ಸುಂದರ ಪ್ರಪಂಚದಲ್ಲಿ ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡುತ್ತಿದ್ದ ನಾವುಗಳು ಕರೋನ ಮಹಾಮಾರಿಗೆ ಸಿಲುಕಿ ನೆಲೆ ಇಲ್ಲದ ನಡುಗಾಟದ ಜೀವನಕ್ಕೆ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ. ಅತ್ತ ಕಾಲೇಜಿನ ಸವಿ-ಸಡಗರ ಇಲ್ಲ, ಇತ್ತ ಮುಂದಿನ ಜೀವನದ ಸ್ಪಷ್ಟತೆ ಕಣ್ಣೆದುರಿಗಿಲ್ಲ. ಎಲ್ಲವೂ ಸರಿ ಇದ್ದಿದ್ದರೆ ಅಂತಿಮ ವರ್ಷದ ಪದವಿ ಮುಗಿಸಿ ಎಲ್ಲೋ ಒಂದು ಕಡೆ ನೆಲೆ ಕಂಡುಕೊಳ್ಳುತ್ತಾ ಇದ್ದೇವು. ಆದರೆ ಈ ಕಾಣದ ಕರೋನ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿ ಬಿಟ್ಟಿದೆ. ತರಗತಿ ಗೋಡೆಗಳ ಮಧ್ಯೆ ವಿದ್ಯಾರ್ಥಿ – ಉಪನ್ಯಾಸಕರ ಅವಿನಾಭಾವ ಸಂಬಂಧ ಕುದುರಿ ಅಂತರ್ಜಾಲದ ಮಡುವಿಗೆ ಸಿಲುಕಿ ಒಬ್ಬರನ್ನೊಬ್ಬರು ನೋಡುವಂತಹ ದಿನಮಾನ.
ಮಕ್ಕಳೇ ಎಲ್ಲರೂ ಸುಮ್ಮನೆ ಪಾಠ ಕೇಳಿ ಎನ್ನುವ ಕಾಲಘಟ್ಟ ಹೋಗಿ ಮಾತಾಡಿ ಮಕ್ಕಳೇ …. I am audible ಎನ್ನುವ ಉಪನ್ಯಾಸಕರ ಮಾತು. ಕೋಪ ಬಂದಾಗ ಮುಖ ತೋರಿಸಬೇಡಿ ಅಂತ ಗದರುತ್ತಿದ್ದ ಉಪನ್ಯಾಸಕರು ಇಂದು ಒಮ್ಮೆ ವಿಡಿಯೋ ಆನ್ ಮಾಡಿ ಅಂತಾ ಇದ್ದಾರೆ. ಎಲ್ಲವೂ ಬದಲಾಗಿವೆ. ಕಾರಿಡಾರ್ ನಲ್ಲಿ ನಿಂತು ಹರಟೆ ಹೊಡೆಯೋ ಹಾಗೆ ಇಲ್ಲ, ಪ್ರೆಂಡ್ಸ್ ಜೊತೆ ಗಲಾಟೆ ಇಲ್ಲ, ಗೆಳೆಯರೊಂದಿಗೆ ತಮಾಷೆ ಇಲ್ಲ, ಕ್ಲಾಸ್ ನಲ್ಲಿ ತರ್ಲೆ ಮಾಡೋ ಹಾಗಿಲ್ಲ, ಡೌಟ್ ಇದೆ ಮೇಡಂ ಅಂತ ಉಪನ್ಯಾಸಕರ ಬಳಿ ಓಡೋ ಹಾಗಿಲ್ಲ, ಕ್ಯಾಂಟೀನ್ ನಲ್ಲಿ ಕುಳಿತು ಹರಟೆ ಹೊಡೆಯೋ ಹಾಗೆ ಇಲ್ಲ, ಗ್ರೌಂಡ್ ನಲ್ಲಿ ಆಟವಂತೂ ಮೊದಲೇ ಇಲ್ಲ, ಗೇಲಿ ಮಾತುಗಳಿಲ್ಲ ಶಿಸ್ತಿನಿಂದ ನಡೆಯೋ ಕಾರ್ಯಕ್ರಮ ಇಲ್ಲ, ಕಾಲೇಜ್ ಡೇ ತಯಾರಿ, ಟ್ಯಾಲೆಂಟ್ ಡೇ ತರಾತುರಿ ಯಾವುದು ಇಲ್ಲ, ಸಂಭ್ರಮ- ಸಡಗರ, ಕಣ್ಣೀರು, ಹತಾಶೆ, ತಮಾಷೆ ಕಾಲೇಜು ಜೀವನದ ಅತಿ ಸುಂದರ ಕ್ಷಣಗಳಾವುದು ನಮ್ಮ ಪಾಲಿಗೆ ಇಲ್ಲ.
