ಕೋಡಿ(ಆ,14): ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ “ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮ”ವನ್ನು ಆಗಸ್ಟ್ .14 ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀಕಾಳಾವರ ಉದಯ ಕುಮಾರ್ ಶೆಟ್ಟಿ ಮಾತನಾಡಿ ಯೋಚನೆ ಹಾಗೂ ಯೋಜನೆಗಳಿದ್ದಲ್ಲಿ ಯಾವುದೇ ಸಾಧನೆಗೆ ಹಿನ್ನಡೆಯಿಲ್ಲ, ಒಂದು ಸಂಸ್ಥೆ ಬೆಳೆಯಬೇಕಾದರೆ ಐದು ಅಂಶಗಳು ಮುಖ್ಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪೋಷಕರು, ಬೋಧಕರು ಮತ್ತು ಹಳೆ ವಿದ್ಯಾರ್ಥಿಗಳು ಇವರ ಒಗ್ಗೂಡುವಿಕೆಯಿಂದ ಸಂಸ್ಥೆ ಬೆಳೆಯುತ್ತದೆ ಎಂದು ಹೇಳಿದರು.ಉತ್ತಮ ಕೆಲಸ ಮಾಡಿದವರಿಗೆ, ಉತ್ತಮ ಫಲ ಸಿಕ್ಕೇ ಸಿಗುತ್ತದೆ. ನಿಮ್ಮ ಮೇಲಿರುವ ನಿರೀಕ್ಷೆಯನ್ನು ಹುಸಿಗೊಳಿಸಬೇಡಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿಕೊಂಡು “ವಿದ್ಯಾರ್ಥಿಗಳು ಶ್ರಮ ವಹಿಸಿ ಅಧ್ಯಯನ ಮಾಡಿದರೆ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯ ಜೊತೆಗೆ ಪೋಷಕರೂ ಕೂಡ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಹಭಾಗಿತ್ವ ಹೊಂದಿರಬೇಕೆಂದು ಎಂದರು.
ಬ್ಯಾರೀಸ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಆಸೀಫ್ ಬ್ಯಾರಿ ಮಾತನಾಡಿ “ಜೀವನದಲ್ಲಿ ಶಿಸ್ತನ್ನು ನಾವು ಅನುಸರಿಸಿದರೆ, ಆ ಶಿಸ್ತೇ ನಮ್ಮ ಭವಿಷ್ಯವನ್ನು ಎತ್ತಿಹಿಡಿಯುತ್ತದೆ” ಎಂದು ತಿಳಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಶಬೀನಾ ಹೆಚ್ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಸಮಯ ಪಾಲನೆ, ಕಾಲೇಜಿನ ರೀತಿ-ನೀತಿಗಳ ಕುರಿತು ತಿಳಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಾಲತಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಸುಮನ ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿ ವಂದಿಸಿದರು. ಕನ್ನಡ ಉಪನ್ಯಾಸಕ ಡಾ. ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.