ಕಾರ್ಕಳ ( ನ,30): ಕನ್ನಡದ ಕಂಪು ವಿಶ್ವದೆಲ್ಲೆಡೆ ಪಸರಿಸಲು ನಾವು ಕಟಿಬದ್ಧರಾಗಬೇಕು. ಕನ್ನಡದ ನೆಲ, ಜಲ, ಭಾಷೆಗಳು ಉತ್ತುಂಗಕ್ಕೇರಲು ಇಂದಿನ ಯುವ ಪೀಳಿಗೆ ಪ್ರಯತ್ನಿಸಬೇಕು. ನಮ್ಮ ಪೂರ್ವಿಕರು ನಮಗೆ ದೊರಕಿಸಿಕೊಟ್ಟಿರುವ ಈ ಭವ್ಯ ಭಾಷೆ, ಕಲೆ, ಸಂಪತ್ತನ್ನು ವೃದ್ಧಿಸಬೇಕು. ತಂದೆ-ತಾಯಿಗಳನ್ನು ಪ್ರೀತಿಯಿಂದ ಸಲಹಬೇಕು. ಹಾಗೆಯೇ ನಮ್ಮ ಮಾತೃಭೂಮಿ ತಾಯಿ ಭಾಷೆಯನ್ನು ಬೆಳೆಸಬೇಕು ಎಂದು ಕನ್ನಡದ ಪೂಜಾರಿ ಡಾ. ಹಿರೇಮಗಳೂರು ಕಣ್ಣನ್ ಕರೆ ನೀಡಿದರು.
ಅವರು ನವೆಂಬರ್ 29 ರಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ʼಕ್ರಿಯೇಟಿವ್ ನುಡಿಹಬ್ಬ-2022ʼ ನ್ನು ಉದ್ಘಾಟಿಸಿ “ನಿನಾದ” ತ್ರೈಮಾಸಿಕ ಪತ್ರಿಕೆಯ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಆರೋಗ್ಯ ಪೂರ್ಣವಾದ ಮನಸ್ಸು ಪಡೆಯಲು ಕ್ರಿಯಾಶೀಲ ಚಟುವಟಿಕೆಗಳು ಪೂರಕ. ಸತ್ಯದ ಒಸರನ್ನು ಹುಡುಕುವ ಕಡೆಗೆ ಸದಾ ಮನಸ್ಸು ತುಡಿಯುತ್ತಿರಲಿ ಎಂದು ಹಾರೈಸಿದರು.ಕ್ರಿಯೇಟಿವ್ ಕಾಲೇಜಿನಲ್ಲಿ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಬಿ ರಾವ್ ಅವರ ʼಬೊಂಬಿನ ಬೇಲಿʼ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದೆಡೆಗೆ ಮತ್ತು ಮೌಲ್ಯಯುತ ವಿಚಾರಗಳನ್ನು ತಿಳಿಯಲು ಆಸಕ್ತರಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕರಲ್ಲೊಬ್ಬರಾದ ಅಮೃತ್ ರೈ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಾಹಿತ್ಯ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಎಲ್ಲ ಕಡೆಯಲ್ಲೂ ನಡೆಯುವಂತಾಗಲಿ ಎಂದು ಆಶಿಸಿದರು. ಸಂಸ್ಥಾಪಕರಾದ ಡಾ ಗಣನಾಥ ಶೆಟ್ಟಿ, ಆದರ್ಶ ಎಂ ಕೆ, ವಿಮಲ್ ರಾಜ್, ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಉಡುಪಿಯ ಪ್ರಾಂಶುಪಾಲರಾದ ಸ್ಟಾನಿ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು. ವಿನಾಯಕ ಜೋಗ್ ಬಹುಮಾನಿತರ ಯಾದಿ ವಾಚಿಸಿದರು. ಲೋಹಿತ್ ಎಸ್ ಕೆ ವಂದಿಸಿದರು. ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.