ಆಕೆ ನನ್ನಂತೆ ಕನಸು ಕಂಡಿರಬಹುದಲ್ಲವೇ,
ರೆಕ್ಕೆ ಬಿಚ್ಚಿ ಹಾರಾಡೋ ಕನಸು, ಯಾರ ಪರಿವಿಲ್ಲದೇ ಗುನುಗಾಡೋ ಮನಸು ಆಕೆಗೂ ಇದ್ದಿರಬಹುದಲ್ಲವೇ!
ಆದರೆ ಇಂದು ಇನ್ನೊಬ್ಬರ ಖುಷಿಯಲಿ ತನ್ನ ಕನಸನ್ನು ಕಾಣುತಿರುವಳಷ್ಟೇ.
ಚಿಕ್ಕ ಪುಟ್ಟ ವಿಷಯಕ್ಕೂ ಕೂಗಾಡೋ ನಮ್ಮ ಪರಿಸ್ಥಿತಿಗೆ ,ಕೋಪ ಆಕೆಗೂ ಬರುವುದೇ ಎನ್ನುವುದು ಪ್ರಶ್ನೆ.ನಮ್ಮ ಕೋಪ ಕೂಗಾಡಿ ಕರಗಿದರೆ,ಆಕೆಯ ಕೋಪ ಪಾತ್ರೆಗಳ ಮೇಲೆ ತೀರಿಸಿಕೊಂಡು, ಒಬ್ಬಳೇ ನೀರ್ಜೀವ ವಸ್ತುಗಳ ಮೇಲೆ ಕೋಪ ಹೊರಗೆ ಹಾಕುತ್ತಾಳೆ.
ಇನ್ನೂ ಇವಳ ಹಾಗೆ ಮಾಡಬೇಡ, ಹೀಗೆ ಮಾಡಬೇಡ ಅನ್ನೋ ಅನುಭವದ ಮಾತುಗಳು ಮೊದಲೇ ಎಚ್ಚರಿಸುವಂತದ್ದು. ಅಂಥ ಅನುಭವ ಅವಳಿಗೇನಿದೆ!
ಹಾ,ಅವಳು ಓದುವ,ಹಾರಾಡುವ ,ಸ್ವಂತ ದುಡಿಮೆಯಲಿ ನನಗಾಗಿ ಒಂದಿಷ್ಟು ದಿನ ಬದುಕುವ ಆಸೆ ಕಂಡಿರಬಹುದು. “ಮದ್ವೆ ಆದಮೇಲೂ ನಿನ್ನಷ್ಟದಂತೆ ಇರಬಹುದು” ಎಂಬ ಆಶ್ವಾಸನೆಯನ್ನು ನಂಬಿಕೊಂಡು ಆಕೆ ಒಲ್ಲದ ಮನಸಿನಲಿ ಒಮ್ಮತ ಸೂಚಿಸಿರಬಹುದು.
ಇನ್ನೂ ಹೋದ ಮನೆಯವರು ಕೆಲಸಕ್ಕೆ ಕಳುಹಿಸಿದರೇ ಆಕೆ ದುಡಿದು ಅವರಿಗೆ,ಇನ್ನೂ ಮನೆಯಲ್ಲಿದ್ದರೆ ಬೇಯಿಸಿ ಹಾಕಿದ್ದು ಅವರಿಗೆ, ಊಫ್ ಇಂದಿಗೂ ಆಕೆಗೆ ತನಗಾಗಿ ಬದುಕುವ ಸ್ವತಂತ್ರವೇ ಸಿಕ್ಕಿಲ್ಲ.
ಇದ್ದಿರಬಹುದು ಒಂದಿಷ್ಟು ಹೆಂಗಳೆಯರ ಪಾಲಿಗೆ ಅವರಿಷ್ಟ ಪಟ್ಟಂತೆ ಬದುಕುವ ಸ್ವಾತಂತ್ಯ ಅದು ಕೂಡ ಬೆರಳಣಿಕೆಯಷ್ಟೇ. ಇನ್ನೂ ಆತನೊಬ್ಬನನ್ನೇ ನಂಬಿ ತನ್ನ ಪುಟ್ಟ ಪ್ರಪಂಚವನ್ನೇ ಬಿಟ್ಟು ಬರುವ ಆಕೆಗೆ ಮುಂದೆ ಇದೇ ಜೀವನ. ಇನ್ನೂ ಅಲ್ಲಾಗುವ ಅನಾಹುತಕ್ಕೆ ಇವಳ ಕಾಲ್ಗುಣದ ಹೊಣೆಗಾರಿಕೆ. ಅದನ್ನು ಪ್ರಶ್ನಿಸಿದರೆ ತವರು ಮನೆಯ ಸಂಸ್ಕಾರದ ಬಗ್ಗೆ ಅಪವಾದದ ನಿಂದನೆ.ಎಲ್ಲವನೂ ಸರಿದೂಗಿಸಲೂ ಒದ್ದಾಡುತಿರುವ ಅವಳ ಯೋಚನೆಯಲಿ ಅವಳಿಗಾಗಿ ನೆಡೆಸುತಿರೋ ಹೋರಾಟವಂತೂ ಇದಲ್ಲ. ಹೋದ ಮನೆ, ಇದ್ದ ಮನೆಗೆ ನನ್ನಿಂದ ಕೆಟ್ಟದಾಗಬಾರದೆಂಬ ವಿಚಾರವಷ್ಟೇ. ಇನ್ನೂ ಅವಳು ಖುಷಿಯಾಗಿರುವಳೇ. ಹಾ, ಮಕ್ಕಳ ನಗುವಿನಲಿ ನಗುವಳಾಕೆ, ಮಕ್ಕಳ ಕನಸುಗಳಲಿ ತನ್ನ ಕನಸುಗಳ ಪೊಣಿಸುವಳಾಕೆ.
