ಉಡುಪಿ ಪರ್ಯಾಯ 2020-21 ಅದಮಾರು ಮಠದ ಶ್ರೀ ಶ್ರೀ ಈಶಪ್ರೀಯತೀರ್ಥ ಶ್ರೀಪಾದರು ಕೊಡಮಾಡಿದ ಶ್ರೀ ಕ್ರಷ್ಣಾನುಗ್ರಹ ಪ್ರಶಸ್ತಿಯನ್ನು ಜನವರಿ 17, 2021 ರಂದು ಉಡುಪಿ ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಎಮ್ ಶಿವರಾಮ್ ಕೋಟ ರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಯ ಗೌರವ ಸಲಹೆಗಾರರಾದ ವಿಠ್ಠಲ ಕರ್ಕೇರಾ ಮತ್ತು ಕೋಟೇಶ್ವರ ಘಟಕಾಧ್ಯಕ್ಷ ರವೀಶ್ ಎಸ್. ಕೊರವಡಿ ಉಪಸ್ಥಿತರಿದ್ದರು.
ಇಡೀ ಜಗತ್ತೇ ಕೊರೋನಾ ಮಾಹಾಮಾರಿಯಿಂದ ಕಂಗೆಟ್ಟಾಗ ಉಡುಪಿಯಲ್ಲಿ ಜಿಲ್ಲಾಡಳಿತದ ಕೋರಿಕೆ ಮೇರೆಗೆ ನಾಡೋಜ ಡಾ. ಜಿ. ಶಂಕರ್ ರವರ ಮಾರ್ಗದರ್ಶನದಲ್ಲಿ ಕೋವಿಡ್ ಅಧಿಕಾರಿಗಳಿಂದ ತರಬೇತಿಯನ್ನು ಪಡೆದ ಮೊಗವೀರ ಸಂಘಟನೆಯ 30 ಸ್ವಯಂಸೇವಕರ ಯುವ ಪಡೆಯು ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೋವಿಡ್-19 ನಿಂದ ಮ್ರತಪಟ್ಟ ಸುಮಾರು 150ಕ್ಕೂ ಅಧಿಕ ಜನರ ಅಂತ್ಯಕ್ರಿಯೆಯನ್ನು ಯಾವುದೇ ಜಾತಿ, ಮತ ಬೇಧವಿಲ್ಲದೇ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನೆರವೇರಿಸಿ ಗೌರವಕ್ಕೆ ಪಾತ್ರರಾಗಿ, ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದ ಮೊಗವೀರ ಯುವ ಸಂಘಟನೆ(ರಿ)ಉಡುಪಿ ಸರ್ವರ ಪ್ರಶಂಸೆಗೆ ಪಾತ್ರವಾಗಿತ್ತು . ಜಿಲ್ಲೆಯಲ್ಲಿ ತೀವ್ರ ರಕ್ತದ ಕೊರತೆಯುಂಟಾದಾಗ ಸಂಘಟನೆಯ ವಿವಿಧ ಘಟಕಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಕೋವಿಡ್ ನಿಯಮ ಪಾಲನೆಯೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಲ್ಲದೇ, ಉಡುಪಿ, ಕುಂದಾಪುರ, ಮಂಗಳೂರು, ಶಿವಮೊಗ್ಗ, ಕಾರವಾರ, ಶ್ರಂಗೇರಿ ಮೊದಲಾದ ಭಾಗಗಳಲ್ಲಿರುವ ಸುಮಾರು 52,200 ಆರ್ಥಿಕ ದುರ್ಬಲ ಕುಟುಂಬಗಳ ಎರಡುವರೆ ಲಕ್ಷ ಜನ ಫಲಾನುಭವಿಗಳಿಗೆ ಜಿ. ಶಂಕರ್ ಅರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸುವಲ್ಲಿ ಅವಿರತವಾಗಿ ಶ್ರಮಿಸಿ ಜನ ಮನ್ನಣೆಗಳಿಸಿದೆ.ಹಾಗೆಯೇ ಶ್ರೀ ಕ್ರಷ್ಣ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಪ್ರತೀ ಪರ್ಯಾಯೋತ್ಸವಗಳಲ್ಲಿಯೂ ಹೊರೆಕಾಣಿಕೆ, ಮೆರವಣಿಗೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯ ಸಭಾಗವಹಿಸುವಿಕೆಯನ್ನು ಗುರುತಿಸಿ ಮೊಗವೀರ ಯುವ ಸಂಘಟನೆಯನ್ನು ಸನ್ಮಾನಿಸಿ ಶ್ರೀಶ್ರೀ ಶ್ರೀ ಈಶಪ್ರೀಯತೀರ್ಥ ಶ್ರೀಪಾದರು ಕ್ರಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸದರು.
ಇದೇ ವೇದಿಕೆಯಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಛಿಲ. ಮತ್ತು ಮಲ್ಪೆ ಮೀನುಗಾರ ರ ಸಂಘವನ್ನೂ ಗೌರವಿಸಲಾಯಿತು. . ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯಾ ಸಿ. ಕೋಟ್ಯಾನ್ ಅವರು ಪ್ರಶಸ್ತಿ ಸ್ವೀಕರಿಸಿದರು. ಮಲ್ಪೆ ಮೀನುಗಾರರ ಸಂಘದ ಪರವಾಗಿ ಶ್ರೀಯುತ ಕ್ರಷ್ಣ ಸುವರ್ಣ ಪ್ರಶಸ್ತಿಯನ್ನು ಸ್ವೀಕರಿಸಿದರು.