ಬೈಂದೂರು(ಡಿ.28): ರಾಜ್ಯ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ, ಬೈಂದೂರು ಪ.ಪಂ. ಉಡುಪಿ ಜಿಲ್ಲೆ ಹಾಗೂ ತಾಲೂಕು ಆಡಳಿತ ಕಚೇರಿ ಬೈಂದೂರು ಇವರ ವತಿಯಿಂದ ಬೈಂದೂರು ರೋಟರಿ ಭವನದಲ್ಲಿ ಡಿ.27 ರಂದು ನಡೆದ 2021-22ನೇ ಸಾಲಿನ ಎಸ್.ಎಫ್.ಸಿ. ಅನುದಾನದಡಿಯಲ್ಲಿ ಫಲಾನುಭವಿಗಳಿಗೆ ಸಹಾಯಧನ ಚೆಕ್ ನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ವಿತರಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ರಾಜ್ಯ ಸರ್ಕಾರ ಮತ್ತು ಸಂಸದರ ವಿಶೇಷ ಪ್ರಯತ್ನದಿಂದ ಬೈಂದೂರು ಕ್ಷೇತ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ ಅತ್ಯಧಿಕ ಅನುದಾನ ದೊರೆತಿದ್ದು ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.ಕೋವಿಡ್ ನಿಂದಾಗಿ ಮೃತಪಟ್ಟವರ ಕುಟುಂಬದ ಒಟ್ಟು 19 ಮಂದಿ ಸದಸ್ಯರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ಹಾಗೆಯೇ 94 ಸಿ ಹಕ್ಕು ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗಿದ್ದು, ಬೈಂದೂರಿನಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವುದರ ಜೊತೆಗೆ ಸಮಗ್ರ ಅಭಿವೃದ್ಧಿಯ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಶಂಕರ ಪೂಜಾರಿ, ಸುರೇಶ ಬಟ್ವಾಡಿ, ಇಲಾಖೆಯ ಸಿಬ್ಬಂದಿಗಳು ,ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಸ್ವಾಗತಿಸಿದರು. ಮಹಿಮಾ ಹೆಗ್ಡೆ ಕೆ. ಕಾರ್ಯಕ್ರಮ ನಿರ್ವಹಿಸಿದರು.