ಕೇವಲ ನನ್ನ ಮಾತು ಕೇಳುತ್ತಾ ಇದ್ಯ ಮಕ್ಕಳೇ, ಹೇಳಿದ್ದು ಅರ್ಥ ಆಯ್ತಾ ಮಕ್ಕಳೇ ಅನ್ನೋದ್ರಲ್ಲೇ ಎಲ್ಲಿ ಕಾಲೇಜು ಜೀವನ ಕೊನೆಯಾಗುತ್ತೋ ಎನ್ನುವ ಭಯ ಕಾಡುತ್ತಾ ಇದೆ. ನೆಟ್ವರ್ಕ್ ಇಲ್ಲದೆ ಊರೆಲ್ಲ ಅಲೆದಾಡೋ ವಿದ್ಯಾರ್ಥಿಗಳು ಒಂದೆಡೆಯಾದರೆ, ಕೇವಲ ಅರ್ಧ ಗಂಟೆಯ ತರಗತಿಗಾಗಿ ದಿನವಿಡೀ ಚಿಂತಿಸಿ ಏನೇ ಆದ್ರೂ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಲೇ ಬೇಕು ಎಂದು ಒದ್ದಾಡೋ ಉಪನ್ಯಾಸಕರು ಇನ್ನೊಂದೆಡೆ. ಕಾಲೇಜಿನ ಸಡಗರ ಮಿಸ್ ಮಾಡಿಕೊಳ್ತಾ ಇರೋ ವಿದ್ಯಾರ್ಥಿಗಳು ಆದರೆ ವಿದ್ಯಾರ್ಥಿಗಳನ್ನ ನೋಡದೆ ಹಂಬಲಿಸುತ್ತಿರುವ ಉಪನ್ಯಾಸಕರು ಮತ್ತೊಂದೆಡೆ. ದಿನ ಕ್ಲಾಸ್ ಮುಗಿಸುವಾಗಲು “Stay Home Stay Safe” ಮಕ್ಕಳೇ ಅನ್ನೋವಾಗ ಅವರಲ್ಲಿನ ಕಾಳಜಿ ಅರ್ಥವಾಗುತ್ತಾ ಇತ್ತು.
ಅದೇ ಕಾಲೇಜಿನಲ್ಲಿ ಇರಬೇಕಾದರೆ ಎಲ್ಲೋ ಹಾಸ್ಯಾಸ್ಪದ ಅನ್ನಿಸ್ತಾ ಇತ್ತು. ಬಹುಶಃ ಎಲ್ಲೋ ನಾವು ವಿದ್ಯಾರ್ಥಿಗಳ ಕಷ್ಟ ಹೇಳ್ತಾ ಇದಿವೆ ಹೊರತು ಉಪನ್ಯಾಸಕರ ಬಗ್ಗೆ ಸ್ವಲ್ಪವೂ ಯೋಚನೆ ಕೂಡ ಮಾಡ್ತಾ ಇಲ್ಲ . ಆನ್ಲೈನ್ ಕ್ಲಾಸ್ ಆದ್ರೂ ಸಮೇತ ಅಂತಿಮ ವರ್ಷದವರನ್ನ ದಡ ಸೇರಿಸಲು ಒದ್ದಾಡ್ತಾ ಇರೋದನ್ನ ನೋಡಿದ್ರೆ ಎಲ್ಲೋ ಒಂದು ಕಡೆ ನಮ್ಮ ಉಪನ್ಯಾಸಕರ ಬಗ್ಗೆ ಹೆಮ್ಮೆ ಅನಿಸುತ್ತೆ. ಪರದಾಟದ ಜೀವನದಲ್ಲಿ ನಮ್ಮನ್ನು ನಾವು ಕಳೆದು ಕೊಂಡ್ರು ಸಮೇತ ಮರಳಿ ಗೂಡಿಗೆ ಸೇರಿದ ಹಾಗೆ ಪುನಃ ಕಾಲೇಜು ದಿನವನ್ನು ಸಂಭ್ರಮಿಸುವ ಆಸೆ. ನಮ್ಮತನವನ್ನು ಅರಿವಾಗಿಸಿದವರ ಜೊತೆ ಸಮಯ ಕಳೆಯೋ ಆಸೆ. ಉಪನ್ಯಾಸಕರ ಜೊತೆ ಜೀವನದ ಹಾದಿ ಚರ್ಚಿಸೋ ಆಸೆ. ಯಾವಾಗ ಆ ಕ್ಷಣ ಸಮೀಪಿಸಿ ಕಾಲೇಜು ಮೆಟ್ಟಿಲು ಹತ್ತುತ್ತೇವೋ ನಾ ಅರಿಯೆ! ಆದರೆ ಆದಷ್ಟು ಬೇಗ ಆ ದಿನ ಮರುಕಳಿಸಲಿ ಎನ್ನುವುದೇ ನನ್ನ ಹಂಬಲ..
Stay Home Stay Safe
ಸುಪ್ರೀತಾ ಶೆಟ್ಟಿ, ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