ಕರ್ನಾಟಕದ ಹರಿದಾಸಭಕ್ತ ಶ್ರೇಷ್ಟರಲ್ಲಿ ಒಬ್ಬರಾಗಿದ್ದ ಕನಕದಾಸರು ರಣರಂಗದಕಲಿ, ಜನಪ್ರಿಯದೊರೆ, ಸಮರ್ಥ ಆಡಳಿತಗಾರ, ಕವಿ, ಸಂತ, ಕೀರ್ತನಾಕಾರ, ಸಂಗೀತಗಾರ, ವಿಚಾರವಂತ ಮತ್ತು ಸಮಾಜ ಸುಧಾರಕರಾಗಿದ್ದರು.
ದಾಸ ಪರಂಪರೆಯಲ್ಲಿ ಬರುವ 250 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರೆಂಬುದು ನಿಜಕ್ಕೂ ಹೆಗ್ಗಳಿಕೆಯೇ. ಇವರು ಪುರಂದರದಾಸರ ಸಮಕಾಲೀನರು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಕಾಗಿನೆಲೆಯ ಸಮೀಪದ ‘ಬಾಡ’ ಎಂಬ ಗ್ರಾಮದಲ್ಲಿ (ಈಗ ಹಾವೇರಿ ಜಿಲ್ಲೆಸಿಗ್ಗಾವಿ ತಾಲ್ಲೂಕಿನ ಬಾಡ) ಬೀರಪ್ಪನಾಯಕ ಮತ್ತು ಬಚ್ಚಮ್ಮ ಕುರುಬ ದಂಪತಿಗಳ ಮಗನಾಗಿ 1509ರಲ್ಲಿ ಜನಿಸಿದರು. ಈ ದಂಪತಿಗಳಿಗೆ ಬಹುಕಾಲ ಮಕ್ಕಳಿಲಿಲ್ಲದಿದ್ದಾಗ ತಿಮ್ಮಪ್ಪನ ಕೃಪೆಯಿಂದ ಹುಟ್ಟಿದ ಮಗನಿಗೆ ‘ತಿಮ್ಮಪ್ಪ’ ಎಂದು ಹೆಸರಿಟ್ಟರು.
ಒಂದು ದಿನ ತಿಮ್ಮಪ್ಪ ಮನೆಕಟ್ಟಲು ಭೂಮಿ ಅಗೆಯುತ್ತಿದ್ದಾಗ ನಿಧಿ(ಕನಕ) ದೊರೆಯಿತು.ಈ ನಿಧಿಯನ್ನು ತಾನೇ ಇಟ್ಟುಕೊಳ್ಳದೆ ಬಡಬಗ್ಗರಿಗೆ ಹಂಚಿದ ಕಾರಣಕ್ಕಾಗಿ ತಿಮ್ಮಪ್ಪನಿಗೆ ‘ಕನಕನಾಯಕ ಎಂಬ ಹೆಸರು ಬಂತು.
ವಿಜಯನಗರದ ಸಾಮ್ರಾಜ್ಯದ ದೊರೆ ವೀರ ನರಸಿಂಹ ಕನಕನಾಯಕನನ್ನು ಬಂಕಾಪುರ ಪ್ರಾoತ್ಯಕ್ಕೆ ದಂಡನಾಯಕನನ್ನಾಗಿ ನೇಮಿಸಿದ. ವಿಜಯನಗರದ ಪ್ರಸಿದ್ಧ ಅರಸ ಕೃಷ್ಣದೇವರಾಯ ಮತ್ತು ಬಿಜಾಪುರದ ಅರಸ ಆದಿಲ್ಷಹನೊಂದಿಗೆ ನಡೆದ ರಾಯಚೂರು ಕದನದಲ್ಲಿ ಕನಕನಾಯಕ ಶತ್ರುವಿನ ಹೊಡೆತಕ್ಕೆ ಸಿಕ್ಕಿ ಅರೆಜೀವವಾಗಿ ಬಿದ್ದಿದ್ದ. ಆ ಸಂದರ್ಭದಲ್ಲಿ ದಿವ್ಯಾನುಭವವಾಯಿತು. ಸ್ವಪ್ನದಲ್ಲಿ ಕಾಣಿಸಿಕೊಂಡ ಆದಿಕೇಶವನು “ನೀನು ಹರಿದಾಸನಾದರೆ, ನೋವೆಲ್ಲಾ ಮಾಯವಾಗುತ್ತದೆ” ಎಂದು ಆದೇಶಿಸಿದನಂತೆ. ಹಾಗಾಗಿ ಕನಕನಾಯಕ ಕನಕದಾಸರಾಗಿ ಪರಿವರ್ತನೆಗೊಂಡರು.
