ಮಾನವೀಯ ಮೌಲ್ಯಗಳ ಪುನರುತ್ಥಾನ ಎಂಬ ವಿಷಯದೊಂದಿಗೆ ಶ್ರೀ ವಿವೇಕಾನಂದ ಹೆಚ್. ಜಿ ಯವರು ಬೀದರ್ ಜಿಲ್ಲೆಯ ವನಮಾರ್ಪಳ್ಳಿಯಿಂದ ನವೆಂಬರ್, 1 ರಂದು ಹೊರಟು ಸುಮಾರು 8 ಸಾವಿರ ಕಿಲೋಮೀಟರ್ ಪಾದಯಾತ್ರೆಗೈಯುತ್ತ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ನೇಹಿತರ ಸರಳ ಆತಿಥ್ಯವನ್ನು ಸ್ವೀಕರಿಸಿ, ಆಶ್ರಯವನ್ನು ಪಡೆದು ರಾಜ್ಯದಾದ್ಯಂತ ಮಾನವೀಯ ಮೌಲ್ಯಗಳ ಕುರಿತಾಗಿ ಅರಿವು ಮೂಡಿಸುತ್ತಿದ್ದಾರೆ.
ಇವರ ಪಾದಯಾತ್ರೆ ಜುಲೈ,26 ರಂದು ಬೈಂದೂರಿನ ನಾವುಂದಕ್ಕೆ ಬಂದು ತಲುಪಿದ ಸಂದರ್ಭದಲ್ಲಿ ಬೈಂದೂರಿನ ಜನತೆಯ ವತಿಯಿಂದ ಪ್ರೀತಿಪೂರ್ವಕವಾಗಿ ಇವರನ್ನು ಸ್ವಾಗತಿಸಿಕೊಂಡಿದ್ದಾರೆ.
ಜನರು ಜೀವನದಲ್ಲಿ ಮಾನವೀಯ ಮೌಲ್ಯಗಳಿಂದ ದೂರ ಹೋಗುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಯುವ ಪೀಳಿಗೆಗೆ ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಬೇಕು ಎನ್ನುವುದು ವಿವೇಕಾನಂದ ಹೆಚ್.ಜಿ ರವರ ಪಾದಯಾತ್ರೆಯ ಉದ್ದೇಶವಾಗಿದ್ದು, ಸಮಾಜವನ್ನು ನಮ್ಮಿಂದ ಸಂಪೂರ್ಣವಾಗಿ ತಿದ್ದಲಾದಿದ್ದರೂ ನಮ್ಮಿಂದಾದಷ್ಟು ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಜನರು ತಮ್ಮ ಸ್ವಾರ್ಥ, ಅತಿಯಾದ ಬಯಕೆಗಳಿಂದಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣ, ವೈದ್ಯಕೀಯ ಕಾನೂನು, ವ್ಯಾಪಾರ, ಮಾಧ್ಯಮ, ರಾಜಕೀಯ, ಮಠ ಹೀಗೆ ಸಮಾಜದ ವಿವಿಧ ಕ್ಷೇತ್ರಗಳು ಮಾನವೀಯ ಮೌಲ್ಯದಿಂದ ದೂರ ಸರಿಯುತ್ತಿದೆ. ಜನರಿಂದ ಮಾನವೀಯ ಮೌಲ್ಯಗಳು ದೂರ ಸರಿಯುತ್ತ ಹೋದಲ್ಲಿ ಮುಂದೊಂದು ದಿನ ಭ್ರಷ್ಟಾಚಾರ, ಅನಾಚಾರದಿಂದಾಗಿ ಇಡೀ ಮಾನವ ಕುಲಕ್ಕೆ ಕಂಟಕವಾಗುವ ಮನಃಸ್ಥಿತಿಗಳು ಜನರಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ.
ಮಾನವೀಯ ಮೌಲ್ಯಗಳು ದೂರವಾಗುತ್ತಾ ಹೋದಂತೆ ಉತ್ತಮ ಸಮಾಜ ನಿರ್ಮಾಣವಾಗಲು ಎಂದಿಗೂ ಸಾಧ್ಯವಿಲ್ಲ ಮತ್ತು ಆ ಸಮಾಜದಲ್ಲಿ ಬದುಕುವ ಯಾವ ವ್ಯಕ್ತಿಯೂ ಉತ್ತಮ ನಾಗರಿಕನಾಗಲು ಸಾಧ್ಯವಿಲ್ಲ.
