ತೆಕ್ಕಟ್ಟೆ (ಏ, 24) : ಕೋವಿಡ್ ಕಾರಣದಿಂದಾಗಿ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ ನೋಡದೆ ಅದೆಷ್ಟು ಅದೆಷ್ಟು ಅದೆಷ್ಟು ತಿಂಗಳುಗಳು ಕಳೆದು ಹೋಗಿದೆ. ಎಲ್ಲವೂ ಸರಿ ಹೋಗಬಹುದು,ಕೋವಿಡ್ ನಿಯಂತ್ರಣಕ್ಕೆ ಬರಬಹುದು ಅನ್ನುವ ಆಲೋಚನೆ ಯಲ್ಲಿದ್ದ ನಮಗಿಂದು ಕರೋನ ಎರಡನೇ ಅಲೆ ಬೆಚ್ಚಿಬೀಳಿಸಿದೆ.
ಅದೆಷ್ಟೋ ಸರಕಾರಿ ಪ್ರಾಥಮಿಕ ಶಾಲೆಗಳು ಕರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗದೆ ತಟಸ್ಥ ಆಗಿ ಬಿಟ್ಟಿದೆ.
ಆದರೆ ಕುಂದಾಪುರ ತಾಲೂಕಿನ ಹೆಸಕತ್ತೂರು ಸರಕಾರಿ ಪ್ರಾಥಮಿಕ ಶಾಲೆ ಉಳಿದ ಶಾಲೆಗಳಿಗಿಂತ ಸ್ವಲ್ಪ ಭಿನ್ನವಾಗಿ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿ ಮತ್ತು ಸೃಜನಶೀಲರನ್ನಾಗಿ ರೂಪಿಸುವಲ್ಲಿ ಅಲ್ಲಿನ ಶಿಕ್ಷಕ ವ್ರಂದ ಒಂದಿಲ್ಲೊಂದು ಹೊಸ ಪ್ರಯೋಗ ನಡೆಸುತ್ತಾ ಬಂದಿದ್ದಾರೆ.
ಸ್ವತಹ ಶಿಕ್ಷಕರೆ ಶಾಲೆಯ ಗೋಡೆಗಳಿಗೆ ಬಣ್ಣ ಬಳಿದು ವಿವಿಧ ಚಿತ್ರಕಲೆಯನ್ನು ರಚಿಸಿ ಎಲ್ಲರ ಗಮನಸೆಳೆದಿದ್ದಾರೆ. ಆದರೆ ಇತ್ತೀಚೆಗೆ ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿನೂತನ ಪರಿಕಲ್ಪನೆಯಾಗಿ ನಲಿಕಲಿಇಂಗ್ಲೀಷ್ ನ್ನು ಆರಂಭಿಸಿದ್ದು ತುಂಬಾ ಕುತೂಹಲಕಾರಿ ಸಂಗತಿಯಾಗಿದೆ.
ಸ್ವತಹ ಶಿಕ್ಷಕ ವೃಂದದವರು ಸೇರಿಕೊಂಡು ನಲಿಕಲಿ ಕೊಠಡಿಯನ್ನು ಬಹಳ ಸೃಜನಾತ್ಮಕವಾಗಿ ರೂಪಿಸಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಬಹಳ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸಲು ನಲಿಕಲಿ ಕೊಠಡಿಯನ್ನು ನಿರ್ಮಿಸಿದ್ದಾರೆ.
ಈ ಇಂಗ್ಲಿಷ್ ನಲಿಕಲಿ ಕೊಠಡಿಯ ಚಿತ್ರಣ ನಿಮ್ಮ ಮುಂದೆ.