ಇನ್ನೊಂದೆಡೆ ಗಂಡ ತೀರಿಕೊಂಡರೆ ಅವಳ ಅಸ್ತಿತ್ವ, ಇರುವಿಕೆಯನ್ನೇ ಕಳೆದುಕೊಂಡಂತೆ. ಅವಳ ಸೌಂದರ್ಯ ಹೆಚ್ಚಿಸುತ್ತಿದ್ದ ಸೌಭಾಗ್ಯದ ಪ್ರತಿರೂಪವೆಲ್ಲಾ ಮರೆಯಾಗಿ ಬಿಡುವುದು.
ಇದೆಂಥಾ ಸಂಪ್ರದಾಯ !? ಆತ ಸತ್ತರೆ ಇಕೆಗೇಕೇ ಶಿಕ್ಷೆ.
ತಪ್ಪೆ ಮಾಡದಿದ್ದರೂ ಅಪರಾಧಿ ಪಟ್ಟ. ನಿಜವಾಗಿಯೂ ಅಲ್ಲಿ ವಾರಸುದಾರನನ್ನೂ ಕಳೆದುಕೊಂಡಿದ್ದು ಮನೆಯವರಾದರೂ, ಶಿಕ್ಷೆ ಆಕೆಯೊಬ್ಬಳಿಗೆ ಮಾತ್ರ. ಬೇರೆಯವರ ತಪ್ಪು ಒಪ್ಪಿಗೂ ಅವಳೊಬ್ಬಳೇ ಬಲಿಯಾಗುತಿರುವಳು.
ಹೆಣ್ಣಿನ ವಯಸ್ಸು ಕೇಳಬಾರದೆಂಬ ಮಾತಿದೆ. ಕಾರಣ ಆಕೆ ಎಂದಿಗೂ ತನಗಾಗಿ ಬದುಕುವುದಿಲ್ಲ. ಅಂಥ ಶಕ್ತಿ ಆಕೆಗೆ ಶಾಪವಾಗಿದ್ದು ಈ ಹಾಳು ಸಂಪ್ರದಾಯ, ಸಮಾಜದ ಕಟ್ಟುಪಾಡುಗಳಿಂದ.
ಎಲ್ಲರ ನೋವಿಗೆ ಹೃದಯ ಮಿಡಿವ ಆಕೆ ತನ್ನ ಜೀವನವೇ ಅಸ್ಥವ್ಯಸ್ಥವಿದ್ದರೂ ಅವಳ ನಗುವಿಗೆ ಈ ಕೊರತೆ ಅನ್ನೋದಿಲ್ಲ. ಆದರ್ಶವ್ಯಕ್ತಿ ಇನ್ಯಾರಲ್ಲೋ ಹುಡುಕುವ ನಾವು ಅವಳ ಇತಿಹಾಸದ ಪ್ರತಿ ಹಂತವೂ ಕೂಡ ನಿಜವಾಗಿಯೂ ರೋಚಕವೇ. ಈ ಅನುಭವಗಳು ಆಕೆಯ ಬದುಕನ್ನೇ ಬದಲಾಯಿಸಿದೆ. ಇನ್ನೂ ನಮ್ಮ ಪ್ರತಿ ನಿರ್ಧಾರಕೂ ಅವಳ ಅನುಭವದ ಸಲಹೆ ನಿಜಕ್ಕೂ ಅವಶ್ಯಕ.
ಅಪರಿಚಿತರನ್ನ ಪರಿಚಯ ಮಾಡಿಕೊಳ್ಳುತಿರೋ ನಾವು. ನಮ್ಮನ್ನ ಜಗಕೆ ಪರಿಚಯಿಸಿದವರ ಪರಿಸ್ಥಿತಿ ಅರಿಯೋ ಪ್ರಯತ್ನ ಮಾಡ್ತಾ ಇಲ್ಲ ಅನ್ನುವುದೇ ವಾಸ್ತವದ ಕಹಿ ಸತ್ಯ.
ಅರ್ಚನಾ ಆರ್. ಕುಂದಾಪುರ