ಕುಂದಾಪುರ (ಜು, 27) : ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಘಟಕ ಆಶ್ರಯದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಜುಲೈ, 26 ರಂದು ಆಯೋಜಿಸಲಾಗಿತ್ತು. ನಿವ್ರತ್ತ ಸೈನಿಕ ರವಿಚಂದ್ರ ಶೆಟ್ಟಿ ತೆಕ್ಕಟ್ಟೆಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸೈನ್ಯದ ಸಿಕ್ಕಿಂ ಮತ್ತು ಸಿಯಾಚಿನ್ ದಿನಗಳನ್ನು ನೆನಪಿಸಿ ರೋಮಾಂಚಗೊಳಿಸಿದರು. ಸೈನ್ಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿಯೂ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ ಕಾರ್ಗಿಲ್ ಯುದ್ಧದ ಆ ಸಂದರ್ಭಗಳು ಮತ್ತು ಮತ್ತು ಆಗಿನ ದೇಶದ ಪರಿಸ್ಥಿತಿ ಬಗ್ಗೆ ಮಾತನಾಡಿದರು. ಆಪರೇಶನ್ ಸಫೇದ್ ಸಾಗರ್, ಆಪರೇಶನ್ ತಲ್ವಾರ್, ಆಪರೇಶನ್ ವಿಜಯ್ ಹೀಗೆ ಕ್ಷಿಪ್ರಗತಿಯಲ್ಲಿ ವಿರೋಧಿಗಳನ್ನು ಮೆಟ್ಟಿನಿಂತ ಭಾರತ ಸೈನ್ಯದ ಪರಾಕ್ರಮ ತಿಳಿಸಿದರು. ಯೋಗಿಂದರ್ ಸಿಂಗ್ ಯಾದವ್, ಸೌರಭ್ ಕಾಲಿಯಾ ಹೀಗೆ ಅನೇಕ ಸೈನಿಕರ ಸಾಹಸಗಾಥೆಗಳನ್ನು ಸ್ಮರಿಸುತ್ತ ವಿದ್ಯಾರ್ಥಿಗಳನ್ನು ಮಂತ್ರ ಮುಗ್ಧಗೊಳಿಸಿದರು.
ದೇಶ ಭಕ್ತಿ ಮತ್ತು ದೇಶಪ್ರೇಮ ಪ್ರತಿದಿನದ ನಮ್ಮ ಜೀವನದಲ್ಲಿ ಸದಾ ಜಾಗೃತವಾಗಿರಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎನ್ಸಿಸಿ ಕಮಾಂಡರ್ಗಳಾದ ಪ್ರಥ್ವಿರಾಜ್ ಮತ್ತು ನದಶ್ರೀ ಉಪಸ್ಥಿತರಿದ್ದರು. ಎನ್ಸಿಸಿ ಅಧಿಕಾರಿ ಶಿವರಾಜ್ ಸಿ. ಸ್ವಾಗತಿಸಿದರು, ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಪ್ರಾರ್ಥಿಸಿದರು, ಉಪನ್ಯಾಸಕಿ ಸೌಮ್ಯ ಕುಂದರ್ ನಿರೂಪಿಸಿ ವಂದಿಸಿದರು.