ಇಂದಿನ ಯುವ ಪೀಳಿಗೆಗಳು ದಾರಿ ತಪ್ಪುವಂತಹ ಮಾರ್ಗಗಳು ಈ ಸಮಾಜದಲ್ಲಿ ಸೃಷ್ಟಿಯಾಗಿದೆ. ಆದ್ದರಿಂದ ಯುವ ಪೀಳಿಗೆಯಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎನ್ನುವುದು ವಿವೇಕಾನಂದ ಸರ್ ರವರ ಆಸೆ.
ಇಡೀ ಸಮಾಜವನ್ನು ನಮ್ಮಿಂದ ತಿದ್ದಲು ಸಾಧ್ಯವಿಲ್ಲ ಆದರೆ ಆ ನಿಟ್ಟಿನಲ್ಲಿ ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ನಮ್ಮಿಂದಲೇ ಮೊದಲ ಬದಲಾವಣೆ ಪ್ರಾರಂಭವಾಗಬೇಕು, ನಮ್ಮ ಬದುಕನ್ನು ಆದರ್ಶವಾಗಿಟ್ಟು ನಮ್ಮವರ ಬದುಕನ್ನು ಹಸನಾಗಿಸುವ ಪ್ರಯತ್ನವನ್ನು ಮಾಡಬೇಕು ಅವರಲ್ಲಿ ಕೂಡ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎಂದು ವಿವೇಕಾನಂದ ಸರ್ ಅವರು ಹೇಳುತ್ತಾರೆ.
ವೃತ್ತಿಯಲ್ಲಿ ಜಾಹೀರಾತು ತಯಾರಕರಾಗಿರುವ ವಿವೇಕಾನಂದರವರು ಜರ್ನಲಿಸಂನಲ್ಲಿ ಪದವಿ ಪಡೆದವರು . ಎಲ್ಲದರಿಂದ ಹೊರಬಂದು ಇಂತಹ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಜುಲೈ, 26 ರಂದು ಬೈಂದೂರಿಗೆ ಬಂದ ಅವರನ್ನು ಬೈಂದೂರಿನ ಮಾದರಿ ಶಾಲೆಯ ಶಿಕ್ಷಕ ವೃಂದ ಪ್ರೀತಿಯಿಂದ ಸ್ವಾಗತಿಸಿಕೊಂಡರು. ಎಷ್ಟೋ ಜನ ಯುವ ಪೀಳಿಗೆಗಳು ಶಿಕ್ಷಕರನ್ನು ದಾಟಿ ಮುಂದಿನ ಸಮಾಜಕ್ಕೆ ಕಾಲಿಡುತ್ತಾರೆ ಇದರಿಂದಾಗಿ ಶಿಕ್ಷಕರು ಮೂಲಕವೇ ಮಾನವೀಯ ಮೌಲ್ಯಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜುಲೈ, 25 ರಂದು ಕುಂದಾಪುರ ಭಾಗದ ಪಾದಯಾತ್ರೆಯಲ್ಲಿ ಅವರೊಂದಿಗೆ ನಾನೂ ಕೂಡ ಜೊತೆಯಾದೆ, ಅವರಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆ. ಹೊಸ ಅನುಭವವೊಂದು ನನ್ನ ಪಾಲಿಗೆ ದೊರಕಿದಂತಾಯಿತು. ಕುಟುಂಬದ ಸದಸ್ಯರನ್ನು ಒಂದಿಷ್ಟು ಜನ ಸ್ನೇಹಿತರನ್ನು ಗಣ್ಯರನ್ನು ಅವರೊಂದಿಗೆ ಸೇರಿ ಭೇಟಿ ಮಾಡುವುದರ ಮೂಲಕ ರಾತ್ರಿಯ ತನಕ ಅವರೊಂದಿಗೆ ಕಳೆದ ಒಂದು ದಿನ ಜೀವನದಲ್ಲಿ ಮರೆಯಲಾಗದ ದಿನಗಳಲ್ಲಿ ಒಂದು ದಿನವಾಯಿತು.
ಲೇಖನ:ಮಾರುತಿ ಟಿ.ಡಿ ಬೈಂದೂರು