ಮ್ಯಾಜಿಕ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.! ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರೂ ಕೂಡ ಇಷ್ಟಪಡುವ ಕಲೆ ಮ್ಯಾಜಿಕ್. ಕ್ಷಣಮಾತ್ರದಲ್ಲಿ ನೋಡುಗರ ಕಣ್ಣನ್ನು ವಂಚಿಸಿ ನಿರೀಕ್ಷೆಗೂ ಮೀರಿದ ಅದ್ಭುತ ಸೃಷ್ಟಿಸುವ ಕಲೆಯೇ ಜಾದು. ಜಾದು ಎನ್ನುವ ಅದ್ಭುತ ಕಲೆ ಜಗತ್ತಿನಾದ್ಯಂತ ಹರಡಿದ್ದು ಭಾರತದಲ್ಲಿಯೂ ಸಹ ತನ್ನ ಛಾಪನ್ನು ಮೂಡಿಸಿದೆ.
ಹೊರನೋಟಕ್ಕೆ ಜನಪದೀಯವಾಗಿ ಕಂಡುಬಂದರೂ ಜಾದು ಕಲೆಯನ್ನು ಇವತ್ತು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗುತ್ತದೆ. ಜಾದು ಎನ್ನುವ ಅದ್ಭುತ ಕಲೆಯನ್ನು ಸಿದ್ಧಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಗುರುವಿನ ಗುಲಾಮನಾಗುವ ತನಕ ಜಾದುವನ್ನು ಸಿದ್ಧಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕೆ ಅದರದ್ದೇ ಆದ ಗುರು ಪರಂಪರೆ ಇದೆ. ಹಾಗೇ ಜಾದುವನ್ನು ಸಿದ್ದಿಸಿಕೊಂಡರೂ ಸಹ ಜನಾಕರ್ಷಣೆ ಪಡೆದು ಜನರ ಮನಸ್ಸನ್ನು ಮಂತ್ರ ಮುಗ್ಧರನ್ನಾಗಿಸುವುದು ಬಹಳ ಕಷ್ಟ. ಆದರೆ ಇಲ್ಲೊರ್ವ ವ್ಯಕ್ತಿ ದೇಶ- ವಿದೇಶಗಳಲ್ಲಿ ನೂರಾರು ಜಾದು ಶೋಗಳನ್ನು ಆಯೋಜಿಸಿ ಮ್ಯಾಜಿಕ್ ಲೋಕದ ಮಾಂತ್ರಿಕನಾಗಿ ಗುರುತಿಸಿಕೊಂಡು ನಮ್ಮ ಕನ್ನಡ ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿ ಹೆಸರಿಗೆ ಅಂತರಾಷ್ಟ್ರೀಯ ಖ್ಯಾತಿ ತಂದಿದ್ದಾರೆ. ಅವರೇ ಭ್ರಮಾ ಲೋಕದ ಮೋಡಿಗಾರ – ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಪ್ರಕಾಶ್ ಹೆಮ್ಮಾಡಿ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಹೆಮ್ಮಾಡಿಯವರಾದ ಪ್ರಕಾಶ್ ಹೆಮ್ಮಾಡಿಯವರು ಕೃಷ್ಣ ನಾಯ್ಕ್ ಹಾಗೂ ಪದ್ಮಾವತಿ ದಂಪತಿಗಳ ಮಗನಾಗಿ 1970 ರ ಜುಲೈ 25 ರಂದು ಯಲ್ಲಾಪುರದಲ್ಲಿ ಜನಿಸಿದರು.
ಇವರ ತಂದೆ ಯಲ್ಲಾಪುರದಲ್ಲಿ ಇದ್ದಾಗ ತಾನು ಕೆಲಸ ಮಾಡುವ ಧಣಿಗಳಿಂದ ಮೋಸಕ್ಕೊಳಗಾಗಿ ಕುಂಟುಂಬ ಸಮೇತರಾಗಿ ಊರಿಗೆ ಬರುತ್ತಾರೆ. ನಂತರ ತನ್ನ ತಾಯಿಯ ಊರಾದ ಹೆಮ್ಮಾಡಿಗೆ ಬಂದು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹೆಮ್ಮಾಡಿ ಹಾಗೂ ಕುಂದಾಪುರದಲ್ಲಿ ಮುಗಿಸುತ್ತಾರೆ.
