಿಗಳಿಗೆ ರಂಜಿಸುವ ಪ್ರಯತ್ನ ನನ್ನದು, ಈ ಪರಿಕಲ್ಪನೆ ಅಭಿಮಾನಿಗೆ ಇಷ್ಟವಾಗಿರುವುದರಿಂದ ಇದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಈ ಮೂಲಕ ಅಭಿಮಾನಿ ದೇವರುಗಳ ಅಭಿಮಾನವೇ ನನ್ನಂತಹ ಕಿರಿಯ ಯಕ್ಷ ಕಲಾವಿದನಿಗೆ ಶ್ರೀ ರಕ್ಷೆ ಇದು ಇಂದಿಗೂ ಮುಂದಿಗೂ ಹೀಗೆ ಇರಲಿ ಅನ್ನುವುದೇ ನನ್ನ ಕೋರಿಕೆ ಎಂದು ಅಭಿಪ್ರಾಯ ಹೇಳಿಕೊಂಡರು.
ಇಲ್ಲಿ ಪ್ರಸ್ತುತಪಡಿಸಲೇ ಬೇಕಾದ ವಿಷಯ ಯಾವುದೆಂದಾರೆ ಶ್ರೀಯುತ ನಂದೀಶ್ ರವರ ಮಹಿಷಾಸುರ ಪಾತ್ರ ದ ಪೋಷಣೆಯ ಶ್ರದ್ಧೆ ಮತ್ತು ಜನಮನ್ನಣೆ . ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಬರುವ ಇವರ ಮಹಿಷಾಸುರ ಪಾತ್ರವನ್ನು ಪ್ರವೇಶವಾಗುವ ಹತ್ತು ನಿಮಿಷದ ಮುನ್ನ ಆಟ ನೋಡಲು ಬಂದು ಮಹಿಷಾಸುರ ವಧೆಯ ಪ್ರಸಂಗವನ್ನು ಮುಗಿಸಿ ಹೋಗುವವರ ಸಂಖ್ಯೆ ಅಧಿಕ ಇರುವುದು ಇವರ ಪಾತ್ರ ಈ ಪಾತ್ರ ಪೋಷಣೆಗೆ ಹಿಡಿದ ಕನ್ನಡಿ ಅಂದರೂ ತಪ್ಪಾಗಲಾರದು.
ನಂದೀಶ್ ರವರು ಅಭಿಮಾನಿ ವರ್ಗವನ್ನು ಗೌರವಿಸುವ, ಪ್ರೀತಿಸುವ ಹಾಗೂ ಅಭಿಮಾನಿಗಳ ಜೊತೆ ಗೌರವಪೂರ್ಣ ಉತ್ತಮ ನಡೆನುಡಿ ಹೊಂದಿರುವುದು ನಾವೂ ಕಾಣಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಹಿಂದೆ ಬೆಂಗಳೂರಿನಲ್ಲಿ ಯಕ್ಷದ್ರುವ ಪಟ್ಲಾ ಸತೀಶ್ ಮತ್ತು ಭಾಗವತ ಶ್ರೀ ರಾಘವೇಂದ್ರ ಆಚಾರ್ಯ ಇವರ ಸಾರಥ್ಯದಲ್ಲಿ ಶ್ರೀನಂದೀಶ್ ರವರು ಒಂದೊಳ್ಳೆ ಉದ್ದೇಶ ಇಟ್ಟು ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಅಭಿಮಾನಿ ಪ್ರೇಕ್ಷಕರಿಂದ ಕಾರ್ಯಕ್ರಮ ಹೌಸ್ ಫುಲ್ಲಾಗಿ ಉತ್ತಮ ರೀತಿಯಲ್ಲಿ ಫಂಡ್ ಕಲೆಕ್ಷನ್ ಆಗುವಲ್ಲಿ ಸದಾ ಹೆಜ್ಜೆ ಹೆಜ್ಜೆಗೂ ನನ್ನ ಬೆನ್ನ ಹಿಂದೆ ಇದ್ದುದದನ್ನು , ಸಹಕರಿಸಿದ್ದನ್ನು ಅವರು ಸ್ಮರಿಸಿಕೊಳ್ಳುವುದನ್ನು ಮರೆಯಲಿಲ್ಲ.
ಹಿರಿಯ -ಕಿರಿಯ ಎಲ್ಲಾ ಕಲಾವಿದರು ನನಗೆ ಸಹಾಯ ಸಹಕಾರ ಮಾಡಿದ್ದಾರೆ. ಕೆಲವು ಕಡೆ ನನ್ನ ಪ್ರತಿಭೆ ಗುರುತಿಸಿ ಸನ್ಮಾನಿಸಿರುವುದನ್ನು ಕೂಡ ಗೌರವದಿಂದ ನೆನೆದುಕೊಳ್ಳುವುದು ಕೂಡ ನನ್ನ ಆದ್ಯ ಕರ್ತವ್ಯ ಎಂದು ಹೇಳಿದರು. ಬೆಂಗಳೂರಿನ ಕೆಲವು ಉದ್ಯಮಿಗಳು ನನ್ನನ್ನು ಕರೆಸಿ ಗೌರವಿಸಿ ಸನ್ಮಾನಿಸಿರೋದಕ್ಕೂ ನಾನು ಧನ್ಯನಾಗಿದ್ದೇನೆ. ಅಂತಹ ಕಲಾ ಪೋಷಕರನ್ನು ಗೌರವಪೂರ್ಣವಾಗಿ ಇಂದು ನೆನೆದುಕೊಳ್ಳುತ್ತಿದ್ದೇನೆ ,ಹಲವಾರು ಅಭಿಮಾನಿದೇವರುಗಳು ಪ್ರೀತಿಸುವಲ್ಲಿ ಮತ್ತು ಸಹಾಯ ನೀಡುವುದರಲ್ಲಿ ನಿಜ ಅರ್ಥದಲ್ಲಿ ನನಗೆ ದೇವರಾಗಿ ಕಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಸಣ್ಣ ವಯಸ್ಸಿನಲ್ಲೇ ಯಕ್ಷಗಾನ ರಂಗದಲ್ಲಿ ಸಾಧನೆಯ ಮೆಟ್ಟಿಲು ಹತ್ತುತ್ತಿರುವ ಶ್ರೀಯುತ ನಂದೀಶ್ ರವರಿಗೆ ಶುಭವಾಗಲಿ ಎಂಬುದು ನಮ್ಮ ಆಶಯವಾಗಿದೆ . ಜನ್ನಾಡಿ ಸೌಡದಲ್ಲಿ ತಂದೆ ತಾಯಿ ಮತ್ತು ತಂಗಿ ಜೊತೆ ವಾಸವಾಗಿರಲು ಇವರ ಮನೆ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಇವರ ಕಲಾ ಸೇವೆ, ಮತ್ತು ಜೀವನ ಪ್ರಗತಿಯಲ್ಲಿ ಸಾಗಲಿ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸುಖ ಶಾಂತಿ ನೆಮ್ಮದಿ ಕೊಟ್ಟು ಕರುಣಿಸಲಿ ಎನ್ನುವುದು ನಮ್ಮ ಶುಭ -ಹಾರೈಕೆ ಮತ್ತು ಹರಕೆಯಾಗಿದೆ.
ನಂದೀಶ್ ಜನ್ನಾಡಿ-7760208447
ಸಂದರ್ಶನ ಮತ್ತು ಬರಹ ಈಶ್ವರ್ ಸಿ ನಾವುಂದ. 9833259692.