ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರು ಹಲವರು. ಅದರಲ್ಲೂ ನಿರಾಶ್ರಿತರು, ಕಡು ಬಡವರು, ವಲಸೆ ಕಾರ್ಮಿಕರು, ಭಿಕ್ಷುಕರು ಹೊಟ್ಟೆ ತುಂಬಿಸಿಕೊಳ್ಳಲು ಆಹಾರಕ್ಕಾಗಿ ಹಾಹಾಕಾರ ಪಟ್ಟಿದ್ದು ಅಷ್ಟಿಷ್ಟಲ್ಲ. ಈ ವಿಷಯವನ್ನು ಗಮನಿಸಿದ ಹಲವಾರು ಸಂಘ-ಸಂಸ್ಥೆಗಳು, ಕೊಡುಗೈದಾನಿಗಳು ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ನೀಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ಕೂಟರ್ ಏರಿ ಸಂಕಷ್ಟಕ್ಕೆ ಸಿಲುಕಿದವರಿರುವ ಸ್ಥಳಕ್ಕೆ ಭೇಟಿ ನೀಡಿ ಆಹಾರ ಪೊಟ್ಟಣಗಳನ್ನು ವಿತರಿಸಿ ಅದೆಷ್ಟೋ ಬಡಜನರ ಹಸಿವನ್ನು ನೀಗಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡಬೇಕೆನ್ನುವ ತುಡಿತವನ್ನು ಹೊಂದಿರುವ ಹಾಗೂ ಸಮಾಜಸೇವೆಯಲ್ಲಿ ಸಂತೃಪ್ತಿಯನ್ನು ಕಂಡುಕೊಂಡಿರುವ ಆ ವ್ಯಕ್ತಿಯೇ ಕುಂದಾಪುರದ ಶ್ರೀ ಸಾಯಿನಾಥ ಸೇಟ್. ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ತನ್ನದೇ ಸ್ಕೂಟರ್ ಏರಿ ಸಂಕಷ್ಟಕ್ಕೆ ಸಿಲುಕಿದವರನ್ನು ಹುಡುಕಿ ಅವರಿಗೆ ಸಹಾಯ ಹಸ್ತ ಚಾಚುವವರು ಈಗಿನ ಕಾಲದಲ್ಲಿ ತುಂಬಾ ಅಪರೂಪ.
ಸಾಯಿನಾಥ್ ಶೇಟರು ಕೇವಲ ಕುಂದಾಪುರ ಭಾಗದಲ್ಲಿ ಮಾತ್ರ ಅಲ್ಲದೆ ಅಂಕದಕಟ್ಟೆ, ಹಂಗಳೂರು, ಕೋಟೇಶ್ವರ, ಹೀಗೆ ವಿವಿಧ ಭಾಗಗಳಿಗೆ ತನ್ನ ಸ್ಕೂಟರಿನಲ್ಲಿ ಆಹಾರ ಪೊಟ್ಟಣಗಳನ್ನು, ತಂಪು ಪಾನೀಯಗಳನ್ನು, ಮೆಡಿಕಲ್ ಕಿಟ್ ಗಳನ್ನು ತುಂಬಿಸಿಕೊಂಡು ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಗಳನ್ನು ಗುರುತಿಸಿ, ಸ್ಥಳದಲ್ಲಿಯೇ ಆಹಾರವನ್ನು ವಿತರಿಸಿದ್ದಾರೆ. ಇವರ ಈ ಮಾನವೀಯ ನೆಲೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗಿದೆ.
ಲಾಕ್ಡೌನ್ ನಿಂದಾಗಿ ಮುಂದಿನ ದಿನಗಳಲ್ಲಿ ಆರ್ಥಿಕ ಅಡಚಣೆಗಳು ಬರಬಹುದು ಎಂದು ಕೆಲವರು ಕೂಡಿಟ್ಟ ಹಣವನ್ನು ಖರ್ಚು ಮಾಡಲು ಹಿಂಜರಿಯುವ ಈ ಕಾಲಘಟ್ಟದಲ್ಲಿ ತನ್ನ ದುಡಿಮೆಯ ಹಣದಿಂದಲೇ ತನ್ನ ಕೈಲಾದಷ್ಟು ಸಮಾಜಸೇವೆಯನ್ನು ಮಾಡುತ್ತಿರುವ ಶ್ರೀ ಸಾಯಿನಾಥ ಶೇಟ್ ರವರ ಸೇವಾ ಕಾರ್ಯ ನಿಜಕ್ಕೂ ಪ್ರಶಂಸನೀಯ ಹಾಗೂ ಅಭಿನಂದನಾರ್ಹ. ಸೂರ್ಯನಂತೆ ಪ್ರಕಾಶಿಸಲು ಸಾಧ್ಯವಾಗದಿದ್ದರೂ, ಮಿನುಗುವ ನಕ್ಷತ್ರದಂತಾದರೂ ನಾವಾಗಬೇಕು ಎನ್ನುವಂತಿದೆ ನಿಮ್ಮ ಈ ಸೇವಾಕಾರ್ಯ.
ನಿಮ್ಮ ಈ ನಿಸ್ವಾರ್ಥ ಸೇವೆಗೆ ಹ್ಯಾಟ್ಸ ಆಫ್ ಟು ಯು ಸರ್
ಕುಂದವಾಹಿನಿ ಬಳಗ