ಕಡು ಬಡತನದಲ್ಲಿ ಶಾಲಾ ಶಿಕ್ಷಣ ಪಡೆಯುವಾಗ ಇವರು ಚಿತ್ರಕಲೆಯಲ್ಲಿ ಉತ್ತಮ ಆಸಕ್ತಿ ಹೊಂದಿದ್ದರು. ಆದರೆ ಅವರನ್ನು ಸುಜಿಗಲ್ಲಿನಂತೆ ಎಳೆದಿದ್ದು ಜಾದೂ ಕ್ಷೇತ್ರ. ಪ್ರೌಢ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಒಂದು ದಿನ ಬೆಂಗಳೂರಿನ ಉದಯ ಜಾದುಗಾರ ಎನ್ನುವವರು ಶಾಲೆಯಲ್ಲಿ ಜಾದು ಪ್ರದರ್ಶನ ನೀಡುತ್ತಿರುವಾಗ ಆ ಪ್ರದರ್ಶನವೇ ಇವರ ಜೀವನದ ಜಾದು ಪ್ರದರ್ಶನಕ್ಕೆ ಮುನ್ನುಡಿ ಬರೆಯಿತು. ಮುಂದಿನ ದಿನಗಳಲ್ಲಿ ಓಂ ಗಣೇಶ್ ಉಪ್ಪುಂದ ಇವರ ಕಾರ್ಯಕ್ರಮವನ್ನು ನೋಡಿ ತಾನು ಕೂಡ ಜಾದುಗಾರನಾಗಬೇಕೆಂದು ಖಚಿತಪಡಿಸಿಕೊಂಡರು.
ಮನೆಯ ಆರ್ಥಿಕ ಸಂಕಷ್ಟದ ನಡುವೆ ದುಡಿಮೆಯ ಸಲುವಾಗಿ ಮಾವನ ಜೊತೆ ಬಳ್ಳಾರಿಯ ಕಡೆ ಪ್ರಯಾಣ ಬೆಳೆಸಿದರು. ಐದು ವರ್ಷ ಕಷ್ಟಪಟ್ಟು ಹೋಟೆಲ್ ನಲ್ಲಿ ದುಡಿದು ಒಟ್ಟು 25 ವರ್ಷ ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜೊತೆಯಲ್ಲಿ ತನ್ನ ಆಸಕ್ತಿಯ ಕ್ಷೇತ್ರವಾದ ಜಾದು ಬಗ್ಗೆ ಗಮನ ಹರಿಸಿದರು.
1992 ರಲ್ಲಿ ಇವರ ಗುರುಗಳಾದ ಕೇರಳ ಮೂಲದ ಪ್ರಸಿದ್ಧ ಜಾದುಗಾರ ಕಂಪ ಗೋಪಿನಾಥ್ ರಾವ್ ರವರ ಅಖಿಲ ಭಾರತ ಜಾದು ಪ್ರದರ್ಶನದಲ್ಲಿ ಒಂದು ತಿಂಗಳು ಜಾದು ತರಬೇತಿ ಪಡೆದು ಜಾದು ಕಲೆಯನ್ನು ತನ್ನಲ್ಲಿ ಕರಗತ ಮಾಡಿಕೊಂಡರು. ಅದೇ ಗುರುಗಳು ತಮ್ಮ ಪ್ರದರ್ಶನಗೊಳ್ಳುವ ಹಲವು ಕಡೆ ಇವರನ್ನು ಕರೆದುಕೊಂಡು ಹೋದರು. ಉಡುಪಿಯ ಗಿಲಿ ಗಿಲಿ ಜಾದೂ ಸಮ್ಮೇಳನದಲ್ಲಿ ಇವರನ್ನು ಕೂಡಿಕೊಂಡು ಗುರುಗಳು ಪ್ರದರ್ಶನ ಮಾಡಿದರು. ಅಲ್ಲಿಂದ ಶುರುವಾದ ಇವರ ಈ ಜಾದು ಪಯಣ ಹೊಸ ದಾರಿಯನ್ನು ಹುಟ್ಟುಹಾಕಿತು.
ಪ್ರಕಾಶ್ ಹೆಮ್ಮಾಡಿಯವರು ದೇಶ -ವಿದೇಶಗಳಲ್ಲಿ ಈವರೆಗೆ 3,000ಕ್ಕೂ ಅಧಿಕ ಜಾದು ಪ್ರದರ್ಶನವನ್ನು ನೀಡಿ ಒಬ್ಬ ಉತ್ತಮ ಅಂತರಾಷ್ಟ್ರೀಯ ಜಾದು ಪ್ರದರ್ಶಕ ಅನಿಸಿಕೊಂಡಿದ್ದಾರೆ. ಮ್ಯಾಜಿಕ್ ಮಂತ್ರಿಕ ರತ್ನ ರಾಜ್ಯ ಪ್ರಶಸ್ತಿ,ಅಂತರಾಷ್ಟ್ರೀಯ ಜಾದು ಪ್ರಶಸ್ತಿ,ಗುರು ಚರಂತಾರ್ಯ ಪ್ರಶಸ್ತಿ ಇನ್ನು ಹಲವು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೂರಾರು ಸನ್ಮಾನ- ಗೌರವಗಳು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಂತಿದೆ.
