ಬಗ್ವಾಡಿ (ಜು, 4) : ಬೈಕ್ ಅಪಘಾತದಲ್ಲಿ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಬರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರನಿಗೆ ಸಹ್ರದಯಿ, ಸಮಾನ ಮನಸ್ಕರ ತಂಡವೊಂದು ಸಹಾಯ ಮಾಡಲು ಮುಂದಾಗಿದೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿರುವ ಕಲಾವಿದನಿಗೆ ಸುಸಜ್ಜಿತವಾದ ಮನೆಯೊಂದನ್ನು ನಿರ್ಮಿಸಿ ಕೊಡಲು “ಅಮ್ಮ ವೇದಿಕೆ” ಯೊಂದು ಸಜ್ಜಾಗಿದೆ.
ಆರ್ಥಿಕವಾಗಿ ಬಡತನದಲ್ಲಿರುವ ಈ ಕಲಾವಿದನ ಜೊತೆ ಅಜ್ಜಿ, ಅಮ್ಮ ಹಾಗೂ ಸಹೋದರ ವಾಸವಿದ್ದು, ಈ ಕುಟುಂಬಕ್ಕೆ ಮನೆಯೊಂದನ್ನು ನಿರ್ಮಿಸಿಕೊಡಲು ಬಗ್ವಾಡಿಯ ಗ್ರಾಮಸ್ಥರು ಸೇರಿದಂತೆ, ವಿವಿಧ ಕಡೆಗಳಿಂದ ಆಗಮಿಸಿದ ಸಹ್ರದಯಿ, ಸ್ವಯಂಸೇವಕರ ತಂಡ ಅಮ್ಮವೇದಿಕೆಯ ಹೆಸರಿನಡಿ ಇಂದು ಬಗ್ವಾಡಿ ಶ್ರೀ ಮಷಾಮರ್ದಿನಿ ಸಭಾಗ್ರಹದಲ್ಲಿ ಪ್ರಥಮ ಸಭೆ ಕರೆದು, ದಾನಿಗಳಿಂದ ಧನ ಸಹಾಯ ಸಂಗ್ರಹಿಸಿ ಈ ಫಲಾನುಭವಿ ಕುಟುಂಬಕ್ಕೆ ವಾಸ ಮಾಡಲು ಒಂದು ಸುಸಜ್ಜಿತ ವಸತಿಗೆ ಸೂರು ಕಟ್ಟಿಕೊಡಲು ನಿರ್ಣಯಿಸಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ಕೆಲವು ದಾನಿಗಳು ಹಾಗೂ ಸದಸ್ಯರು, ಗ್ರಾಮಸ್ಥರು ಹಾಗೂ ಯುವಕರು ಜೊತೆಗೂಡಿ ಸುಮಾರು 25/-ಸಾವಿರಕ್ಕಿಂತ ಹೆಚ್ಚು ಹಣವನ್ನು ಸಂಗ್ರಹಿಸಿ ಸಹಾಯ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಸಭೆಯ ನಂತರ ಸುಬ್ರಹ್ಮಣ್ಯರವರ ಮನೆಗೆ ಭೇಟಿ ನೀಡಿದ ಸ್ವಯಂಸೇವಕರು ವಸ್ತುಸ್ಥಿತಿಗಳನ್ನು ಪರಿಶೀಲಿಸಿ ಕಲಾವಿದನಿಗೆ ಹಾಗೂ ಆತನ ಮನೆಯವರನ್ನು ಮಾತನಾಡಿಸಿ, ಧೈರ್ಯ ತುಂಬಿ ಸಾಂತ್ವನ ಹೇಳಿದರು.