ಉಡುಪಿ (ಆ, 6) : ಆರ್ಥಿಕ ನಷ್ಟದಿಂದ ಮನನೊಂದು ಗುರುವಾರ ತಡರಾತ್ರಿ ಕುರ್ಕಾಲುನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕೃಷ್ಣ ಭಟ್ ರವರನ್ನು ಆಪದ್ಬಾಂಧವ ಈಶ್ವರ್ ಮಲ್ಪೆ ಹಾಗೂ ಸತ್ಯದ ತುಳುವೆರ್ ಬಳಗದವರು ರಕ್ಷಿಸಿದ್ದಾರೆ. ಉಡುಪಿ ರಥಬೀದಿಯ ಹೋಟೆಲೊಂದರ ಮಾಲೀಕರಾಗಿದ್ದ ಕುಕ್ಕಿಕಟ್ಟೆಯ ಬಾಲಕೃಷ್ಣ ಭಟ್ ಕೋವಿಡ್ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ್ದರು. ಆರ್ಥಿಕ ನಷ್ಟದ ಕಾರಣದಿಂದ ಮನನೊಂದು ಕುರ್ಕಾಲು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸುದ್ದಿ “ಆಪದ್ಬಾಂಧವ” ಈಶ್ವರ್ ಮಲ್ಪೆ ತಂಡಕ್ಕೆ ತಿಳಿದ ಕೂಡಲೇ ಈಶ್ವರ್ ಮಲ್ಪೆ ತನ್ನ ತಂದೆಯ ಆನಂದ್ ಪುತ್ರನ್ ರವರ ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ತೆರಳಿದ್ದರೂ, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬಾಲಕೃಷ್ಣ ಭಟ್ಟರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಾಲಕೃಷ್ಣ ಭಟ್ಟರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾತಿಗೆ ಸಿಕ್ಕ ಈಶ್ವರ್ ಮಲ್ಪೆ ತಡರಾತ್ರಿ ತುಂಬಾ ಕಷ್ಟಪಟ್ಟು ನಾನು ಮತ್ತು ನನ್ನ ತಂಡ ಜೊತೆಗೆ “ಸತ್ಯದ ತುಳುವೆರ್” ಬಳಗದ ಪೂರ್ಣ ಸಹಾಯದಿಂದ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡೆವು, ನಮ್ಮ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಯಾಗಿದ್ದು ಒಂದು ಜೀವವನ್ನು ರಕ್ಷಿಸಿರುವ ನೆಮ್ಮದಿ ನಮಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ : ಈಶ್ವರ ಸಿ ನಾವುಂದ.