ಭಾರತದ ಜಾದು ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ Milk Can Escape ಹಾಗೂ Fire Escape ಈ ಮಾದರಿಯನ್ನು ಜಾದೂ ಕ್ಷೇತ್ರಕ್ಕೆ ಮೊದಲು ಪರಿಚಯಿಸಿದವರು ಪ್ರಕಾಶ್ ಹೆಮ್ಮಾಡಿಯವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
2001ರಲ್ಲಿ ತನ್ನ ಬಾಳ ಸಂಗಾತಿಯಾಗಿ ನೇತ್ರಾವತಿ ಎಂಬುವರನ್ನು ಆರಿಸಿಕೊಂಡರು. ಇವರಿಗೆ ಶ್ರೀವತ್ಸ ಹಾಗೂ ಶ್ರೇಯಸ್ ಇಬ್ಬರು ಗಂಡು ಮಕ್ಕಳು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಪ್ರಾಮುಖ್ಯವಾದುದು ಎಂಬ ಮಾತಿನಂತೆ ಇವರ ಯಶಸ್ಸಿನ ಅರ್ಧ ಭಾಗ ಪತ್ನಿ ನೇತ್ರಾವತಿ ಯವರದ್ದು ಎನ್ನುವುದರಲ್ಲಿ ಬೇರೆ ಮಾತಿಲ್ಲ.ಇವರ ಜಾದುವಿನ ಪ್ರತಿಯೊಂದು ಪ್ರದರ್ಶನದಲ್ಲಿ ಇವರ ಧರ್ಮಪತ್ನಿಯ ಪಾತ್ರ ಬಹುಮುಖ್ಯವಾದುದು.
ಮಗ ಶ್ರೀವತ್ಸ ಕೂಡ ತಂದೆಯಂತೆ ಜಾದು ಕ್ಷೇತ್ರದಲ್ಲಿ ದೇಶ-ವಿದೇಶದಲ್ಲೂ ಕೂಡ ಜಾದು ಪ್ರದರ್ಶನವನ್ನು ನೀಡಿ ತನ್ನ ಐದನೇ ವರ್ಷದಲ್ಲಿಯೇ ಅಸಾಧಾರಣ ಸಾಧನೆ ಮಾಡಿರುವ ಮಕ್ಕಳಿಗೆ ಕೊಡಲಾಗುವ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ತಂದೆಯೇ ಈತನಿಗೆ ಗುರು ಎನ್ನುವುದು ವಿಶೇಷ. ಬಳ್ಳಾರಿಯಲ್ಲಿ ಒಂದು ವರ್ಷ ಎಂಟು ತಿಂಗಳ ವಯಸ್ಸಿನಲ್ಲೇ ಜಾದು ಪ್ರದರ್ಶನ ಮಾಡಿ ಅತಿ ಚಿಕ್ಕ ವಯಸ್ಸಿನ ಜಾದುಗಾರ ಎಂಬ ಹೆಗ್ಗಳಿಕೆಗೆ ಸಾಕ್ಷಿಯಾಗಿದ್ದಾನೆ. ಎರಡು ವರ್ಷ ಮೂರು ತಿಂಗಳು ವಯಸ್ಸಿನಲ್ಲಿ ಕಾಸರಗೋಡಿನ ನಡೆದ ಅಂತರಾಷ್ಟ್ರೀಯ ಜಾದು ಸಮ್ಮೇಳನದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಪ್ರಕಾಶ್ ಜಾದೂಗಾರ್ ಇವರು ಜಾದು ಲೋಕದ ಜೊತೆಗೆ ಆಧ್ಯಾತ್ಮದ ಕಡೆಗೆ ಕೂಡ ಹೆಚ್ಚಿನ ಒಲವನ್ನು ಹೊಂದಿದ್ದು,
ತನ್ನ ವಿವಾಹ ಪೂರ್ವದಲ್ಲಿಯೇ ಶ್ರೀ ಪ್ರಭಾಕರ್ ಗುರುಜಿ ಯವರಲ್ಲಿ ತನ್ನನ್ನು ಆಧ್ಯಾತ್ಮಿಕವಾಗಿ ತೊಡಗಿಸಿಕೊಂಡು ವಿಶ್ವ ದಾಖಲೆಯ ಕನಸಿನ ಬಗ್ಗೆ ಚೀಟಿ ಬರದಿದ್ದರಂತೆ. ಆ ಕನಸನ್ನು ನನಸು ಮಾಡುವ ಕೆಲವೇ ಜನರಲ್ಲಿ ಇವರು ಕೂಡ ಒಬ್ಬರು.
ವಿಶ್ವ ದಾಖಲೆಯತ್ತ ಪ್ರಕಾಶ್ ಜಾದೂಗಾರ್ ಚಿತ್ತ…
ಇನ್ನೊಂದು ವಿಶೇಷವೆಂದರೆ ತನ್ನ ಜೀವನ ಬಹುಮುಖ್ಯವಾದ ಒಂದು ವರ್ಲ್ಡ್ ರೆಕಾರ್ಡ್ ಕನಸನ್ನು ಇವರು ನನಸು ಮಾಡಲು ಹೊರಟಿದ್ದಾರೆ. ಅದು ಏನು ಅನ್ನೋದನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬಿಚ್ಚಿಡಲಿದ್ದಾರೆ. ಇವರ ವಿಶ್ವ ದಾಖಲೆ ಗುರಿ ಆದಷ್ಟು ಬೇಗ ಈಡೇರಲಿ ಎನ್ನುವುದು ನಮ್ಮ ಆಶಯ.
ಲೇಖನ : ಜಯಂತ್ ಕುಂದರ್ ಬಾಳಿಕೆರೆ