ಕುಂದಾಪುರ (ಜ,22): ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಛೇರಿ ಹಾಗೂ ಡಿಡಿ ಚಂದನ (ದೂರದರ್ಶನ) ದ ಸಂಯುಕ್ತ ಆಶ್ರಯದಲ್ಲಿ ನೆಡೆದ ರಾಜ್ಯಮಟ್ಟದ ಚುನಾವಣಾ ಸಾಕ್ಷರತಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಅತ್ಯಂತ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಯಾದ ಕುಂದಾಪುರ ತಾಲೂಕಿನ ಅಲೂರು ಸರಕಾರಿ ಪ್ರೌಢಶಾಲೆಯ ಹೆಮ್ಮೆಯ ವಿಧ್ಯಾರ್ಥಿಗಳಾದ ಗ್ರೀಷ್ಮ ಮತ್ತು ಪ್ರಜ್ಞಾ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸ್ಪರ್ಧೆಯಲ್ಲಿ 34 ಶೈಕ್ಷಣಿಕ ತಾಲೂಕಿನ ವಿಧ್ಯಾರ್ಥಿಗಳ ತಂಡ ಭಾಗವಹಿಸಿದ್ದು, ಮೂರು ಹಂತಗಳಲ್ಲಿ ಸ್ಪರ್ಧೆ ನೆಡೆದಿದ್ದು, ಮೂರು ಹಂತಗಳಲ್ಲಿಯೂ ಪ್ರಥಮ ಸ್ಥಾನದ ದಿಗ್ವಿಜಯ ಸಾಧಿಸಿದ್ದಾರೆ . ಈ ಕಾರ್ಯಕ್ರಮವು ನಾಡಿನ ಪ್ರಸಿದ್ಧ ದೂರದರ್ಶನ ಕಾರ್ಯಕ್ರಮ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಡಾ. ನಾ .ಸೋಮೇಶ್ವರವರ ನೇತ್ರತ್ವದಲ್ಲಿ ನೆಡೆಯಿತು.
ಶಾಲೆಯ ಸಮಾಜವಿಜ್ಞಾನ ಶಿಕ್ಷಕರಾದ ಉದಯಕುಮಾರ ಶೆಟ್ಟಿ ತರಬೇತಿ ನೀಡಿದರು. ಈ ಸಾಧನೆಗೈದ ವಿಧ್ಯಾರ್ಥಿಗಳನ್ನು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ವಿದ್ಯಾಕುಮಾರಿ, ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಡಾ.ಕೂರ್ಮರಾವ್ ರವರು ದೂರವಾಣಿ ಮೂಲಕ ಅಭಿನಂಧನೆ ಸಲ್ಲಿಸಿದ್ದಾರೆ.
ವಿಜೇತರನ್ನು ಜನವರಿ 25 ರಂದು ಬೆಂಗಳೂರಿನಲ್ಲಿ ನೆಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆಯ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ರವರು ಅಭಿನಂದಿಸಲಿದ್ದಾರೆ.