ಕನಕದಾಸರು ಶ್ರೀಕೃಷ್ಣ ದರ್ಶನಾರ್ಥವಾಗಿ ಉಡುಪಿಗೆ ಹೋದರು. ಆದರೆ ಅವರು ಬ್ರಾಹ್ಮಣರಲ್ಲದ ಕಾರಣಕ್ಕೆ ದೇವಾಲಯದ ಪ್ರವೇಶ ಲಭ್ಯವಾಗಲಿಲ್ಲ. ಆಗ ಖಿನ್ನ ಮನಸ್ಕರಾದ ಕನಕದಾಸರು ದೇವಸ್ಥಾನದ ಗರ್ಭಗೃಹದ ಹಿಂಬದಿಗೆ ಹೋಗಿ “ದೇವರೇ ದರ್ಶನವ ಕೊಡು” ಎಂದು ವಿಧವಿಧವಾಗಿ ಪಾರ್ಥಿಸಿದರು. ಆಗ ಕ್ಷಣ ಮಾತ್ರದಲ್ಲೇ ಹಿಂಭಾಗದ ಗೋಡೆ ಒಡೆಯಿತು. ಪೂರ್ವಾಭಿಮುಖವಾಗಿ ನಿಂತಿದ್ದ ಶ್ರೀಕೃಷ್ಣನ ವಿಗ್ರಹ ಪಶ್ಚಿಮಕ್ಕೆ ತಿರುಗಿತು. ಪರಮಾತ್ಮನ ದರ್ಶನದಿಂದ ದಾಸರು ಧನ್ಯರಾದರು. ದೇವಸ್ಥಾನದ ಗೋಡೆಯ ಈ ಕಿಂಡಿಯನ್ನು ಇಂದಿಗೂ ಕನಕನ ಕಿಂಡಿ’ ಎಂದು ಜನರು ಕರೆಯುತ್ತಾರೆ.
ಶ್ರೀವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದ ಕನಕದಾಸರು ದಾಸ ಸಾಹಿತ್ಯದಲ್ಲಿ ಮೇರು ಪರ್ವತದ ವ್ಯಕ್ತಿತ್ವ ಮತ್ತು ವೈಶಿಷ್ಟತೆಯನ್ನು ಹೊಂದಿದ್ದರು . ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ . ಮೋಹನ ತರಂಗಿಣಿ ,ನಳ ಚರಿತ್ರೆ ,ರಾಮಧಾನ್ಯ ಚರಿತೆ ,ಹರಿಭಕ್ತಸಾರಾವೆಂಬ ಕೃತಿಗಳನ್ನು ರಚಿಸಿ ಸಾಹಿತ್ಯಲೋಕಕ್ಕೆ ನೀಡಿದ್ದಾರೆ. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾಗಿದ್ದ ಕನಕದಾಸರು 316 ಕೀರ್ತನೆಗಳನ್ನು ಕಾಗಿನೆಲೆಯ
ಆದಿಕೇಶವರಾಯನ ಅಂಕಿತದಲ್ಲಿ ರಚಿಸಿದ್ದಾರೆ.
ಕುಲಕುಲವೆಂದು ಹೊಡೆದಾಡದಿರಿ,
ನಿಮ್ಮ ಕುಲದ ನೆಲೆಯನ್ನಾದರೂ ಬಲ್ಲಿರಾ?
ಆತ್ಮ ಯಾವ ಕುಲ? ಜೀವ ಯಾವ ಕುಲ?
ಪಂಚೇಂದ್ರಿಯಗಳ ಕುಲವ ಪೇಳಿರಯ್ಯ
ಜಪವ ಮಾಡಿದರೇನು? ತಪವ ಮಾಡಿದರೇನು?
ಕಪಟ ಗುಣ ವಿಪರೀತವಿದ್ದವನು.
