ಈಗೀಗ ಮನದೊಳಗಿನ ಭಾವನೆಗಳು
ನಾಲ್ಗೆಗೆ ಬರಲು ಹೆದರುತ್ತವೆ
ಎಲ್ಲರೂ ಬೇಲಿಹಾಕಿಕೊಂಡು ಬಿಟ್ಟಿದ್ದಾರೆ
ಮನದೊಳಗೂ, ಮೆದುಳೊಳಗೂ
ಪ್ರತಿ ನುಡಿಯಲ್ಲೂ ಏನಾದರೊಂದು ಲೋಪ
ಕೊಂಕಿರಬಹುದು ಎಂದೇ ಹುಡುಕುವವರಿದ್ದಾರೆ
ಮೌನವಾಗಿದ್ದರೆ….
ಮೌನವೇ ಜ್ವಾಲಾಮುಖಿಲಾಗಿ
ಲಾವಾರಸ ಉಕ್ಕಿ ಮಾತುಗಳನ್ನೇ ಬಲಿಹಾಕಿಬಿಡಬಹುದು
ಯಂತ್ರವಾಗಬೇಕು, ರೋಬೋವೇ ಆಗಿಬಿಡಬೇಕು
ಕೃತಕತೆ ತುಂಬಿದ ವಾಕ್ಯಗಳನ್ನು ಒಳ ತೂರಿಸಿ
ಮತ್ತೆ ಮತ್ತೆ ಎಲ್ಲರಿಗೂ ಖುಷಿನೀಡುವ
ಅದೇ ಸಾಲು, ಸುಳ್ಳಿನ ಸಾಲುಗಳನ್ನು
ಕ್ಲೀಷೆಯಾಗುವವರೆಗೆ ಕೇಳಿಸುತ್ತಲೇ ಇರಬೇಕು
ತುಟಿಬಿರಿದು ಹಳದಿಯಂಟಿದ ಹಲ್ಲುಗಳನ್ನು
ತೋರಿಸಿ ಧನ್ಯರಾಗಿಬಿಡುತ್ತಾರೆ
ಆರೇಳಿಂಚಗಲದ ಸ್ಮಾರ್ಟ್ ಫೋನ್ ಪರದೆಯೂಳಗೆ
ಮುಖ ಹುದಿಗಿಸಿ ಹೂಂ ಗಟ್ಟುತ್ತಾರೆ
ಕಾಫಿ ಕುಡಿಯುವಾಗಲೂ, ಊಟಮಾಡುವಾಗಲೂ
ಮಾತುಗಳೆಲ್ಲ ಹಾಗೇ ತೇಲಿಹೋಗಿಬಿಡುತ್ತವೆ
ಮಾತುಗಳೇ ಮೇಲೇರಿ ಮೋಡಗಳಾಗಿ
ಘನೀಕರಿಸಿ, ಕರಗಿ ಧೋ…ಎಂದು
ಸುರಿಯುವಂತಿದ್ದರಾಗುತ್ತಿತ್ತು…
ಬಹುಶಃ ಮಾತನಾಡಲು ಕುರುಡಾಗಬೇಕು
ಕೇಳಿಸಿಕೊಳ್ಳಲು ಮೂಗರಾಗಬೇಕು
***
ನಾಳೆಯೊ.. ನಾಡಿದ್ದೋ ಘೋಷಣೆಯಾಗುತ್ತದೆ
“ಮಾತನಾಡುವ ಪದಗಳಿಗೆ ಲಕ್ಷ ಲಕ್ಷ ಕೊಡುಗೆ”
ಎಲ್ಲರೂ ಮಾತನಾಡುತ್ತಾರೆ
ಪದಗಣನೆಗೆ ಎಲ್ಲರೂ ಕೇಳಿಸಿಕೊಳ್ಳುತ್ತಾರೆ
ಆದರೆ
ಪದಗಳಿಗರ್ಥವಿರುವುದಿಲ್ಲ…..
ಪದಗಳಿಗೆ ಅರ್ಥ ಇರುವುದೇ ಇಲ್ಲ…….

ಕಿಗ್ಗಾಲು ಜಿ. ಹರೀಶ್