ಸತ್ಯವಂತರ ಸಂಘವಿರಲು ತೀರ್ಥವೇತಕ್ಕೆ,
ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ,
ತಾನು ಉಣ್ಣದ, ಪರರಿಗೆ ಇಕ್ಕದ ಧನವಿದ್ದೇತಕೆ,
ಮಾನಹೀನನಾಗಿ ಬಾಳ್ವ ಮನುಜನೇತಕೆ.
ಸತ್ಯ ಧರ್ಮಗಳೆಲ್ಲ ಎತ್ತಾ ಹೋದವೋ ಕಾಣೆ,
ಉತ್ತಮರ ಜೀವನಕ್ಕೆ ದಾರಿ ಇಲ್ಲ.
ನಿತ್ಯದಲ್ಲಿ ಕಳವು, ವ್ಯಭಿಚಾರವುಳ್ಳವರೆಲ್ಲಾ
ಅರ್ಥ ಸಂಪನ್ನ ಭೋಗ ಭಾಗ್ಯವನ್ನು ಅನುಭವಿಸುತ್ತಿರುವರು.
ಹೀಗೆ ಬದುಕಿನ ಸತ್ಯ, ಸತ್ವ ಮತ್ತು ಸಾರವನ್ನು ಸರಳಗನ್ನಡದಲ್ಲಿ ತೆರೆದಿಟ್ಟು, ಮನುಕುಲದ ಒಳಗಣ್ಣನ್ನು ತೆರೆಸಿ ಕನ್ನಡಿಗರಿಗೆ ಕಲ್ಲುಸಕ್ಕರೆಯ ಅಭಿರುಚಿಯನ್ನು ನೀಡಿದ್ದಾರೆ. ಸಾಮಾಜಿಕ & ಧಾರ್ಮಿಕ ಮೌಡ್ಯಗಳನ್ನು ಖಂಡಿಸಿ ಸುಧಾರಣೆಗೆ ದಾರಿ ಮಾಡಿದರಲ್ಲದೇ, ದಾಸ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ‘ದಾಸರ ದಾಸ’ ‘ಹೊಸಗನ್ನಡ ಸಾಹಿತ್ಯದ ಕೋಗಿಲೆ,’ ‘ದಾಸ ಸಾಹಿತ್ಯಬನದ ಕೋಗಿಲೆ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಜ್ಞಾನದ ಜ್ಯೋತಿ ಬೆಳಗುತ್ತಾ, ವಿಶ್ವ ಮಾನವ ಕಲ್ಪನೆಯ ಮೇಲೆ ವಿಶ್ವ ಕುಟುಂಬವನ್ನು ಸ್ಥಾಪಿಸಲು ಪ್ರಯತ್ನಿಸಿದ ಮಹಾನ್ ಮಾನವತವಾದಿ ಕನಕದಾಸರ ಜೀವನ ಮೌಲ್ಯ ಆದರ್ಶ ಮತ್ತು ಚಿಂತನೆಗಳು ಸರ್ವಕಾಲಿಕ ಮೌಲ್ಯಗಳಾಗಿವೆ. ಮೌಲ್ಯಗಳು ಮಾಯವಾಗಿ ಸ್ವಾರ್ಥವೇ ಬದುಕಿನ ಪ್ರಧಾನ ಆಶಯವಾಗಿರುವ ಹಾಗೂ ಹಣ ಮತ್ತು ಅಧಿಕಾರಕ್ಕಾಗಿ ಹಾತೊರೆಯುವ ಈ ಕಾಲಘಟ್ಟದಲ್ಲಿ ಕನಕದಾಸರು ಶ್ರೇಷ್ಠರೆನಿಸುತ್ತಾರೆ. ಇವರ ತ್ಯಾಗ, ನಿಸ್ವಾರ್ಥ ಸೇವೆ, ಸಮಾನತೆಯ ಭಾವ ಮತ್ತು ಆದರ್ಶದ ಆಲೋಚನೆಗಳು ನಾಡಿನ ಭವಿಷ್ಯವಾಗಿರುವ ಯುವಕರಲ್ಲಿ ಮೂಡಿಬಂದರೆ ಅದುವೇ ಕನಕ ಜಯಂತಿಯ ಸಾರ್ಥಕ ಆಚರಣೆ.
ಜೆ. ಆರ್ . ಕೇಶವಮೂರ್ತಿ ಉಪನ್ಯಾಸಕರು ಬೆ೦ಗಳೂರು